ನಾರಾಯಣ ನರಹರಿ ನಾರದಪ್ರಿಯ
ನರಸುರಮುನಿ ವರದಾಯಕ ಧ್ರುವ
ವೇದ ಕದ್ದೊಯ್ದವನ ಮರ್ದಿಸಲಿಕ್ಕೆ
ಸಾಧಿಸಿ ಬಂದ್ಯೊ ಮಚ್ಛರೂಪನೆ
ಮಾಧವ ನೀ ಬಂದು ಕೂರ್ಮನಾಗಿ ನಿಂದು
ಮೇದಿನಿಯ ಭಾರವ ತಾಳಿದೆ 1
ಧರೆಯ ಕದ್ದಸುರನ ಕೋರದಾಡಿಂದ ಸೀಳಿ
ವರಾಹರೂಪಬಂದು ದೋರಿದೆ
ಹಿರಣ್ಯಕಶ್ಯಪ ವಿದಾರಣ ಮಾಡಿ ನೀ
ತರಳ ಪ್ರಲ್ಹಾದನ ರಕ್ಷಿಸಿದೆ 2
ವಾಮನ ರೂಪವದೋರಿದೆ
ನೇಮದಿಂದಲಿ ಪಿತನಾಜ್ಞೆಯ ನಡೆಸಲು
ಸ್ವಾಮಿ ಭಾರ್ಗವರೂಪ ತಾಳಿದೆ 3
ದೇವತೆಗಳ ಸ್ಥಾಪಿಸಲಿಕ್ಕೆ ಬಂದು ದೈತ್ಯ
ರಾವಣನ ಕೊಂದ್ಯೊ ಶ್ರೀರಾಮ ನೀ
ದೇವಕಿ ಉದರದಲಿ ಜನಿಸಿ ಬಂದು ಕೃಷ್ಣ
ಗೋವಳರನ್ನು ಪ್ರತಿಪಾಲಿಸಿದೆ 4
ಪತಿವ್ರತೆಗಳ ವ್ರತ ಅಳಿಯಲಿಕ್ಕಾಗಿ ಬಂದು
ಸುಳಹುದೋರಿದೂ ಬೌದ್ದ್ಯರೂಪನೆ
ಹತ್ತಿ ಕುದರಿಯ ಒತ್ತಿ ಆಳಲಿಕ್ಕೆ
ಮತ್ತೆ ಬಂದೆಯ ಕಲ್ಕಿರೂಪನೆ 5
ಹತ್ತವತಾರ ಧರಿಸಿ ಬಂದು ಕ್ಷಿತಿಯೊಳ
ಪತಿತರ ಪಾವನಗೈಸಿದೆ
ಭಕ್ತಜನರುದ್ದರಿಸಲಿಕ್ಕೆ ಬಂದು
ಶಕ್ತಿಪರಾಕ್ರಮದೋರಿದೆ 6
ಸಾವಿರ ನಾಮದೊಡೆಯ ಸ್ವಾಮಿ ನೀ ಬಂದು
ಭಾವಿಸುವರೊಡನೆ ಕೂಡಿದೆ
ಭವಭಂಧನ ತಾರಿಸಿ ಮಹಿಪತಿಯ ಪ್ರಾಣ
ಪಾವನ ನೀ ಮಾಡಿದೆ 7