ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೇಳಿದರೆ ತಿಳಿಯುವುದೆ ಮಾಯಮೋಹಿಗಳಿಗೆ ನೀಲಶ್ಯಾಮನ ದಿವ್ಯಗೂಢದಿಹಮಹಿಮೆ ಪ ಬಂಜೆಗ್ಹೊಳೆವುದೆ ಪ್ರಸೂತಿವೇದನೆ ಸುದ್ದಿ ಸಂಜೀವನ ಮಹಿಮೆ ತಿಪ್ಪೆ ತೃಣಕೆ ತಿಳಿಯುವುದೆ ಅಂಜುಬುರುಕಗ್ವೀರತ್ವ ಸಾರಸವಿದೋರುವುದೆ ವಂಜಗೊಳುಪಾಗುವುದೆ ಹರಿಭಕ್ತಿಸಾರ 1 ನಾಗನ್ಹೆಡೆಯೆತ್ತಾಡಲಮೇಧ್ಯಜಂತರಿಯುವುದೆ ಕೋಗಿಲೆಯು ಕೂಗಲು ಕಾಗೆ ತಿಳಿಯುವುದೆ ಗೂಗೆಗ್ಹೇಳಲು ಅರುಣಪ್ರಭೆ ನೋಡಬಲ್ಲುದೆ ಭಾಗವತರ ನಡೆ ಭವರೋಗಿಗ್ಹೊಳಪಹ್ಯದೆ 2 ರಾಜ್ಯದಾಡಳಿತವನು ಚಾಂಡಾಳ ತಿಳಿಯುವನೆ ತೇಜಿಯ ಮಹಯೋಗ ಪಾಜಿಗ್ಹುಟ್ವುದೆ ಭೋಜನದ ಸವಿಸಾರ ರೋಗಿಗ್ಹೇಳಲು ಫಲವೆ ರಾಜಿಪ ಪರಲೋಕ ಕುಜನರರಿಯುವರೆ 3 ಹೀನನಿಗತಿ ತಿಳಿಯುವುದೆ ಜ್ಞಾನಬೋಧಾಮೃತ ಶ್ವಾನನಿಗೆ ಸೇರುವುದೆ ರಾಗ ಸುಖಸ್ವಾದ ಕೋಣಗ್ಹೊಳೆವುದೆ ವೇಣು ಮೃದಂಗ ಸುಖವಾದ್ಯ ಧ್ಯಾನಮಹಿಮೆಯ ಫಲವು ಭವಿಗೆ ತಿಳಿಬಲ್ಲುದೆ 4 ನೇಮದೊರುಷವು ಸುರಿಯೆ ಕಲ್ಲು ನೀರು ಕುಡಿಯುವುದೆ ಕಾಮಿಗಳಗನುಭವದ ಹಾದಿ ತಿಳಿ ಬಲ್ಲುದೆ ಪಾಮರಧಮರಿಗಿಲ್ಲ ದೀನಜನನಾಥ ಶ್ರೀ ರಾಮನಡಿ ನಿಜಭಕ್ತಿ ಸಾಧ್ಯವಾಗುವುದೆ 5
--------------
ರಾಮದಾಸರು