ಗರುವವು ನಿನಗ್ಯಾಕೆಲೋ ಎಲೋ
ಜರ ನಾಚಿಕೆ ಬಾರದೇನೆಲೋ ಎಲೋ ಪ
ಮರುಳನೆ ನಿನಗೀಪರಿ ಗರುವ್ಯಾತಕೋ
ಅರಿತು ನೋಡ್ಹಿರಿಯರನೆಲೋ ಎಲೋ ಅ.ಪ
ಘನತೆಲೊಸಿಷ್ಠನೇನೆಲೋ ಎಲೋ
ಜನಕ ಭಾಗ್ಯದೊಳೆಲೋ ಎಲೋ
ಮನುಗಳಲ್ವ್ಯಾಸನೇನೆಲೋ ಎಲೋ ನೀ
ಮುನಿಗಳೋಳ್ಯುಕನೇನೆಲೋ ಎಲೋ
ಮನೆತನದಲಿ ಘನದಶರಥನೆ
ದಿನಮಣಿಯೆ ನೀ ಪ್ರಭೆಯೋಳೆಲೋ ಎಲೋ 1
ಧುರದಿ ಕಾರ್ತರ್ವ್ಯನೇನೆಲೋ ಎಲೋ ನೀ
ನರಿವಿನೋಳ್ಪ್ರಹ್ಲಾದನೇನೆಲೋ ಎಲೋ
ವಿರಸದಿ ರಾವಣನೇನೆಲೋ ಎಲೋ ನೀ
ಸ್ಥಿರತನದ್ವಿಭೀಷಣನೇನೆಲೋ ಎಲೋ
ಹರಿ ಒಲುಮೆಲಿವರ ಅಗಸ್ತ್ಯನೇನು
ಸುರ ಗುರುವೇ ನೀ ಮತಿಯೋಳೆಲೋ ಎಲೋ 2
ತ್ರಾಣದಿ ವಾಲಿಯೇನಲೋ ಎಲೋ ನೀ
ಜಾಣರೋಳ್ಬಲಿಯೇನೆಲೋ ಎಲೋ
ಜ್ಞಾನದಿ ವಾಲ್ಮೀಕಿಯೇನೆಲೋ ಎಲೋ ನೀ
ಗಾನದಿ ನಾರದನೇನೆಲೋ ಎಲೋ
ದಾನದೊಳಗೆ ಹರಿಶ್ಚಂದ್ರನೇನೋ ನಿ
ಧಾನದಿ ನಳನೇನೆಲೋ ಎಲೋ 3
ಪದವಿಯೊಳ್ಧ್ರುವನೇನೆಲೋ ಎಲೋ ನೀ
ನಿಧಿಯೋಳ್ಕುಬೇರನೆಲೋ ಎಲೋ
ಮದನನೆ ಪುರುಷರೋಳೆಲೋ ಎಲೋ ವರ
ಮದದಿ ಕಶ್ಯಪನೇನೆಲೋ ಎಲೋ
ಸದಮಲ ಕುಲದಲಿ ಗೌತಮ ಮುನಿಯೇ ನೀ
ಕದನದಿ ಕುರುಪನೇನಲೋ ಎಲೋ 4
ನುಡಿವಲಿ ನರನೇನೆಲೋ ಎಲೋ ನೀ
ಕೊಡುವಲಿ ಕರ್ಣನೇನೆಲೋ ಎಲೋ
ಇಡುವಲಿ ಧರ್ಮನೇನಲೋ ಎಲೋ ನೀ
ಕೆಡುಕಲಿ ಶಕುನಿಯೇನೆಲೋ ಎಲೋ
ಕಡುಗಲಿತನದಲಿ ಕಲಿಭೀಮನೇ
ಸಡಗರದಿಂದ್ರನೇನೆಲೋ ಎಲೋ 5
ಯುಕ್ತಿಲಿ ದ್ರೋಣನೇನೆಲೋ ಎಲೋ ನೀ
ಶಕ್ತಿಲಿ ನಕುಲನೇನೆಲೋ ಎಲೋ
ಭಕ್ತಿಲ್ವಿದುರನೇನೆಲೋ ಎಲೋ ನೀ
ವೃತ್ತಿಲಿ ಸಹದೇನವನೇನೆಲೋ ಎಲೋ
ಚಿತ್ತಶುದ್ಧಿಯಲಿ ವೀರ ಸುಧನ್ವನೆ
ತೃಪ್ತಿಲಿ ಭೀಷ್ಮನೇನೆಲೋ ಎಲೋ 6
ದಿಟ್ಟರೋಳ್ಗರುಡನೇ ನೆಲೋ ಎಲೋ ನೀ
ಶಿಷ್ಟರೋಳ್ಹನುಮನೇನೆಲೋ ಎಲೋ
ಸೃಷ್ಟಿಯೋಳಾರನ್ಹೋಲ್ವೆಲೋ ಎಲೋ ನೀ
ಭ್ರಷ್ಟನಾಗುವಿ ಯಾಕೆಲೋ ಎಲೋ
ಬಿಟ್ಟುಗರ್ವಮಂ ಶಿಷ್ಟಶ್ರೀರಾಮನ
ಮುಟ್ಟಿಭಜಿಸಿ ಉಳಿಯೆಲೋ ಎಲೋ 7