ಬೋಧದ ಘನಮಳೆಯುಸುರಿದು
ಮುಕುತಿಬೆಳೆಯು ಬಂದುದು ಪ
ಮಾಯೆಯ ಬಲು ಬಿಸಿಲುತಾಪ
ಕಾಯದೊಳಗೆ ಹೆಚ್ಚುತಿರಲು
ಹೇಯವೆನಿಸಿ ಜನನಮರಣ
ಮುಮುಕ್ಷುತ್ವ ಮೋಡಗವಿದು 1
ಸುವಿಚಾರದ ಮಿಂಚು ಹೊಳೆದು
ಶ್ರುತಿಶಿರಗಳ ಗುಡುಗು ಹೊಡೆದು
ಶ್ರವಣದ ಸುಳಿಗಾಳಿ ಬೀಸಿ
ಭವತಾಪವ ಹರಿಸುತಿರಲು 2
ವೈರಾಗ್ಯದ ರಂಟೆ ಹೊಡೆದು
ಶಮೆದಮೆಗಳ ಹರತೆಯಾಗಿ
ಪರಮಾರ್ಥದ ಬೀಜ ಬಿದ್ದ
ನರಜನ್ಮದ ಹೊಲದ ಮೇಲೆ 3
ದೃಷ್ಟಿಯೊಳಗಿನಾನಂದ
ಸೃಷ್ಟಿಯಾಗಿ ತೋರಿ ಚಂದ
ಶ್ರೇಷ್ಠನಾದ ಶಂಕರಗುರುವರನ ಸಹಜಕರುಣೆಯಿಂದ 4