ಕಾಯಬೇಕೆನ್ನ ಕರುಣದಲಿ ಧನ್ವಂತ್ರಿ
ಶ್ರೀಯರಸ ನರಹರಿಯೆ ಪ್ರಾರ್ಥಿಸುವೆ ನಿನ್ನ ಪ.
ಸುರರಿಗೆ ಮರಣ ಕಾಲವು ಪ್ರಾಪ್ತವಾಗಲು
ಗಿರಿಯಿಂದ ಶರಧಿಯನು ಮಥಿಸೆ ಪೇಳಿ
ಕರುಣದಿಂದಮೃತ ಕರದಿಂದ ಸುರರಿಗೆ ಎರೆದು
ಜರೆ ಮೃತ್ಯು ಬಿಡಿಸಿದಗೆ ಇದು ಒಂದು ಘನವೆ 1
ಸಕಲ ನಾಡಿಗಳಲ್ಲಿ ಚೇಷ್ಟಪ್ರದ ನೀನಾಗಿ
ಸಕಲ ವ್ಯಾಪಾರಗಳ ನಡೆಸುತಿರಲು
ಯುಕುತಿಯಿಂದಲಿ ನಾಡಿ ನೋಡಿ ತಿಳಿಯುವನ್ಯಾರೊ
ಮುಕುತಿದಾಯಕ ನಿನಗೆ ಇದು ಒಂದು ಘನವೆ 2
ಅನಾದಿಯಿಂದ ಅಪಥ್ಯದಲಿ ನರಳುವೆನೊ
ಈಗ ಪಥ್ಯವ ಮಾಳ್ಪ ಬಗೆ ಯಾವುದೊ
ಶ್ರೀನಿವಾಸನೆ ನಿನ್ನ ಧ್ಯಾನವೆ ಔಷಧವೊ
ಶ್ರೀ ಗುರುಗಳಾಜ್ಞೆಯೆ ಪಥ್ಯವೆನಗಿನ್ನು 3
ಭಕ್ತಪ್ರಹ್ಲಾದನನು ಯುಕ್ತಿ ಶಕ್ತಿಗಳಿಂದ
ಮುಕ್ತಿಮಾರ್ಗವ ತೋರಿ ಸಲಹಲಿಲ್ಲೇ
ಭಕ್ತಿಹೀನರನೆ ಕಂಡು ಎನ್ನ ರಕ್ಷಿಸದಿರಲು
ಯುಕ್ತವೇ ನಿನಗಿನ್ನು ಭಕ್ತಪಾಲಕನೆ 4
ನಿನ್ನ ದಾಸತ್ವದಲಿ ನೆಲಸಬೇಕಾದರೆ
ಬಿನ್ನಣದ ರೋಗಗಳ ಪರಿಹರಿಸಿ ಸಲಹೊ
ನಿನ್ನವರಾದ ಮೇಲಿನ್ನು ಕಾಯದೆ ಇಹರೆ
ಘನ್ನ ಶ್ರೀ ಗೋಪಾಲಕೃಷ್ಣವಿಠ್ಠಲನೆ 5