ಪಾತಕಗೆ ಪರತರದ ಗುರುಬೋಧವ್ಯಾಕೆ
ಸೂತಕವ ಬಿಡದವಗೆ ಪರತತ್ವವ್ಯಾಕೆ ಪ
ಮಾತುತಪ್ಪಿ ನಡೆಯುವಗೆ ನೀತಿ ವಚನಗಳ್ಯಾಕೆ
ಜಾತಿಲ್ಲದವನಿಗೆ ಜ್ಯೋತಿಷ್ಯವ್ಯಾಕೆ
ಭೂತಬಡಿದವನಿಗೆ ಭೀತಿಯು ಯಾತಕ್ಕೆ
ಆತುರಗೆ ಯಾತಕ್ಕೆ ಕೀರ್ತಿ ಅಪಕೀರ್ತಿ 1
ಮಂಗನಿಗೆ ಮಾಲ್ಯಾಕೆ ಅಂಗನೆಗಧಿಕವ್ಯಾಕೆ
ಮುಂಗಾಲಿಲ್ಲದವಳಿಗೆ ಶೃಂಗಾರವ್ಯಾಕೆ
ಬಂಗಾರದೊಡವ್ಯಾಕೆ ಕಾಡಡವಿನಿವಾಸಗೆ
ಕಂಗಳಿಲ್ಲದವನಿಗೆ ಕರಕನ್ನಡ್ಯಾಕೆ 2
ಪತಿಗಂಜದವಳಿಗೆ ವ್ರತನೇಮಗಳು ಯಾಕೆ
ಸತಿಗಂಜಿ ನಡೆಯುವಗೆ ಶಸ್ತ್ರಾಯುಧ್ಯಾಕೆ
ಸುತರಿಲ್ಲದವನಿಗೆ ಅತಿಭಾಗ್ಯ ಯಾತಕ್ಕೆ
ಮತಿಯಿಲ್ಲದವಗ್ಹರಿಕಥೆಕೀರ್ತನ್ಯಾಕೆ 3
ಮಾನಹೀನನಿಗೆ ಬೇರೆ ಮರಣಬರಲೇಕೆ ಅ
ಜ್ಞಾನಿಗ್ಯಾತಕ್ಕೆ ಜಾಣಜನಸಂಗ
ಗೋಣೆಹೊರುವವಗ್ಯಾಕೆ ವಾಹನದ ಗೋಷ್ಠಿಯು
ಬಾಣ ಬತ್ತಳಿಕ್ಯಾಕೆ ಕರವಿಲ್ಲದವಗೆ 4
ಪರನಿಂದೆ ಮಾಳ್ಪನಿಗೆ ಶರಣತ್ವ ಯಾತಕ್ಕೆ
ಕರುಣವಿಲ್ಲದವನಿಗೆ ಗುರುಸೇವೆ ಯಾಕೆ
ಧರೆಗಧಿಕ ಶ್ರೀರಾಮಚರಣಸ್ಮರಣಿಲ್ಲದ
ಪರಮಪಾಪಿಗೆ ಶಿಷ್ಟನರಜನ್ಮವ್ಯಾಕೆ 5