ಶ್ರೀನಿಕೇತನ ಲಕ್ಷ್ಮೀ ಕಾಂತನ ಪದಪದ್ಮ
ಧ್ಯಾನ ಮಾಡುತ ಎನ್ನ ಸ್ಥಿತಿಯ
ದೀನಭಾವನೆಯಿಂದಲೊರೆವೆನು ಗುರುಪವ
ಮಾನ ಪಾಲಿಸಲಿ ಸನ್ಮತಿಯ ಪ.
ತಾನು ತನ್ನದೆಂಬ ಹೀನ ಭಾವನೆಯಿಂದ
ನಾನಾ ಯೋನಿಗಳಲ್ಲಿ ಚರಿಸಿ
ಮಾನವ ಜನ್ಮವನೆತ್ತಲು ಮುಂದಾದ-
ದೇನೆಂಬೆ ಗರ್ಭದೊಳುದಿಸಿ 1
ಮಾತಾಪಿತರುಗಳು ಮೋಹದಿ ರಮಿಸಲು
ಕೇತ ತತಿಗೆ ಸರಿಯಾಗಿ
ಆತು ಬಂದಿಹೆನು ಗರ್ಭದಿ ಮೆಲು ನರ
ವ್ರಾತ ಬಂಧಕೆ ಗುರಿಯಾಗಿ 2
ಸೇರಿದ ಕ್ರಿಮಿ ಪರಿವಾರ ಕಚ್ಚುತಲಿರೆ
ಚೀರಲಾದರು ಶಕ್ತಿಯಿರದೆ
ಭಾರ ವಸ್ತುವು ಕಣ್ಣಸಾರವು ತಡೆಯದೆ
ಗಾರುಗೊಂಡೆನು ಗರ್ಭದೊಳಗೆ 3
ಮೂರರಾ ಮೇಲೆ ಮತ್ತಾರುಮಾಸಗಳಿಂತು
ಭಾರಿ ಭವಣೆಗೊಂಡು ಕಡೆಗೆ
ಭೋರನೆ ಭೂಮಿಗೆ ದೂರಿ ಬಂದೆನು ಮಲ
ಧಾರೆಯಾ ಕೂಡಿ ಮೈಯೊಳಗೆ 4
ಹೇಸಿಗೆ ಮಲಮೂತ್ರ ರಾಶಿಯ ಒಳಗೆ ದು-
ರ್ವಾಸನೆ ಬರುವ ಗೆರಸಿಯ
ಹಾಸಿಗೆ ಒಳಗೆ ಹಾಕಿರುತಿರೆ ದೇಹದ
ಲೇಶ ಸ್ವಾತಂತ್ರ್ಯವೇನಿರದೆ 5
ಮೂಸಿ ಮುತ್ತುವ ನುಸಿಮುತ್ಕುಣ ಬಾಧೆಗೆ
ಘಾಸಿಗೊಳುತ ಬಾಯ ತೆರದೆ
ದೋಷ ಶಂಕಿಸಿ ಮೈಯೊಳಿಕ್ಕಿದ ಬರೆಗಳ
ಬಾಸಲೆಯುನು ತಾಳ್ದೆ ಬರಿದೆ 6
ನಾಲ್ಕು ಕಾಲುಗಳಿಂದ ನಾಯಿಗೆ ಪರಿಯಾಗಿ
ಸೋಕಿದೆ ಸರ್ವತ್ರ ತಿರುಗಿ
ಸಾಕುವ ಜನರೆಡಬಲಗಾಲ ತುದಿಯಿಂದ
ದೂಕಿದರಲ್ಲಿಯೆ ಸುಳಿದೆ 7
ವಾಕುಗಳೆಂಬ ಕೂರಂಬನು ಸಹಿಸಿ ಪ-
ರಾಕೆಂದು ಪರರ ಸೇವಿಸಿದೆ
ಮಾಕಳತ್ರನೆ ನಿನ್ನ ಕೃಪೆಯಾದ ಬಳಿಕ ಮೋ-
ಹಾಕಾರ ಮಡುವಿನೊಳಿಳಿದೆ 8
ಈಗಲಾದರು ದೇಹ ಭೋಗವೆ ಬಯಸುತ
ನೀಗಿದೆ ವ್ರತ ನೇಮಾದಿಗಳ
ಸಾಗದ ಫಲ ತನಗಾಗಬೇಕೆಂಬ ಮ-
ನೋಗತಿಯಿಂದ ಕರ್ಮಗಳ 9
ಮೂಗಭಾವನೆಯನ್ನು ನೀಗದೆನಿಸಿ ಮುಂ-
ದಾಗಿಯಾಡುವೆ ಮಥನಗಳ
ಕಾಗೆಯು ಕುಂಭದ ಜಲ ಕುಕ್ಕುವಂತೆ ಬೆಂ-
ಡಾಗಿ ಕೊಂಡೆನು ಝಗಳಗಳ 10
ಕಂತುಜನಕ ಕಂಜನಾಭ ವೆಂಕಟರಾಜ
ಚಿಂತಾಮಣಿ ಸುರತರುವೆ
ಎಂತಾದರು ನಿನ್ನ ದಾಸ್ಯ ಸೇರಿದ ಮೇಲೆ
ಇಂತುಪೇಕ್ಷಿಸುವುದು ಥರವೆ 11
ಭ್ರಾಂತಿ ಎಂಬುದ ಬಿಡಿಸಿನ್ನಾದರು ಲಕ್ಷ್ಮೀ
ಕಾಂತ ಕಾರುಣ್ಯ ವಾರುಧಿಯೆ
ಚಿಂತಿತದಾಯಿ ಎನ್ನಂತರಂಗದಿ ಬೇಗ
ನಿತ್ಯ ವಿಧಿಯೆ 12