ಯಾಕಿಂತುಪೇಕ್ಷಿಸುವಿ ಪರಮ ಕರು-
ಣಾಕರ ಶಿಕ್ಷಿಸುವಿ ಪ.
ಹಿಂದಿನಾಪತ್ತುಗಳ ಸಮಯದಿ ನೀ
ಬಂದೆನ್ನ ಕಾಯ್ದುದಿಲ್ಲವೆ
ತಂದೆ ನೀನೆಂದು ನಂಬಿದ ಮೇಲೆನ್ನ ನೀನು
ಇಂದಿಂತುಪೇಕ್ಷಿಪುದೆ 1
ಭವರೋಗಹಾರಿ ನಿನ್ನ ಭಕ್ತನಿಗಿಂಥ
ಭವಣೆಯು ನಿಲುವುದುಂಟೆ
ಕವಿ ಸನಕಾದ್ಯರಂತೆ ದೈಹಿಕ ದು:ಖ
ಸಹಿಸಲು ಶಕ್ತಿಯುಂಟೆ 2
ಸೈರಿಸಲಾರೆ ಇನ್ನು ವೇದನೆಯಾ
ಶೌರೀ ನೀ ದಯದೋರಿನ್ನು
ಬರಗರಸಮಂಡನ ಕೃಪಾಕಟಾಕ್ಷ
ದೋರೊ ಸುರಾರಿಖಂಡನ 3