ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾದವ ನಿನ್ನೆಲ್ಲ ವರ್ಮಕರ್ಮಂಗಳ ಸಾಧಿಸಿ ಜನರ ಮುಂದ್ಹೇಳಲ್ಯಾ ರಂಗ ಸಾಧಿಸಿ ಜನರ ಮುಂದ್ಹೇಳಲ್ಯಾ ಭೇದವಿಲ್ಲದೆ ಕರುಣವನಿಟ್ಟು ಮರೆ- ಯದೆ ನೀ ದಯ ಸುಮ್ಮನೆ ಮಾಡುವ್ಯಾ ಪ ಮಡುವಿನೊಳಗೆ ಪೊಕ್ಕು ಬಿಡುತ ನೀ ಕಣ್ಣ ದುಡುಕು ಮಾಡಿದ್ದೆಲ್ಲ ಹೇಳಲ್ಯಾ ರಂಗ ದುಡುಕು ಮಾಡಿದ್ದೆಲ್ಲ ಹೇಳಲ್ಯಾ ಮಡುಹಿದ ಸೋಮಕಾಸುರನೆಂಬ ಸುದ್ದಿಯ ಬಿಡದೆ ಜನರ ಮುಂದ್ಹೇಳಲ್ಯಾ 1 ಕಡÀಗೋಲನ್ಹೊತ್ತು ಮಂಡಿಯಂತೆ (?) ಕೈಕಾಲು ಮು- ದುಡಿಕೊಂಡದ್ದೆಲ್ಲ ಹೇಳಲ್ಯಾ ರಂಗ ಮು- ದುಡಿಕೊಂಡದ್ದೆಲ್ಲ ಹೇಳಲ್ಯಾ ಹಿಡಿದು ಸುಧೆಯ ವಂಚನಿಂದ ಸುರರಿಗೆ ನೀ- ಭಂಗ ನಾ ಹೇಳಲ್ಯಾ 2 ಊರುಮನೆಗಳಿಲ್ಲ ನೀ ಗಿರಿಗಂಹ್ವರ ಸೇರಿಕೊಂಡದ್ದೆಲ್ಲ ಹೇಳಲ್ಯಾ ರಂಗ ಸೇರಿಕೊಂಡದ್ದೆಲ್ಲ ಹೇಳಲ್ಯಾ ಕೋರೆ ಹಲ್ಲುಗಳಿಂದ ಬೇರನು ಸವಿದುಂಡ ದಾರಿದ್ರ್ಯವೆಲ್ಲ ನಾ ಹೇಳಲ್ಯಾ3 ಮುಖವ ನೋಡಲು ಮೃಗದಂತೆ ಬಾಯ್‍ತೆರೆದ ನಿನ್ವಿಪರೀತ ಕೋಪಂಗಳ್ಹೇಳಲ್ಯಾ ರಂಗ ನಿನ್ವಿಪರೀತ ಕೋಪಂಗಳ್ಹೇಳಲ್ಯಾ ನಖದಿಂದ ಹಿರಣ್ಯಕನ ಕರುಳ ನೀ ಬಗೆದಂಥ ಸಕಲ ವ್ಯಾಪಾರ ನಾ ಹೇಳಲ್ಯಾ 4 ಪಾದ ಭೂಮಿ ಮುದ್ದು ರೂಪಗಳಿಂದ ಬೇಡಿಕೊಂಡದ್ದೆಲ್ಲ ಹೇಳಲ್ಯಾ ರಂಗ ಬೇಡಿಕೊಂಡದ್ದೆಲ್ಲ ಹೇಳಲ್ಯಾ ಮೂರು ಲೋಕವು ಸಾಲದಂತೆ ನೀ ಬೆಳೆದ ಅನ್ಯಾಯ ಮಾಯಗಳ ನಾ ಹೇಳಲ್ಯಾ 5 ಜಮದಗ್ನಿಯಲ್ಹುಟ್ಟಿ ಜನಭಯಕಂಜದೆ ಜನನಿ ಹತವ ಮಾಡಿದ್ಹೇಳಲ್ಯಾ ರಂಗ ಜನನಿ ಹತವ ಮಾಡಿದ್ಹೇಳಲ್ಯಾ ಅನುಮಾನವಿಲ್ಲದೀತನು ನಿಮ್ಮ ಕುಲಕೆ ಛೇದಕನೆಂದು ಕ್ಷತ್ರೇರಿಗ್ಹೇಳಲ್ಯಾ 6 ದೊರೆತನಾಳುವ ತಂದೆ ಪುರವಬಿಟ್ಹೊರಗ್ಹಾಕೆ ವನವನತಿರುಗಿದ್ದು ಹೇಳಲ್ಯಾ ರಂಗ ವನವನತಿರುಗಿದ್ದು ಹೇಳಲ್ಯಾ ಸಿರಿಯನಗಲಿ ಹತ್ತು ಶಿರ(ನ)ನುಜೆಯ ಮೂಗು ಮುಂದಲೆಯ ಕೊಯ್ದ(ಯ್ಸಿದ?) ನೆಂದ್ಹೇಳಲ್ಯಾ 7 ಎಳೆದು ಗೋಪ್ಯಮ್ಮ ನಿನ್ನೊ ್ವರಳಿಗೆ ಕಟ್ಟಿದ್ದು ಕಳವು ಜನರ ಮುಂದ್ಹೇಳಲ್ಯಾ ರಂಗ ಕಳವು ಜನರ ಮುಂದ್ಹೇಳಲ್ಯಾ ಸೆಳೆದು ಗೋಪ್ಯೇರ ಸೀರೆಕಟ್ಟಿ (ಕಡಹಾ) ಲಕ್ಕೆ ಆ- ಕಳಕಾಯ್ದನೆಂದು ನಾ ಹೇಳಲ್ಯಾ 8 ಬಟ್ಟೆರಹಿತನಾಗಿ ಹೊಕ್ಕು ತ್ರಿಪುರದಲ್ಲಿ ಬತ್ತಲೆ ತಿರುಗಿದ್ದು ಹೇಳಲ್ಯಾ ರಂಗ ಬತ್ತಲೆ ತಿರುಗಿದ್ದು ಹೇಳಲ್ಯಾ ದುಷ್ಟ ಕಲಿಯ ಶಿರಕಡಿದು ಹಾಕುವ ನೀ ದುಷ್ಟ ಗುಣಗಳ ನಾ ಹೇಳಲ್ಯಾ 9 ಭಕ್ತ ಜನರು ಕಂಡು ಕಟ್ಟಿ ಹಾಕುವರೆಂ- ದಿಷ್ಟು ಅಂಜಿಕೆ ನಿನ್ನದ್ಹೇಳಲ್ಯಾ ರಂಗ ಇಷ್ಟು ಅಂಜಿಕೆ ನಿನ್ನದ್ಹೇಳಲ್ಯಾ ನಿತ್ಯ ಈ ಹೃದಯಮಂದಿರದಲ್ಲಿ ಭೀಮೇಶ- ಕೃಷ್ಣ ನೀನಡಗಿದ್ದು ಹೇಳಲ್ಯಾ 10
--------------
ಹರಪನಹಳ್ಳಿಭೀಮವ್ವ
ಎಂತು ಮರುಳಾದೆ ನೀ ಯದಿಯ ಬಿಗುವಿನಲಿ ತಿರುಗಿ | ಪಂಥದಲ್ಲಿ ಕೆಡಲಿಬೇಡ ಎರಡು ದಿನ | ಸಂತೆ ನೆರೆದಂತೆ ಮೂಢ ಇಪ್ಪದಿದು | ಸಂತತ ತೊರೆದು ಬಾಡೊ ಪ್ರಾಣಿ ಪ್ರಾಣಿ ಪ ವಿಂಚುಗೂಳನು ತಿಂದು ಮನೆ ಮನೆಗಳು ತಿರುಗಿ | ಸಂಚಿತಾರ್ಥವ ತಿಳಿಯದೆ ಮರುಳಾದ | ಪರ | ಪಂಚವನು ನೀ ಕಳಿಯದೆ ವ್ಯರ್ಥಾಯ | ವಂಚನಿಂದಲಿ ನಡೆದು ಬಾಯಿ ತೆರೆದು | ಹಲ್ಲನು | ಹಂಚಿಕೆ ತೋರಿದಂತೆ ಮೃತ್ಯುವಿನ | ಪಂಚದಲಿ ಸೇರಿದಂತೆ | ಆಗುವುದು | ಕಂಚು ಕೆಳಗೆ ಬಿದ್ದಂತೆ ಪ್ರಾಣಿ 1 ನುಗ್ಗು ನುಸಿಯಾಗದಿರು | ನೂಕು ನಿನ್ನಹಂಕಾರ | ಮುಗ್ಗದಿರು ಈ ಬಲಕಿಗೆ ಸ್ಥಿರವಾಗಿ | ಬಗ್ಗು ನಡೆವಳಿ ನಡೆದು | ವೆಗ್ಗಳದ ನಡೆವಳಿ ನಡೆದು | ವೆಗ್ಗಳದ ಧರ್ಮದಾ ಸುಗ್ಗಿಯಲಿ ದಿನವ ಹಾಕೊ | ಬಿಡು ಬಿಡು ಅಗ್ಗಳಿಕೆತನವೆ | ಸಾಕು ಆವಾಗ ತೆಗ್ಗಿಕೊಂಡಿರಲಿ ಬೇಕು | ಪ್ರಾಣಿ 2 ಇನ್ನಾದರೂ ಕೇಳು | ಪುಣ್ಯವಂತರ ಕೂಡು | ನಿನ್ನವರು ನಿನಗೆ ದಾರೊ | ಕಣ್ಣಾಗೆ ಎಣ್ಣೆ ಬಿದ್ದಂತೆ ಸಾರೊ ಬಾಯಿಂದ | ಬೆನ್ನಿಗೆ ಬಂದ ವಿಚಾರೊ ತುದಿಯಲಿ | ಮಣ್ಣು ಮಣ್ಣನೆ ಕಲಿತು ಹೋಗುವುದು ನಿಶ್ಚಯವು | ಚೆನ್ನಾಗಿ ಎಚ್ಚೆತ್ತುಕೋ ಈ ಮಾತಿಗೆ | ಖಿನ್ನನಾಗುವದೇತಕೊ ಸಾವಿರಕು | ಮುನ್ನಿಲ್ಲವೊ ಮನಸಿತೊ ಪ್ರಾಣಿ 3 ವೇದಶಾಸ್ತ್ರವನರಿಯೆ ಆದಿಪುರಾಣಗಳು | ಅದ್ವೈತ | ವಾದವರ ಕೂಡದಿರು ಇದೆ ಮಿಗಿ ಲಾದರು ಮರಿಯದಿರು ಉತ್ತಮ | ಸಿರಿ ವಿಜಯವಿಠ್ಠಲನ ಶ್ರೀ | ಪಾದವನು ಒಂದೇ ಭಕ್ತಿಯಿಂದಲಾ | ರಾಧಿಸು ಇದಕೆ ಯುಕ್ತಿ ಕಡಿಯದಲೆ | ಮಾಧವನು ಕೊಡುವ ಮುಕ್ತಿ ಪ್ರಾಣಿ4
--------------
ವಿಜಯದಾಸ