ಬೇಗನೆ ಬಾರೊ ಶ್ರೀ ಹರಿಯನೆ ತೊರೋ
ಶ್ರೀ ಗುರುವೇ ದಯದಿ ಪ.
ಬೇಗನೆ ಬಾರೊ ಯೊಗಿಗಳೊಡೆಯ
ನಾಗಶಯನ ಪ್ರೀತ ತ್ವರಿತದಿ ಅ.ಪ.
ಭಕ್ತರೆಲ್ಲರು ನಿಮ್ಮ ದಾರಿಯನೆ ನೋಡುತಾ-
ಸಕ್ತಿಯಿಂದಿರುತಿಹರೊ
ಮೋದ ಗುರುವೆ ನಿಮ್ಮ
ಶಕ್ತಿಗೆ ಎದುರ್ಯಾರೊ ಧರೆಯೊಳು 1
ಕಾಣದೆ ಕಂಗಳು ಕಾತರಗೊಳ್ಳುತ
ತ್ರಾಣಗೆಡುತಲಿಹವೊ
ಪ್ರಾಣವ ರಕ್ಷಿಪ ಪ್ರಾಣಪತಿಯ ಪ್ರಿಯ
ಕಾಣೆ ನಾನನ್ಯರನಾ ಜಗದೊಳು 2
ಪರಮಪ್ರಿಯರು ಎಂದು ಪರಮ ಬಿರುದು ಪೊಂದಿ
ಪರಮಾತ್ಮನನು ಕಂಡು
ಪರಮಾತ್ಮ ತತ್ವ ಪರಮಯೊಗ್ಯರಿಗರುಹಿ
ದುರಿತ ತ್ವರಿತದಿ 3
ಕಮಲಾಕ್ಷನನು ಹೃತ್ಕಮಲದಲಿ ಕಾಂಬ
ಕಮಲಾಪ್ತ ಅತಿ ಪ್ರೀತ
ಕಮಲಸಂಭವಪಿತ ಕಮಲಾಕ್ಷ ಹರಿಯ ಹೃ
ತ್ಕಮಲದಲಿ ತೋರೋ ಗುರುವರ 4
ಗೋಪಾಲಕೃಷ್ಣವಿಠ್ಠಲನ ಸೌಂದರ್ಯದ
ರೂಪವೆನಗೆ ತೋರೊ
ತಾಪವ ಹರಿಸುತ ಕಾಪಾಡಬೇಕೆಂದು
ನಾ ಪ್ರಾರ್ಥಿಸುವೆ ಗುರುವೆ ತ್ವರಿತದಿ 5