ಎಂತು ಪೊಗಳಲಳವೇ ದ್ವಾರಾವತಿಯ ದೊರೆಯನ್ನು
ಕಂತುಪಿತ ಶ್ರೀಕೃಷ್ಣ ಮೂರುತಿಯಾ ಪ.
ಅಂತರಂಗದಲಿ ನಿಂತು ಪೊರೆಯುವ
ಏಕಾಂತ ಮೂರುತಿಯ ಕರುಣಾನಿಧಿಯಾ ಅ.ಪ.
ಆಲದೆಲೆಯ ಮೇಲೆ ಮಲಗಿದ ಸಿಂಧು
ನಲಿಯುತ ಕನಕನ ಕಿಂಡಿಯಲಿ ನಿಂದು
ಒಲಿದು ವರಗಳನೀವ ಗುಣಸಿಂಧು 1
ಕಂಠದಲಿ ಮುತ್ತಿನಹಾರ ವಜ್ರದಂಗಿಯ ಅಲಂಕಾರ
ಕಂಟೀಪದಕ ವಿಸ್ತಾರ ಕರದಲಿ ವಜ್ರದುಂಗೂರ
ಸೊಂಟಪಟ್ಟಿಯ ಕಟ್ಟಿದಾ ಚಂದ ನಾಭೀ ಕಮಲದಾನಂದ 2
ಕಡೆಕಣ್ಣು ಕಂಗಳಾ ನೋಟ ಕಸ್ತೂರಿ ಲಲಾಟ
ಕುಡಿಹುಬ್ಬುಗಳ ನೀಟಾ ವಜ್ರಮಾಣಿಕ್ಯದ ಕಿರೀಟ
ಪಿಡಿದಿರುವ ಕಡಗೋಲು ಕರದಿ ರುಕ್ಮಿಣೀಶ ವಿಠಲ 3