ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುರಳಿಯಧರ ಶ್ರೀ ಕೃಷ್ಣನ ನೋಡಲು ಏನೋ ಸಂತೋಷ ಏನೋ ವಿನೋದ ಪ ಹರಿವಳು ಯಮುನೆಯು ಮೆಲ್ಲನೆ ನೋಡಲು ಗೋವಿಂದನನು ಪರಮಾನಂದದಿ ಅ.ಪ ಕೊಳಲೂದಲು ಶ್ರೀಕೃಷ್ಣನು ನಾದದ ಸುಳಿ ಬಾಡುವುದೆಂಬುವ ಭೀತಿಯಲಿ ಜಲ ಮೂಲನು ಬೆಳದಿಂಗಳ ಕರಗಳ ತಳಿರುಗಳಿಂದಲಿ ತಳ ಸೇರಿಸುವ 1 ಶರಧಿ ತರಂಗಗಳೆದ್ದವು ರಂಗನ್ನ ವದನ ಶಕಾಂಕನ್ನ ನೋಡಿ ಅಂಗನೆಯರು ತಮ್ಮಂಗಗಳಲಿ ಭಂಗವ ಪಡೆದರನಂಗನ ಶರದಿ 2 ಭುವನವ ತುಂಬಿತು ಗಗನವು ತುಂಬಿತು ದಿವಿಜರ ಲೋಕಗಳೆಲ್ಲವು ತುಂಬಿತು ಕವಿಗಳು ಬೆರಗಾದರು ವರ್ಣಿಸಲೀ ಸವಿ ಮುರುಳಿಯು ನಾದದ ಪ್ರವಹನನು 3 ತುರುಗಳ ಪಯಧರ ಸ್ರವಿಸಿತು ಕ್ಷೀರವ ಕರೆದರು ಮೋದದ ಕಂಬನಿಯೆಲ್ಲರು ಮರೆತರು ನರಲೋಕದ ಮಂದಿಗಳು ಅರಿತು ಮೋಕ್ಷದ ಸುಖವೆಂತೆಂಬುದ 4 ಈಶನು ಕೈಲಾಸದಲಿ ಕುಣಿದನು ಶೇಷನು ಸಾಸಿರ ಫಣಿಗಳನಾಡಿದ ದೋಷರಹಿತ ವಾಣೀಶನ ವದನ ವಿ ಕಾಸವು ಬೆಳಗಿತು ನಾಕು ದಿಕ್ಕುಗಳ 5 ಆ ಸಮಯವ ಇತಿಹಾಸಗಳಲಿ ಕವಿ ವ್ಯಾಸರಿಗಲ್ಲದೆ ವರ್ಣಿಸಲಳವೆ ಭಾಸುರ ಸುಂದರ ವದನ ಪ್ರಸನ್ನನು ರಾಸಕ್ರೀಡೆಯ ರಸವನು ಹರಿಸುತ 6
--------------
ವಿದ್ಯಾಪ್ರಸನ್ನತೀರ್ಥರು