ಕರಿಸು ಬೇಗಿಲ್ಲಿಗೆ ಹರಿಯೆ ನಿನ್ನವರ
ಅರಸಿಕ ದೇಶದಿ ಬಳಲಿಕೊಂಡಿಹನ ಪ.
ಸರ್ವಜ್ಞ ನಿನಗರಿಪುವದೇಸು ವಿವರ
ಸರ್ವ ಪ್ರಕಾರದಿ ಕಾವೆ ನಿನ್ನವರ
ಪೂರ್ವದಂದದಿ ಪರಿಚಾರಕ ಜನರ
ಇರ್ವಲ್ಲಿ ತಂದು ಕೂಡಿಸು ದೇವ ಪ್ರವರ 1
ವೇಳೆ ವೇಳೆ ನಿನ್ನ ಪೂಜಾದಿಗಳನು
ತಾಳ ಮೃದಂಗಾದಿ ಸನ್ನಹಗಳನು
ಮೇಳೈಸಿ ಕೀರ್ತನೆಗೈವ ದಾಸನನು
ನಾಳೆ ನಾಡದು ಎಂದು ತಾತ್ಸಾರ ಮಾಡದೆ 2
ಶಕ್ತಿಹೀನ ನಾನೆಂಬುದ ಬಲ್ಲೆ ನೀನು
ಭಕ್ತವತ್ಸಲ ನೀನೆಂದರಿತು ನಂಬಿಹೆನು
ನಿತ್ಯ ಚಿಂತನೆಯನು ತಪ್ಪಿಸು ಸುರಧೇನು
ಶಕ್ತ ವೆಂಕಟರಾಜ ಸಂಶಯವಿನ್ನೇನು 3