ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಿಗಿರೀಶ ನಿನ್ನ ಬೇಡುವೆನೀಗ ಪರಿಪಾಲಿಸೊ ಸತತ ಪ. ನರಹರಿ ಭಕ್ತರ ಪೊರೆಯುವೆ ನೀನೆಂ- ಇಂದು ಅ.ಪ. ನಾರಸಿಂಹ ನಿನ್ನ ಸಾರಿ ಭಜಿಸುವೆನು ತೋರೊ ನಿನ್ನ ಪದವ ಬಾರಿಬಾರಿಗೆ ಸ್ತುತಿಸಲು ಬಾಲನು ಘೋರ ದೈತ್ಯನ ಸೀಳಿ ಪೊರೆದೆಯೊ 1 ಶೇಷಾಂತರ್ಗತ ನಾರಸಿಂಹ ವಿ- ಶೇಷ ಮಹಿಮೆ ತೋರೊ ಶೇಷಶಯನ ಮಹರುದ್ರಾಂತರ್ಗತ ಪೋಷಿಸೊ ಭಕ್ತರ ಶಾಂತರೂಪದಿ 2 ಲೀಲೆಯಿಂದ ಶ್ರೀ ಲಕುಮಿ ಹಿತದಿ ವ್ಯಾಳಶಯನನಾಗಿ ಪಾಲಿಸಬೇಕೆನ್ನನು ಸತತದಿ ಗೋ- ಪಾಲಕೃಷ್ಣವಿಠ್ಠಲ ನೀ ದಯದಿ 3
--------------
ಅಂಬಾಬಾಯಿ
ಧನ್ಯ ಧನ್ಯ ಧನ್ಯ ಧನ್ಯ ಗುರುವರಾ ಧನ್ಯ ತಂದೆ ಮುದ್ದುಮೋಹನ್ನ ಗುರುವರಾ ಪ. ಮಾನ್ಯ ವಿಭುದ ಮಾನ್ಯ ಜಗದ್ಮಾನ್ಯ ಗುರುವರಾ ಅ.ಪ. ಪುಟ್ಟಿದಂದಿನಿಂದಿನ್ವರೆಗೆ ತೊಟ್ಟು ದಾಸತ್ವ ದೀಕ್ಷೆ ಕರ್ಮ ಜಪತಪಂಗಳಾ ಕರ್ಮ ಮಾಡಿ ಮುಗಿಸಿ ಶ್ರೇಷ್ಠ ಜ್ಞಾನ ಕವಚ ತೊಟ್ಟು ದಿಟ್ಟತನದಿ ಮೆರೆದ ಗುರುವು ಮುಟ್ಟಿದರೀಗ ಹರಿಯ ಪುರವ 1 ಭಕ್ತಿ ಭೂಷಣ ತೊಟ್ಟು ವಿರಕ್ತಿ ಖಡ್ಗ ವರೆಯಲ್ಲಿಟ್ಟು ಮುಕ್ತಿ ಮಾರ್ಗಕೆಲ್ಲ ದೀಕ್ಷೆ ಇತ್ತು ಸುಜನಕೆ ವ್ಯಕ್ತಾವ್ಯಕ್ತ ಮಹಿಮೆಯಿಂದ ವ್ಯಕ್ತಿತ್ವವನು ತೋರಿಕೊಳದೆ ಉಕ್ತಿಗೊಶರಮಾಡಿಕೊಂಡ ಶಕ್ತಿ ಪೇಳಲಳವೆ ಎನಗೆ 2 ಕರ್ಮ ಕುರುಹನರುಹಿ ನಮ್ಮ ಮಧ್ವಮತಕೆ ದಿವ್ಯ ಸಮ್ಮತವಾಗಿ ವಮ್ಮನದ ಸುಜ್ಞಾನ ಬೆಳಕು ತಮ್ಮ ನಂಬಿದರಿಗೆ ತೋರಿ ಬÉೂಮ್ಮನೈಯ್ಯನ ಪುರಕೆ ಸಾರ್ದ ನಮ್ಮ ಗುರುವರಾ 3 ದಾಸಕೂಟ ಸಭಾಸ್ಥಳದಿ ದಾಸ ಪ್ರಾಣರಾಯನ ನಿಲಿಸಿ ದಾಸಜನಕೆ ಮುಕ್ತಿ ಸ್ಥಾನ ಕರಿಗಿರಿ ಎನಿಸಿ ವ್ಯಾಸತೀರ್ಥರಿಂದ ಬಂದ ದಾಸಕೂಟ ನಿಜವೆಂದೆನಿಸಿ ದಾಸಜನರ ಮೆರಸಿ ನೃಹರಿ ದಾಸಕೂಟ ಸಭಾಸ್ಥಾಪಕ 4 ವ್ಯಾಳಶಯನನಾದ ಗೋಪಾಲಕೃಷ್ಣವಿಠ್ಠಲನ್ನ ಲೀಲೆಯಿಂದ ಯನ್ನ ಹೃದಯದಲ್ಲಿ ನಿಲ್ಲಿಸೀ ಕಾಲ ಕಾಲಕ್ಕೆ ಇತ್ತು ಪಾಲಿಸಿದಾ ಪರಮ ಪ್ರಿಯ ಕೃಪಾಳೂ ಗುರುವರಾ 5
--------------
ಅಂಬಾಬಾಯಿ
ನೀನು ನಾನು ಸಮನೆಂತಹೆವು ಕಾಣೆನ್ಯಯ್ಯಾ ಪ ಮಾನವ ರಕ್ಕಸ ಜನರ ಕುತರ್ಕವದೇನೊ ಅ.ಪ. ಹದಿನಾಲ್ಕು ಲೋಕಗಳನು ಪೊರೆವ ದಾತನು ನೀನು ಉದರಕಾಗಿ ಅಂಡಲೆವ ತಿಂಡಿಪೋತನು ನಾನು ಮಧುರ ರಕ್ಕಸನ ಸೀಳ್ದ ಘನ ಪರಾಕ್ರಮಿ ನೀನು ಸುದತಿ ಗದರಿಸಲು ಗದಗದ ನಡುಗುವೆ ನಾನು 1 ವ್ಯಾಳಶಯನನಾಗಿ ಸುಖದಿ ನಿದ್ರಿಸುವೆ ನೀನು ಚೇಳು ಕುಟುಕಲು ಬಾಯ್ಬಡುಕೊಂಬುವೆನು ನಾನು ನಿತ್ಯ ತೃಪ್ತನು ನೀನು ಕೂಳಿಲ್ಲದಿರೆ ಮೇಲಕೇಳಲಾರೆನೊ ನಾನು 2 ಸರ್ವಜ್ಞನಾದ ರಂಗೇಶವಿಠಲ ನೀನು ಗರ್ವಿಷ್ಟನಾದ ಮಹಾಜ್ಞಾನಿಯು ನಾನು ಶರ್ವಾದಿಗಳಿಂದ ಸ್ತುತ್ಯನಾದವ ನೀನು ಉರ್ವಿಯೊಳು ಸರ್ವರಿಂದ ನಿಂದಿತನು ನಾನು 3
--------------
ರಂಗೇಶವಿಠಲದಾಸರು
ಪೇಳಲೇನು ವಿಧಿಯ ಲೀಲೆಯ ಮಹಿಮೆ ಪ ವ್ಯಾಳಶಯನನ ಸಂಕಲ್ಪದಂತಿಹುದು ಅ.ಪ. ಮೂರ್ತಿ ನೋಡುವ ಕಂಗಳು ಅಂಗನೆಯರ ರೂಪ ನೋಡಲೆಳಸಿದವು 1 ಶ್ರೀ ರಮಣನ ಕಥೆ ಕೇಳುವ ಕರ್ಣಗಳು ವಾರನಾರಿಯರ ವಾರ್ತೆಗೆ ಸೋತವು 2 ಮಂಧರಧರನ ನಿರ್ಮಾಲ್ಯವನೊಲ್ಲದೆ ಸುಂದರಿಯರ ಮೈ ಗಂಧ ಬಯಸಿತು ಘ್ರಾಣ 3 ಹರಿಯ ಪ್ರಸಾದವು ಭುಜಿಸದೆ ಜಿಹ್ವೆಯು ಪರಮ ನಿಷಿದ್ಧ ಪಾನ ಭೋಜನ ಬಯಸಿತು 4 ರಂಗನ ಭಕ್ತರ ಸಂಗವ ಬಿಟ್ಟು ಸ್ಪರ್ಶ ಅಂಗನೆಯ ದೇಹಾಲಿಂಗನ ಬಯಸಿತು 5 ಶ್ರೀನಿಕೇತನ ನಾಮ ನುಡಿಯುವ ನಾಲಿಗೆ ದೀನ ಕಾಮಾತುರ ನುಡಿಯಲಿ ನಲಿಯಿತು 6 ಪಾದ ಸ್ಮರಣೆಯ ಬಿಟ್ಟಾ ಮನ ತರುಣಿಯರು ಸದಾ ನೆನೆಸಿತು ಅಕಟಾ 7
--------------
ವರಾವಾಣಿರಾಮರಾಯದಾಸರು
ಶ್ರೀಕರಾರ್ಚಿತ ರಂಗನಾಥ ಜಗದೇಕನಾಥ ಪ. ಪಾಕಶಾಸನವಂದ್ಯ ಪರಮ ಕಾರುಣ್ಯನಿಧಿ ಜೋಕೆಯಿಂ ಭಕ್ತರನು ರಕ್ಷಿಸಲು ಬಂದೆಯೊ ಅ.ಪ. ಸಿರಿ ಆಲದೆಲೆಯ ಮೇ- ಲೊಂದು ಬೆರಳನೆ ಚೀಪುತ ಮುಂದೆ ಶೇಷಶಯನನಾಗಿ ಬ್ರಹ್ಮನ ಪಡೆದು ಮಂದಹಾಸದಿ ನಲಿಯುತ ಇಂದಿರೆ ಸಹಿತಲಿರೆ ಭಕ್ತರೆಲ್ಲರು ಆಗ ನೋಡಲಿಲ್ಲೆಂದೆನುತ ಇಂದು ಈ ನಾಗರಾಜನ ಮಂಚವನೆ ಏರಿ ಸಿಂಧುಶಯನನೆ ಮಲಗಿದ್ಯಾ ಸ್ವಾಮಿ 1 ಅಜಗೆ ವೇದವನಿತ್ತು ಅಸುರನ್ನ ಕೊಂದು ನೀ ಭುಜಗಶಯನನೆ ಮಲಗಿದ್ಯಾ ಋಜುಗಣವಂದಿತನೆ ಬೆನ್ನಲಿ ಗಿರಿಪೊತ್ತ ಆಯಾಸದಿಂ ಮಲಗಿದ್ಯಾ ದ್ವಿಜಧ್ವಜನೆ ಭೂಮಿಯನು ಮೇಲೆತ್ತಿ ತಂದು ಸಾಕಾಗಿಲ್ಲಿ ಶಯನಿಸಿದೆಯಾ ಭಜಿಸಿದ ಬಾಲಕನ ಪಿತನೊಡನೆ ಕಾದಾಡಿ ಬಳಲಿ ನೀ ಪವಡಿಸಿದೆಯಾ ಸ್ವಾಮಿ 2 ಇಂದ್ರ ಪದವಿಗೆ ಬಂದ ಬಲೀಂದ್ರನ ನೆಲಕೊತ್ತಿ ಬಂದಿಲ್ಲಿ ಮಲಗಿಪ್ಪೆಯಾ ಕೊಂದು ಜನನಿಯ ಚಿಂತೆಯಿಂದ ಮನದಿನೊಂದು ಬಂದಿಲ್ಲಿ ಮಲಗಿಪ್ಪೆಯಾ ತಂದೆ ತಾಯಿ ಆಜ್ಞೆಯಿಂದ ಅಡವಿಯ ಅಲೆದು ಬಂದಿಲ್ಲಿ ಮಲಗಿಪ್ಪೆಯಾ ಮಂದರೋದ್ಧರ ಶ್ರೀಶ ಮಾವನ್ನ ಕೊಂದು ನೀ ಬಂದಿಲ್ಲಿ ಪವಡಿಸಿದೆಯಾ ಸ್ವಾಮಿ 3 ನಾರಿಯರ ವ್ರತ ಕೆಡಿಸಿ ನಾಚಿಕೆಯಿಂ ಬಂದು ಏರಿ ಮಂಚವÀ ಮಲಗಿದ್ಯಾ ಏರಿ ಕುದುರೆಯನು ದುಷ್ಟರ ಶಿರವ ತರಿಯುತ್ತ ಸೇರಿ ಶೇಷನ ಮಲಗಿದ್ಯಾ ಬಾರಿ ಬಾರಿಗೆ ಇಂಥ ಕಾರ್ಯಗಳ ಮಾಡಿಸಿ ಬಳಲಿಲ್ಲಿ ಮಲಗಿಪ್ಪೆಯಾ ನಾರದಾದ್ಯರ ಗಾನ ಕೇಳುತಾನಂದದಿಂ ನಿದ್ರೆಗೈಯುತ ಮಲಗಿದ್ಯಾ ಸ್ವಾಮಿ 4 ಭಕ್ತ್ರರಾಡುವ ಸಲಿಗೆ ಬಿನ್ನಪಕೆ ಬ್ಯಾಸತ್ತು ಯುಕ್ತಿಯಿಂ ಪವಡಿಸಿದೆಯಾ ಮುಕ್ತರ ಸ್ತುತಿಗೆ ನಿದ್ರೆಯು ಬಾರದೆಂತೆಂದು ಮುಕ್ತೇಶ ಇಲ್ಲಿ ಮಲಗಿದೆಯಾ ಎತ್ತ ನೋಡಲು ಮಾರ್ಗಬಿಡಳು ಕಾವೇರಿ ಎಂದು ಸೋತಿಲ್ಲಿ ಮಲಗಿಪ್ಪೆಯಾ ಚಿತ್ತಜಾಪಿತ ಸ್ವಾಮಿ ಭಕ್ತರೆಬ್ಬಿಸಲೆಂದು ಚಿತ್ತದಲಿ ಇಪ್ಪದೇನೋ ದೇವ 5 ಅಸುರರ ಕಾಟ ವೆಗ್ಗಳವಾಗೆ ಬಂದಿಲ್ಲಿ ಅಡಗಿ ನೀ ಮಲಗಿಪ್ಪೆಯಾ ಬಿಸಜನಾಭನೆ ನಿನ್ನ ಬಗೆಯರಿತು ಎಬ್ಬಿಸುವ ಬಲವಂತರನ್ಯಾರೆಲೊ ಶಶಿವದನ ಭಕ್ತರನುದ್ಧರಿಸಲೋಸುಗದಿ ಬಂದಿಲ್ಲಿ ಮಲಗಿಪ್ಪೆಯಾ ಭವ ಬಂಧನವ ಪರಿಹರಿಸಿ ಘಸನಗೊಳಿಸದಲೆ ಕಾಯೊ ಜೀಯ 6 ಏಳು ಫಣೆಯ ಸರ್ಪನ ಮೇಲೆ ಮಲಗಿ ಏಳು ಕಣ್ದೆರದು ನೋಡೋ ತಾಳಲಾರೆನೊ ನಿನ್ನ ಸೇವೆಯಗಲಿದ ದುಃಖ ಏಳು ಮನ್ನಿಸಿ ಪಾಲಿಸೊ ವ್ಯಾಳಶಯನನೆ ನಿನ್ನ ಸೇವೆಯನು ಎನ್ನಿಂದ ಲೀಲೆಯಿಂ ಸ್ವೀಕರಿಸೆಲೊ ಭಾಳ ಬೇಡುವದೇನೊ ಗೋಪಾಲಕೃಷ್ಣವಿಠ್ಠಲ ಈ ವ್ಯಾಳೆ ಎನ್ನ ಸಲಹೊ ಸ್ವಾಮಿ 7
--------------
ಅಂಬಾಬಾಯಿ
ಹರಿ ಹರಿ ನರಹರಿ ಎನ್ನಿಜನರು ಹರಿ ಹರಿ ಎಂದು ಕೊಂಡಾಡಿ ಸಜ್ಜನರು ಪ ನಂದನಂದನನಾ ಮಂದರಧರನಾ ಇಂದ್ರಾದಿ ಸನಕ ಸನಂದನ ವಂದಿತನಾ 1 ತಾಳಭಂಜನನಾ ವ್ಯಾಳಶಯನನÀ ಕಾಳಿಯ ಪೆಡೆಯ ಮೇಳ್ ಕುಣಿದ ಗೋವಳನ 2 ಶರಧಿ ಶಯನನ ವರ ಶಂಖಚಕ್ರಗದಾಬ್ಜ ಶ್ರೀಧರನ 3 ಮಾವ ಮರ್ದನನ ರಾವಣಾಂತಕನ ಗೋವರ್ಧನವನೆತ್ತಿ ಗೋವಕಾಯ್ದವನ 4 ಮಕರ ಕುಂಡಲನ ಮುಕುತಿದಾಯಕನ ಬಕನ ವೈರಿಯ ಕೋಣೆ ಲಕ್ಷ್ಮೀ ರಮಣನ 5
--------------
ಕವಿ ಪರಮದೇವದಾಸರು