ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ಯಾತಕನುಮಾನವಯ್ಯಾ ಪ ಅನ್ಯಥಾ ಗತಿ ಕಾಣೆ ನಿನ್ನ ಚರಣಗಳಾಣೆ ಅ.ಪ. ನಾಶರಹಿತನೆ ನಮಗೆ ಏಸೇಸು ಕಲ್ಪಕ್ಕು ವಾಸ ಏಕತ್ರದಲ್ಲಿ ನೀ ಸಾಕ್ಷಿಯಾಗಿದ್ದು ದಾಸನಾದವಗಪ್ರ- ಯಾಸದಿ ಫಲಗಳುಣಿಸಿ ಲೇಶ ಘನಮಾಡಿ ಸಂತೋಷಪಡುವಾ ನಿನ್ನ ದ್ವೇಷಿ ನಾನಲ್ಲವಯ್ಯ ದೇಶಕಾಲಾದಿಗಳಿಗೀಶ ನೀನೆಂದರಿದು ದಾಸನಾಗಿರುವೆನೆಂದಾಶೆ ಪುಟ್ಟಿದ ಬಳಿಕ 1 ನಿತ್ಯ ತೃಪ್ತನೆ ನಿನ್ನ ಕೃತ್ಯಕೇನೆಂಬೆನೋ ಸತ್ಯಸಂಕಲ್ಪ ಹರಿಯೇ ಮೃತ್ಯುಮಾರಿಗಳೆನಗೆ ಹತ್ತಿಕೊಂಡದರಿಂದ ಸತ್ತುಪುಟ್ಟುವೆಯಿನ್ನು ದತ್ತಕರ್ತೃತ್ವ ಬೆನ್ಹತ್ತಿಕೊಂಡದರಲ್ಲಿ ಅತ್ಯಪರಾಧಿಯಂದತ್ತ ಮೊಗದಿರುಗದಿರು ಭೃತ್ಯವತ್ಸಲನೆಂದಗತ್ಯ ಮನಸೋತ ಬಳಿಕ 2 ವೇದವೇದ್ಯ ಸ್ವಗತ ಭೇದವರ್ಜಿತ ಪೂರ್ಣ ಮಾಧವ ಮಹಿದಾಸ ಆದಿನಾರಾಯಣ ವಿನೋದ ವಿಷ್ವಕ್ಸೇನ ಶ್ರೀದವಿಠಲಾ ನಿನ್ನ ಕ್ರೋಧ ವರರೂಪ- ವಾದ ವಾರ್ತೆಯು ಕೇಳಿ ಧೈರ್ಯಬಿಡದಾ ಬಳಿಕಿನ್ನು 3
--------------
ಶ್ರೀದವಿಠಲರು
ನಂಬಿದ್ಯಾ ಮನವೇ ನಂಬಿದ್ಯಾ ಪ ನಂಬಿದ್ಯ ಮನವೆ ಕೊಂಡಾಡಿದ್ಯ ಆನಂದ ತೀರ್ಥರ ಮತವೆಸತ್ಯವೆಂದು ಅ.ಪ ಇಂದಿರೆ ರಮಣನೆ ಪರದೈವವೆಂದು ಬಂಧನಾದಿ ಅಷ್ಟಕರ್ತೃತ್ವ ಆತನದೆಂದು ಕುಂದುಕೊರತೆಗಳಿಲ್ಲದ ಸರ್ವೇಶ ಶಾಶ್ವತನೆಂದು ನಂದ ಕಂದನು ಸಾನಂದ ಗುಣ ಪೂರ್ಣ ಸ್ವರತನೆಂದು 1 ನಾರಾಯಣನೆ ಸರ್ವೋತ್ತುಮನು ಎಂದು ಸಿರಿ ಅಜಶಿವರೆಲ್ಲ ಹರಿಯಕಿಂಕರರೆಂದು ಮುರವೈರಿ ಅಂತಃ ಬಹಿರ್ವ್ಯಾಪ್ತನು ಎಂದು ಶಾರಂಗ ಪಾಣಿಯೆ ಸರ್ವಾಂತರ್ಯಾಮಿಯೆಂದು 2 ಸಾಕಾರಸರ್ವೇಶ ನಿರ್ವಿಕಾರ ನೆಂದು ಓಂಕಾರ ವಾಚ್ಯನೆ ಸರ್ವಾಧಾರ ಸರ್ವಗನೆಂದು ಅಕಾರಾದಿ ಸರ್ವವರ್ಣಸ್ವರ ಶಬ್ದ ವಾಚ್ಯನುಎಂದು ಅಜ ಅಪ್ರಮೇಯನೆಂದೂ3 ವೇದಗೋಚರ ತಾವೇದಾತೀತನೆಂದು ವಿಧಿಸಿರಿ ವಂದಿತ ಸಾಕಲ್ಯದಿ ಅವಾಚ್ಯನೆಂದು ಮಧುಸೂಧನನು ಚಿನ್ಮಯ ವಪುಷನೆಂದು ಭೇದವಿಲ್ಲದ ರೂಪ ಗುಣಕ್ರಿಯ ಅವಯವನೆಂದು4 ನಾಶರಹಿತ ಕೇಶವನೊಬ್ಬ ಆರ್ತಿವರ್ಜಿತ ನೆಂದು ಕ್ಲೇಶರಹಿತ ವಾಸುದೇವನು ವಿಧಿನಿಷೇಧ ವರ್ಜಿತನೆಂದು ವಿಶ್ವೇಶ ಸರ್ವತಂತ್ರ ಸ್ವತಂತ್ರನು ಸಾರ್ವಭೌಮನು ಎಂದೂ ವಾಸುಕಿ ಶಯನನು ಲೀಲೆ ಗೋಸುಗ ವಿಹಾರಮಾಳ್ಪಾನೆಂದು5 ಪುರುಷ ಸೂಕ್ತ ಪ್ರತಿಪಾದ್ಯ ಅಪ್ರಾಕೃತನೆಂದು ವರಗಾಯತ್ರ್ಯಾದಿ ಸರ್ವಮಂತ್ರ ಪ್ರತಿಪಾದ್ಯನೆಂದು ಅಪವರ್ಗ ಗತಿದಾಯಕನೆಂದೂ ಪಾದ ಭಜನೆಯೆ ಸಾರವೆಂದೂ 6 ವಿರಂಚಿ ಜನಕನೆ ಸರ್ವತ್ರ ಸರ್ವರಲಿದ್ದು ಸರ್ವಕಾರ್ಯ ಕಾರ್ಯಗಳನು ಮಾಡಿ ಮಾಡಿಸುವನೆಂದು ಸರ್ವಜೀವರಿಗೆ ಕರ್ಮಗಳುಣಿಸಿ ತಾ ನಿರ್ಲೇಪನೆಂದೂ ಖರಾರಿರೂಪಗಳೆಲ್ಲ ಅನಾದಿ ಶುಕ್ಲಶೋಣಿತವರ್ಜಿತವೆಂದು7 ಲಕ್ಷ್ಮಿರಮಣನು ಪಕ್ಷಪಾತ ರಹಿತನೆಂದು ಪಕ್ಷಿವಾಹನನು ಕ್ಷರಾಕ್ಷರ ವಿಲಕ್ಷಣನೆಂದು ಲಕ್ಷ್ಮಣಾಗ್ರಜನು ಕುಕ್ಷಿಯೊಳಗೆ ಬ್ರಹ್ಮಾಂಡ ರಕ್ಷಿಪನೆಂದು ಇಕ್ಷು ಚಾಪನ ಪಿತನಚಿಂತಾದ್ಭುತನೆಂದು 8 ಹಂಸಾದಿ ಹದಿನೆಂಟು ರೂಪಗಳ ಧರಿಸಿ ಹೊರಗೆ ವ್ಯಾಪಿಸಿ ಕಂಸಾರಿಸಕಲವ ನಡಿಸೀನಡಿಸುತ ಸುಖದುಃಖಗಳ ಲೇಶಯೋಗ್ಯತೆ ಮೀರಗೊಡದಲೆ ಉಣಿಸುವನೆಂದು 9 ಪತಿತ ಪಾವನ ಪರಾವರೇಶ ತ್ರಿಗುಣವರ್ಜಿತನೆಂದು ಸತತ ಸ್ವಪ್ನ ಸುಷಪ್ತಿ ಜಾಗ್ರತೆ ಮೋಕ್ಷಾ ವಸ್ಥೆಗಳಲಿ ವಿಶ್ವ ತ್ವೆಜಸ ಪ್ರಾಜ್ಞ ತುರ್ಯರೂಪಾದಿಂದ ಮತಿ ಪ್ರೇರಕನಾಗಿ ಕಾದುಕೊಂಡು ಪೊರೆಯುವ ನೆಂದು10 ಸತ್ಯವತಿ ಸುತನು ಸತ್ಯ ಸಂಕಲ್ಪನೆಂದು ಆತನೆ ನಿತ್ಯಾನಿತ್ಯ ಜಗದೀಶನಂತರ್ಯಾಮೀಯೆಂದು ಮುಕ್ತಾ ಮುಕ್ತರ ನಾಥ ಮುಖ್ಯ ಬಿಂಬನು ಚತುರಾನನಾದಿಗಳಿಗೆಲ್ಲಾ ಎಂದು11 ಅನಿಲ ಜೀವೋತ್ತಮ ಹರಿಯ ಪ್ರಥಮಾಂಗ ಅಪರೋಕ್ಷ ಪ್ರಭುವು ಅಣು ಮಹದ್ಘನ ರೂಪ ಚರಿತ ಭಾರತೀಶ ವಾಣೀ ಪತಿಯ ಪದಾರ್ಹ ವಾತದೇವನು ಎಂದು 12 ಹನುಮ ಭೀಮ ಮಧ್ವ ಮೂರಾವತಾರದ ದೇವ ಅನುಪಮ ಬಲನಿಸ್ಸೀಮ ಪುರುಷತೇಜ ತೃಣ ಮೊದಲಾದ ಸರ್ವಜೀವರಲ್ಲಿದ್ದು ಅವರ ಹರಿಯಾಜ್ಞೆಯಂತೀವನೆಂದೂ 13 ದ್ವಾತ್ರಿಂಶಲ್ಲಕ್ಷಣ ಸಂಪನ್ನ ಗುರು ಮಧ್ವನೆಂದು ಆತನೇಲೋಕಕ್ಕೆಲ್ಲ ಗುರವು ಎಂದು ಈತ ಸಕಲಪೇಳಿದ ಮಾತಿಗೆ ಸರಿಯಿಲ್ಲವು ಎಂದು ಪ್ರೀತಿಯಿಂದಲಿ ಭಜಿಪ ಭಕ್ತಗೇನೆ ಮುಕ್ತಿಯೆಂದು 14 ಹರಿಯ ಮತವೆ ಹನುಮನ ಮತವು ಎಂದು ಸಿರಿ, ವಿರಂಚಿ ಪವನ ವಾಣಿ ಭಾರತೀಯರಲ್ಲಿ ಗರುಡ ಶೇಷ ಶಿವ ಶಕ್ರಾದಿಸರ್ವರೊಳಗೆ ತಾರತಮ್ಯ ಪಂಚ ಭೇದವು ಸತ್ಯವೆಂದು 15 ಭಾರತಿ ಪತಿಯದ್ವಾರವೆ ಹರಿಯು ಸ್ವೀಕರಿಪ ನೆಂದು ಮುರಾರಿಯ ಒಲುಮೆಗೆ ಜ್ಞಾನಯುತಭಕ್ತಿಯೆ ಸಾಧನವೆಂದು ಧರೆಯೊಳಗೆ ಹರಿನಾಮ ಸ್ಮರಣೆಗೆ ಸರಿಯಿಲ್ಲವು ಎಂದು ಮಾರಮಣನ ಅನುಗ್ರಹವೆ ಮೋಕ್ಷದಾಯಕ ವೆಂದು 16 ಅರಿಷಡ್ವರ್ಗಗಳಳಿಯುವುದೆ ವೈರಾಗ್ಯ ಮಾರ್ಗವೆಂದು ಗುರುವಿನ ಕರುಣವೆ ಜ್ಞಾನಕ್ಕೆ ಕಾರಣವೆಂದು ಸಾರಮಾರ್ಗಕ್ಕೆ ಸಾಧುಗಳ ಸಂಗವೆ ಮುಖ್ಯವೆಂದು ನೀರಜಾಕ್ಷಗೆ ಸರಿ ಮಿಗಿಲು ಇಲ್ಲವೆಂದು 17 ಜೀವ ಈಶಗೆ ಭೇದ ಈಶ ಜಡಕೆ ಭೇದ ವೆಂದು ಜೀವ ಜೀವಕೆ ಭೇದ ಜಡ ಜಡಕೆ ಭೇದವೆಂದು ಪರಿ ಪಂಚ ಭೇದವೆಂದು ಸಾವಧಾನದಿ ತಿಳಿದು ಜಗತ್ಸತ್ಯವೆಂದು ಧೃಡದಿ 18 ಸುರರೊಳುನರರೊಳು ಅಸುರರೊಳು ಎಲ್ಲೆಲ್ಲು ತಾರತಮ್ಯವು ಅನಾದಿಯಿಂದಲಿ ಇರುತಿಹುದೆಂದು ಸ್ವರೂಪಾನಂದಾವಿರ್ಭಾವವೆ ಮುಕ್ತಿಯೆಂದು ಅರವಿಂದನಾಭಗೆ ಸರ್ವರು ಸದಾದಾಸರೆಂದು 19 ಧನಕನಕ ವನಿತಾದಿಗಳೆಲ್ಲ ಹರಿಗೆ ಅರ್ಪಿತ ವೆಂದು ಏನೇನು ಮಾಡುವುದೆಲ್ಲ ಶ್ರೀ ಕೃಷ್ಣನ ಸೇವೆಯೆಂದು ದೀನ ಜನ ಮಂದಾರನಾಧೀನ ಸುಖದುಃಖಾಗಳೆಂದು ಏನು ಬೇಡದೆ ಹರಿಯ ಸತತನೆನೆವೋದೆ ಸಾಧನ ವೆಂದು20 ನಾಕೇಶ ಜಯತೀರ್ಥ ವಾಯ್ವೂಂತರ್ಗತನಾದ ಶ್ರೀಕೃಷ್ಣ ವಿಠಲಾನೆ ಮಮಸ್ವಾಮಿ ಸರ್ವಸ್ವವೆಂದು ಸಕಲ ಕರ್ಮಗಳರ್ಪಿಸುತ ತ್ರಿಕರಣ ಶುದ್ಧಿಯಿಂದಲಿ ಮಾಕಳತ್ರನ ಸತತ ಭಜಿಸುತ್ತಿರಬೇಕು ಎಂದು 21
--------------
ಕೃಷ್ಣವಿಠಲದಾಸರು
ನಿನ್ನ ಸಂಕಲ್ಪಾನುಸಾರ ಮಾಡೋ ಎನ್ನ ಸಾಕುವ ಧೊರೆಯೆ ತಿಳಿದು ನೀ ನೋಡೋ ಪ ಪಾತ್ರನೆಂದೆನಿಸೋ ಬಹು ಪಾಪಾತ್ಮನೆಂದೆನಿಸೋ ಶ್ರೋತ್ರೀಯನೆಂದೆನಿಸೋ ಶುಂಠನೆನಿಸೋ ಪುತ್ರಮಿತ್ರಾದ್ಯರಿಂ ಬಯಸಿ ಪೂಜೆಯಗೈಸೋ ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕನೆ 1 ಜನರೊಳಗೆ ನೀನಿದ್ದು ಜನ್ಮಗಳಲ್ಲಿ ಗುಣಕಾಲಕರ್ಮ ಸ್ವಭಾವಂಗಳಾ ಅನುಸರಿಸಿ ಪುಣ್ಯ ಪಾಪಗಳ ಮಾಡಿಸಿ ಫಲಗ ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳು 2 ಯಾತಕೆನ್ನನು ಇನಿತು ದೂಷಕನ ಮಾಡುವಿ ಧ ರಾತಲದೊಳನುದಿನದಿ ಮಾಯಾಪತೇ ಭೀತಿಗೊಂಬುವನಲ್ಲ ಭಯನಿವಾರಣ ಜಗ ನ್ನಾಥ ವಿಠ್ಠಲ ಜಯಪ್ರದನೆ ಜಗದೀಶಾ3
--------------
ಜಗನ್ನಾಥದಾಸರು
ಸಂಸಾರವನು ಮಾಡಿ ಸಕಲ ಜನರೂ ಪ ಕಂಸಾರಿ ಶ್ರೀಕೃಷ್ಣ ಕೈಪಿಡಿದು ಸಲಹುವನು ಅ.ಪ. ಬುದ್ಧಿಯೆಂದೆಂಬ ಕನ್ನಿಕೆಯ ಮದುವೆಯ ಮಾಡಿಸದ್ಧರ್ಮದಭಿಮಾನದಿಂದ ಬೆಳಸೀ ||ಶುದ್ಧ ಭಕ್ತಿಗಳೆಂಬ ಮಕ್ಕಳನು ಪಡೆದು ಬಹುಅದ್ಭುತ ಭವಾಬ್ಧಿಯನು ದಾಟಿರಯ್ಯಾ 1 ಚಾರು ಸುಜ್ಞಾನವೆಂಬುವ ಮುದ್ದು ಮಗನ್ಹಡೆದುವೈರಾಗ್ಯವೆಂಬ ಭಾಗ್ಯವನೆ ಬೇಡೀ ||ಸಾರ ಹರಿನಾಮಗಳ ರಸ ಪದಾರ್ಥಗಳುಣಿಸಿಕಾರುಣ್ಯದಲಿ ಬೆಳೆಸಿರಯ್ಯ ಮಕ್ಕಳನೂ 2 ಯಮ ನಿಯಮ ಅಷ್ಟಾಂಗ ಅಣಿಮಾದಿಗಳುಕ್ಷಮೆ ದಮಾದಿಗಳೆಂಬ ಬಂಧು ಬಳಗಾ ||ಮಮತೆ ಪೆರ್ಚಿಸಿಕೊಂಡು ಬೀಗತನ ಮೊದಲಾದಅಮರಿಕೆಯ ಸಂಬಂಧವನೆ ಮಾಡಿರಯ್ಯಾ 3 ಶೀಲ ಸನಕಾದಿಗಳು ಮುನಿ ದೇವತಾದಿಗಳುತಾಳಿ ತಮ್ಮೊಳಗೆ ಸಮ ವಿಷಯರಾಗಿ ||ಆಲಂಪಟಗಳ್ಹಚ್ಚಿಕೊಂಡು ಭವನಿಧಿ ದಾಟಿಸಾಲೋಕ್ಯ ಮೊದಲಾದ ಮುಕ್ತಿಗೈದಿದರೂ 4 ಸತಿ ಸುತರು ಭಾಗ್ಯವೆ ನಿಮಗೆಹರಿಯಿತ್ತ ಕಾಲಕ್ಕು ಹೃದಯದೊಳಗೇ ||ಮರೆಯಲಾಗದು ಹಿಂದೆ ಸಂಸಾರದಾ ಬಾಧೆ ದುರಿತಾರಿ ವ್ಯಾಸ ವಿಠ್ಠಲ ಬ್ಯಾಗ ಒಲಿವಾ 5
--------------
ವ್ಯಾಸವಿಠ್ಠಲರು
ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ) ಹರಿಕಥಾಮೃತಸಾರ ಶ್ರೀಮ- ದ್ಗುರುವರ ಜಗನ್ನಾಥದಾಸರ ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ ಪರಮಪಂಡಿತಾಭಿಮಾನಿಗಳು ಮ- ತ್ಸರಿಸಲೆದೆಗಿಚ್ಚಾಗಿ ತೋರುವು- ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1 ಭಾಮಿನಿಯ ಷಟ್ಪದಿಯ ರೂಪದ- ಲೀ ಮಹಾದ್ಭುತ ಕಾವ್ಯದಾದಿಯೊ- ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ ಯಾಮಯಾಮಕೆ ಪಠಿಸುವರ ಸು- ಧಾಮಸಖ ಕೈಪಿಡಿಯಲೋಸುಗ ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2 ಸಾರವೆಂದರೆ ಹರಿಕಥಾಮೃತ ಸಾರವೆಂಬುವುದೆಮ್ಮ ಗುರುವರ ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ ಸಾರಥಿಯ ಬಲಗೊಂಡು ಸಾರಾ- ಸಾರಗಳ ನಿರ್ಣೈಸಿ ಪೇಳ್ದನು ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3 ದಾಸವರ್ಯರ ಮುಖದಿ ನಿಂದು ರ- ಮೇಶನನು ಕೀರ್ತಿಸುವ ಮನದಭಿ- ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ ಈ ಸುಲಕ್ಷಣ ಕಾವ್ಯದೋಳ್ ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4 ಪ್ರಾಕೃತೋಕ್ತಿಗಳೆಂದು ಬರಿದೆ ಮ- ಹಾಕೃತಘ್ನರು ಜರಿವರಲ್ಲದೆ ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ಶ್ರೀಕೃತೀಪತಿಯಮಲಗುಣಗಳು ಈ ಕೃತಿಯೊಳುಂಟಾದ ಬಳಿಕ ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5 ಶ್ರುತಿಗೆ ಶೋಭನವಾಗದೊಡೆ ಜಡ ಮತಿಗೆ ಮಂಗಳವೀಯದೊಡೆ ಶ್ರುತಿ ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ ಮಥಿಸಿ ಮಧ್ವಾಗಮಪಯೋಬ್ಧಿಯ ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6 ಸಕ್ತಿ ಸಲ್ಲದು ಕಾವ್ಯದೊಳು ಪುನ- ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ- ಭಕ್ತಿ ವಿಷಮಗಳಿರಲು ಜೀವ- ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7 ಆಶುಕವಿಕುಲಕಲ್ಪತರು ದಿ- ಗ್ದೇಶವರಿಯಲು ರಂಗನೊಲುಮೆಯ ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು ಈ ಸುಲಕ್ಷಣ ಹರಿಕಥಾಮೃತ ಸಾರ ದೀರ್ಘ ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8 ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ ದೂಷಕರು ದಿನದಿನದಿ ಮಾಡುವ ದೂಷಣವೇ ಭೂಷಣವು ಎಂದುಪ- ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9 ಅಶ್ರುತಾಗಮಭಾವ ಇದರ ಪ- ರಿಶ್ರಮವು ಬಲ್ಲವರಿಗಾನಂ- ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ ಮಿಶ್ರರಿಗೆ ಮರೆಮಾಡಿ ದಿತಿಜರ ಶಸ್ತ್ರದಲಿ ಕಾಯದಿಪ್ಪರಿದರೊಳು- ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10 ನಿಚ್ಚ ನಿಜಜನ ಮೆಚ್ಚ ಗೋಧನ ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ ಉಚ್ಚವಿಗಳಿಗೆ ಪೊಚ್ಚ ಪೊಸದೆನ- ಲುಚ್ಚರಿಸಿದೀ ಸಚ್ಚರಿತ್ರೆಯ ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11 ಸಾಧು ಸಭೆಯೊಳು ಮೆರೆಯೆ ತತ್ವಸು- ಬೋಧವೃಷ್ಟಿಯ ಗರೆಯೆ ಕಾಮ ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ ವಾದಿಗಳ ಪಲ್ಮುರಿಯೆ ಪರಮವಿ- ನೋದಿಗಳ ಮೈ ಮರೆಯಲೋಸುಗ ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12 ವ್ಯಾಸತೀರ್ಥರ ಒಲವೊ ವಿಠಲೋ- ಪಾಸಕ ಪ್ರಭುವರ್ಯ ಪುರಂದರ ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ ಕೇಶವನ ಗುಣಮಣಿಗಳನು ಪ್ರಾ- ಣೇಶಗರ್ಪಿಸಿ ವಾದಿರಾಜರ ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13 ಹರಿಕಥಾಮೃತಸಾರ ನವರಸ ಭರಿತ ಬಹುಗಂಭೀರ ರತ್ನಾ- ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ ಸರಸ ನರಕಂಠೀರವಾಚಾ- ಜನಿತ ಸುಕುಮಾರ ಸಾತ್ವೀ- ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14 ಅವನಿಯೊಳು ಜ್ಯೋತಿಷ್ಮತಿಯ ತೈ- ಲವನು ಪಾಮರನುಂಡು ಜೀರ್ಣಿಸ- ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ ಶ್ರವಣಮಂಗಳ ಹರಿಕಥಾಮೃತ ಸವಿದು ನಿರ್ಗುಣಸಾರಮಕ್ಕಿಸ- ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15 ಅಕ್ಕರದೊಳೀ ಕಾವ್ಯದೊಳು ಒಂ- ದಕ್ಕರವ ಬರೆದೋದಿದವ ದೇ- ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ ಲೆಕ್ಕಿಸದೆ ಲೋಕೈಕನಾಥನ ಭಕ್ತಿಭಾಗ್ಯವ ಪಡೆದ ಜೀವ ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16 ಒತ್ತಿ ಬಹ ವಿಘ್ನಗಳ ತಡೆದಪ ಮೃತ್ಯುವಿಗೆ ಮರೆಮಾಡಿ ಕಾಲನ ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ ಒತ್ತಿಗೊಳಿಸಿ ವನರುಹೇಕ್ಷಣ ನೃತ್ಯಮಾಡುವನವನ ಮನೆಯೊಳು ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17 ಆಯುರಾರೋಗ್ಯೈಶ್ವರ್ಯ ಯಶ ಧೈರ್ಯ ಬಲ ಸಮಸಹಾಯ ಶೌರ್ಯೋ ದಾರ್ಯ ಗುಣಗಾಂಭೀರ್ಯ ಮೊದಲಾದ ಆಯತಗಳುಂಟಾಗಲೊಂದ- ಧ್ಯಾಯ ಪಠಿಸಿದ ಮಾತ್ರದಿಂ ಶ್ರವ- ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18 ಕುರುಡ ಕಂಗಳ ಪಡೆವ ಬಧಿರನಿ- ಗೆರಡುಕಿವಿ ಕೇಳ್ವಹವು ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ ಬರಡು ಹೈನಾಗುವುದು ಕೇಳ್ದರೆ ಕೊರಡು ಪಲ್ಲವಿಸುವುದು ಪ್ರತಿದಿನ ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19 ನಿರ್ಜರತರಂಗಿಣಿಯೊಳನುದಿನ ಮಜ್ಜನಾದಿ ಸಮಸ್ತ ಕರ್ಮವಿ- ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರತೂಗುವಂದದಿ ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20 ಸತಿಯರಿಗೆ ಪತಿಭಕುತಿ ಪತ್ನಿ ವ್ರತ ಪುರುಷರಿಗೆ ಹರಿಷ ನೆಲೆಗೊಂ- ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ ಸತತ ಮಂಗಳವೀವ ಬಹು ಸು- ಕೃತಿಗಳೆನಿಸುತ ಸುಲಭದಿಂ ಸ ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21 ಎಂತು ವರ್ಣಿಸಲೆನ್ನಳವೆ ಭಗ- ವಂತನಮಲ ಗುಣಾನುವಾದಗ- ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ ಚಿಂತನೆಗೆ ಬಪ್ಪಂತೆ ಬಹು ದೃ- ಷ್ಟಾಂತಪೂರ್ವಕವಾಗಿ ಪೇಳ್ದ ಮ- ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22 ಮಣಿಖಚಿತ ಹರಿವಾಣದಲಿ ವಾ ರಣಸುಭೋಜ್ಯ ಪದಾರ್ಥ ಕೃಷ್ಣಾ ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ ಪ್ರಣತರಿಗೆ ಪೊಂಗನಡ ವರವಾ ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23 ದುಷ್ಟರೆನ್ನದೆ ದುರ್ವಿಷಯದಿಂ ಪುಷ್ಟರೆನ್ನದೆ ಪೂತಕರ್ಮ ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣ ಕೈಪಿಡಿಯುವನು ಸತ್ಯ ವಿ- ಶಿಷ್ಟ ದಾಸತ್ವವನು ಪಾಲಿಸಿ ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24
--------------
ಶ್ರೀದವಿಠಲರು