ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಳಿಭಳಿರೆ ಶನಿರಾಜ ನೀನೆ ಬಲ್ಲಿದನೊ ಇಳೆ ಮೂರರಲಿ ನಿನಗಿಂ ಬಲ್ಲಿದರ ಕಾಣೆ ಪ ಧರೆಗೆಲ್ಲ ಒರ್ವನೆ ದೊರೆಯಾದ ನಳನನ್ನು ಪರರಾಯನಾಳೆನಿಸಿ ತಿರುವಿಸಿದಿ ಅಶ್ವ ವರ ಸತ್ಯ ಹರಿಶ್ಚಂದ್ರನ್ಹೊಲೆಯನಾಳೆನಿಸವನಿಂ ನಿರುತದಿಂ ಕಾಯ್ಸಿದೆಯೊ ಸುಡುಗಾಡವ 1 ಭೂಪತಿ ವಿಕ್ರಮಗೆ ಕಳ್ಳನೆಂದೆನಿಸವನ ತಾಪಬಡಿಸೆದೆಯೊ ಕೈಕಾಲುಗಳ ಕಡಿಸಿ ರೂಪಗೆಡಿಸಿದಿಂದ್ರಿನ ಮೈಯಲ್ಲಿ ತೂತ್ಹಾಕಿ ಶಾಪಕೊಡಿಸಿಂದುವಿನ ಕಳೆಯುಗುಂದಿಸಿದಿ 2 ಕುರುರಾಯನೊಂಶವಂ ನಿರ್ಮೂಲ ಮಾಡಿದೆಯೊ ತಿರಿದುಣಿಸಿದಿ ಆ ಮಹ ಪಾಂಡುನಂದನರ ಪರಮ ಸುಖಿಗಳ ಸುಖಕೆ ಕಿಡಿಯಿಟ್ಟು ನೋಡಿದಿ ವರ ತಪಸ್ವಿಗಳ ತಪಸ್ಸು ಭಂಗಪಡಿಸಿದೆಯೊ 3 ಒದಗಿ ಯಮದೇವನನ್ವಧೆ ಮಾಡಿಸಿದೆಯೊ ನೀ ಪದುಮಪೀಠನದೊಂದು ಮಸ್ತಕವ ಕಳೆದಿ ಮುದ ಕೃಷ್ಣ ಗಿಡದಡಿಯಸುವ ಬಿಟ್ಟನೆನಿಸಿದಿ 4 ಇಂತಿಂಥ ಮಹಿಮರನು ಈ ಪಾಡ ಪಡಿಸಿದಿ ನ ಮ್ಮಂಥ ನರಜನರ ಪಾಡೇನು ನಿನಗೆ ಕಂತುಪಿತ ಶ್ರೀರಾಮನನುಮತಿಯ ಪಡೆದು ಬಲ ವಂತನಿನಿಸಿದೆಯೋ ನೀ ಮೂಲೋಕದೊಳಗೆ 5
--------------
ರಾಮದಾಸರು