ಒಟ್ಟು 69 ಕಡೆಗಳಲ್ಲಿ , 32 ದಾಸರು , 67 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀವೇಂಕಟೇಶ ಸುಪ್ರಭಾತ ಶ್ರೀವೆಂಕಟೇಶಂಗೆ ಜಯ ಸುಪ್ರಭಾತ ದೇವಾದಿದೇವಂಗೆ ನವಸುಪ್ರಭಾತ ಪ ಪಾವನ ಶರೀರಂಗೆ ಜಯ ಸುಪ್ರಭಾತ ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ ಅಂದು ಕೌಸಲ್ಯೆಯಣುಗ ರಾಮಾ ಏಳು ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ 1 ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ ಉದ್ಧರಿಸ ಬೇಕಯ್ಯ ಕರುಣಾಂತರಂಗ ಎದ್ದೇಳು ಚೈತನ್ಯ ಪುಣ್ಯದಾತ [ಎದ್ದೇಳು ಕಮಲಾಕಾಂತರಂಗ] 2 ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ ಹದಿನಾಲ್ಕು ಲೋಕಗಳ ಮಾತೆಯೆನಿಸಿ ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ 3 ಸರ್ವಭುವನೇಶ್ವರಿ ಸರ್ವ ಭಕ್ತಂಕರಿ ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ ಸರ್ವಲೋಕೇಶನ ರಾಣಿ ಕಲ್ಯಾಣಿ ಸರ್ವಸನ್ನುತೆ ನಿನಗೆ ಸುಪ್ರಭಾತ 4 ಸಪ್ತರ್ಷಿ ಮಂಡಲವು ಔಪಾಸನೆಯಾಗೆ ತೃಪ್ತರಾಗಿರುತಿಹರು ನಭದ ನದಿಯೊಳು ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ ಒಪ್ಪಿರ್ಪರೇಳೇಳು ವೆಂಕಟೇಶ 5 ಅಜ ನಿರಂಜನ ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು ಶಿರಬಾಗಿ ವಂದಿಪರು ಗುರು ಶುಭವ ಪೇಳುವನು ವರದರಾಜ ಏಳು ವೇಂಕಟೇಶ 6 ಈಗ ವಿಕಸಿತವಾದ ಕಮಲಸೌರಭದೊಡನೆ ರಾಗ ರಸ ತಂಪಿಂಪು ಮಿಳಿತಮಾಗಿ ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ ತ್ಯಾಗಿ ನೀನೇಳಯ್ಯ ವೇಂಕಟೇಶ 7 ಕದಳಿ ಖರ್ಜೂರಗಳ ರಸಯುಕ್ತ ಪಾಯಸ ಮುದದಿ ಸಂಸೇವಿಸುತ ಉತ್ಸಾಹದೀ ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ ಪದುಮನಾಭ ಏಳು ವೇಂಕಟೇಶ 8 ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ ದೇವದೇವನೆ ನಿನ್ನ ನುತಿಸುತಿಹನು ಭಾವರಸಯುತವಾದ ಗಾನಕೇಳುತಿಹುದು ಪಾವನಾತ್ಮನೇ ಏಳು ವೇಂಕಟೇಶ 9 ಸುರಿವ ಮಕರಂದವನು ಹೀರಿ ಹೀರಿ ಅರುಣನುದಯವ ತಿಳಿದು ಅರಳುತಿಹ ಕಮಲದಿಂ ಸರಸರನೆ ಝೇಂಕರಿಸಿ ಬರುತಿರ್ಪುವೈ ಸಿರಿಯ ದುಂಬಿಗಳೇಳು ವೆಂಕಟೇಶ 10 ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ ಕಡೆಗೋಲಿನಿಂ ಮಥಿಸಿ ಹಾಡುತಿಹರು ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ ಪೊಡವೀಶ ನೀನೇಳು ವೇಂಕಟೇಶ 11 ಕಮಲದಿಂದೈತಂದ ದುಂಬಿಗಳು ಸುತ್ತಲಿನ ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ ವಿಮಲಾಂಗ ನೀನೇಳು ವೇಂಕಟೇಶ 12 ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ ಮೂರು ಲೋಕವನಳೆದು ಪಾಲಿಸುವ ಸ್ವಾಮಿ ಮಾರಮಣ ನೀನೇಳು ವೇಂಕಟೇಶ 13 ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು ಭಜಿಸಿ ತವ ದರ್ಶನವ ಕಾಯುತಿಹರು ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ ಗಜವಿನುತ ನೀನೇಳು ವೇಂಕಟೇಶ 14 ಶೌರಿ ನಿನ್ನಾವಾಸ ತಾಣ ವೈಕುಂಠದಿಂದ ನಾರಾಯಣಾದ್ರಿ ಗರುಡಾದ್ರಿ ಎಂತೆಂಬ ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ ಸಾರತರ ನಾಮವೈ ವೇಂಕಟೇಶ 15 ಭುವಿಯ ಗೋಪಾಲಕರು ಅನುಮತಿಯ ಬೇಡುವರು ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು ಭವದೂರನೇ ನಿನಗೆ ಸುಪ್ರಭಾತ 16 ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು ಪವಮಾನನುತ ನಿನಗೆ ಸುಪ್ರಭಾತ 17 ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ ವನ್ನು ಪಡುತಿಹರೆಲ್ಲ ಶರಣ ಜನರು ನಿನ್ನ ದರ್ಶನವೊಂದೆ ಪರಮ ಪದವದನು ಸನ್ನುತಾಂಗನೆ [ತೋರೇಳು]ಸುಪ್ರಭಾತ 18 ಭೂಮಿಪತಿ ಕರುಣಾಂಬುಸಾಗರನೆ| ಧೀರ ಶೂರಾನಂತ ಗರುಡ ವಿಷ್ವಕ್ಸೇನ ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ ನಾರಾಯಣಾ ನಿನಗೆ ಸುಪ್ರಭಾತ|| 19 ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ ಅಮಲಸದ್ಗುಣಧಾಮ ಕೃಷ್ಣ ವೈಕುಂಠ ಸುಮಬಾಣಕೋಟಿ ಸೌಂದರ್ಯನುತ ಮಾರಮಣ ಕಮಲನಯನಾ ನಿನಗೆ ಸುಪ್ರಭಾತ|| 20 ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು ಭಾನುತೇಜನೆ ನಿನಗೆ ಸುಪ್ರಭಾತ 21 ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು ಘನವೈಷ್ಣವರು ಮಂಗಳಂಗಳಂ ಪಾಡುವರು ಮನುಜಪುಂಗವ ನಿನಗೆ ಸುಪ್ರಭಾತ 22 ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು ವಿಮಲ ಮಾನಸರಾಗಿ ನಿನಗಾಗಿ ಕಾದಿಹರು ತಿಮಿರಸಾಗರವನ್ನು ದಾಟಿಸುವ ಪರಮಾತ್ಮ ಕಮನೀಯಗುಣ ನಿನಗೆ ಸುಪ್ರಭಾತ|| 23 ಭಾವನೆಯೊಳೀಯದ್ರಿ ವೈಕುಂಠವಾಗಿಹುದು ಮಾವನಿತೆಯುಪಚಾರದಭ್ಯರ್ಥಿಯಾಗಿಹಳು ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] 24 ಅರುಣೋದಯದೊಳೆದ್ದು ಈ ಸುಪ್ರಭಾತವನು ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ ಪರಮಪುರುಷನು ದಿವ್ಯತಾಣವನು ನೀಡುವನು ಹಿರಿಯರಾ ವಚನವಿದು ಪರಮ ಚರಿತಾರ್ಥ25 ಶರಣಾಗತಿ ಒಂದೆರಡು ಮೂರು ನಾಲ್ಕೈದಾರು ಮೊಗದವರು ಬಂದು ವಂದಿಸುತಿಹರು ಪುರುಷೋತ್ತಮ ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ 26 ನಾನಾಪರಾಧಗಳ ಮಾಡಿರುವೆನಯ್ಯ ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ ನೀನೇ ಸರ್ವಾಧಾರ ಕರುಣಾಂತರಂಗನು ದಾನಶೀಲಾ ಸ್ವಾಮಿ ಶ್ರೀವೇಂಕಟೇಶ 27 ಗೋಪಿಕಾ ಪರಿವೃತನೆ ಪರವಾಸುದೇವನೆ ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ28 ದಶರಥನ ಸುತನಾಗಿ ಜಾನಕಿಯ ಕರವಿಡಿದು ದಶಮುಖಾದ್ಯಸುರರನು ಸಂಹರಿಸಿದಾತ ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ 29 ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ 30 ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ ಸರ್ವದೇವರದೇವ ವೇದವಂದಿತ ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ ಸರ್ವಪೂಜಿತ ನಿನಗೆ ಶರಣು ವೆಂಕಟೇಶ 31 ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ ರಕ್ಷಿಸು ಮನೋಮಯಾ ಮಾಯ ನಿರ್ಮಾಯ ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ 32 ಆವನಾದಿಯನಂತನೆಂದೆನಿಪನೊ ವರವ ಈವ ಕರುಣಾಳುವೋ ಜೀವರಾಶಿಯನೆಲ್ಲ ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ ಶ್ರೀವನಜ ಪದವೆನಗೆ ಶರಣು ವೆಂಕಟೇಶ 33 ವೇದಗಳ ತಂದು ಮಂದರವೆತ್ತಿ ಹರಿಯ ಮೇದಿನಿಯ ನಳೆದ ಭಾರ್ಗವನಾದ ರಾಮನೀ ನಾದೆ ಕಂಸನಕೊಂದೆ ಗೋಪಾಲಕೃಷ್ಣ ನಾದ ಕಲ್ಕೀ ನಿನ್ನ ಚರಣ ವೆಂಕಟೇಶ34 ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ ಮೂರು ಲೋಕವನಳೆದ ಸುಪ್ರಸಿದ್ಧದ ಪಾದ ಮೂರು ಕಣ್ಣಾಂತವನು ಜಪಿಸುತಿರುವ ಪಾದ ಚಾರುತರ ಪದವೆನಗೆ ಶರಣು ವೆಂಕಟೇಶ 35 ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ ಖೂಳ ಶಕಟನನೊದ್ದು ಕೊಂದ ಪಾದ ಚೋಳರಾಯನು ತೊಳೆದು ವಂದಿಸಿದ ಪಾದ ನಾಳೀಕ ಪದವೆನಗೆ ಶರಣು ವೆಂಕಟೇಶ36 ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ ಮಾರಮೋಹಕ ನಿನ್ನ ಚರಣ ವೆಂಕಟೇಶ37 ಮಂಗಳ ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ ಮಾಲ್ಯಪೀತಾಂಬರಾಂಗದ ಶೋಭಿತಂಗೆ ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ ಬಾಲ್ಯಕುಂದದವಂಗೆ ಜಯಮಂಗಳ 38 ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ ಭಕ್ತಿದಾತಾರಂಗೆ ರಮೆಯರಸಂಗೆ ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ ಶಕ್ತಿ ಸ್ವರೂಪಂಗೆ ಶುಭಮಂಗಳ 39 ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ ಶೇಷ ಪಂiÀರ್iಂಕಂಗೆ ಶ್ರೀ ಶ್ರೀನಿವಾಸಂಗೆ ದೋಷಾಪಹಾರಂಗೆ ಜಯಮಂಗಳ 40 ಅರವಿಂದ ವದನಂಗೆ ಅರವಿಂದ ಲೋಚನಗೆ ಅರವಿಂದನಾಭನಿಗೆ ಅರವಿಂದ ಗಾತ್ರಗೆ ಅರವಿಂದ ಪಾದನಿಗೆ ಅರವಿಂದ ಭೂಷನಿಗೆ ಅರವಿಂದ ಹಸ್ತಂಗೆ ಶುಭಮಂಗಳಂ 41 ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ ವಂದಿಪೆನು ಮಂಗಳಾಚರಣೆ ಮಾಡಿ 42 ಫಲಶ್ರುತಿ ಹನ್ನೆರಡು ಮಾಸವು ತಪ್ಪದೆ ಹಾಡಿದರೆ ಮುನ್ನಮಾಡಿದ ಪಾಪವೆಲ್ಲ ಕಳೆಯುವುದು ಪನ್ನಗಾರಿಧ್ವಜನ ಕರುಣೆಯೊದಗುವುದು ಬನ್ನಗುಡುವನರಕಬಾಧೆ ತಪ್ಪುವುದು 43 ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ ಭಾವಭಕ್ತಿಯಲಿಂತು ಹಾಡುವರಿಗೆ ನೋವು ಕಾಲನಭಟರ ಕಾಟನಶಿಪುದು ಹರಿಯ ಭಾವುಕರು ಸತ್ಕರಿಸಿ ಕರೆದೊಯ್ವರು 44 ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು ಒಪ್ಪಿಸುವೆನೈ ನಿನಗೆ ವೇಂಕಟೇಶ| ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| 45
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಅಥ ಹನುಮದ್ವ್ರತ ಕಥಾ ಸುಳಾದಿ ಧ್ರುವ ತಾಳ ವೃತವೆ ಉತ್ತಮ ವೃತವೆಂದು ಪೇಳಿಹರು ಅತುಳ ಜ್ಞಾನನಿಧಿ ವಿಜಯಾಖ್ಯ ಗುರುಗಳು | ಸತತ ಅಧ್ಯಾತುಮ ಅನಂತ ವೃತವೆಂದು | ಕ್ಷಿತಿಯೊಳು ಈ ವೃತಕೆÀ ಸರಿಗಾಣೆನೊ | ಪತಿತ ಮಾನವರ ಉದ್ಧಾರಗೋಸುಗವಾಗಿ ದ್ವಿತಿಯ ಉತ್ತಮ ವೃತವು ಹನುಮದ್ಪ್ರತವೂ | ಯತನ ಜ್ಞಾನೇಚ್ಛಾ ಶಕ್ತ್ಯಾದಿಗಳಿಗೆ ನಿರುತ | ಜತೆಯಾಗಿ ಕಾರ್ಯ ಮಾಳ್ಪ ಜ್ಞಾನಾಖ್ಯವೃತವೊ | ಅತಿಶಯವಾದ ಜ್ಞಾನ ಭಕ್ತಿ ವಿರಕ್ತಿವೀವುದು | ಮತಿವಂತರು ಮನಕೆ ತಂದು ತಿಳಿದು | ಕ್ಷಿತಿಪತಿ ಧರ್ಮರಾಜನೆಸಗಿದ ಮಹಾ ವೃತವೊ | ಪತಿಭಕುತಿಯುಕುತಳಾದ ದ್ರೌಪದಿಯು | ಪತಿ ಮೂರ್ಲೋಕದ ಶ್ರೀ ಕೃಷ್ಣನುಪದೇಶದಂತ್ಯೆ | ಮಿತ ಜ್ಯಾನದಿಂದ ಚರಿತ ವ್ರತವೊ | ಹಿತವಂತ ಹನುಮಂತ ಪಿತ ರಾಮನಿಗೆ ಪೇಳೆ ಆ | ಚ್ಯುತನಾದ ರಾಮನುಮತಿವಾನ್ ಹನು | ಮಂತನ ಭಕುತಿಗೊಲಿದು ಮಾಡ್ಡ ವೃತವೊ | ಸತತ ಸೂತರು ಶೌನಕಾದ್ಯರಿಗಿದರ ಮಹಿಮೆ | ಮಿತಿ ಇಲ್ಲದೇ ಪೇಳಿ ಮಾಡಿಸಿದ ವೃತವೊ | ವೃತತಿಜಾಸನ ಪ್ರಿಯ ಸುತ ಸುಂದರ ವಿಠಲನ ಭ | ಕುತಿ ಜ್ಞಾನವೀವ ಮಹಾ ಶ್ರೇಷ್ಠ ವೃತವೊ 1 ಮಟ್ಟತಾಳ ಜಾನ್ಹವೀ ತೀರದಲಿ ಶೌನಕಾದ್ಯ ಮುನಿಗಳು | ಧ್ಯಾನಿ ಸೂತರ ಕುರಿತು ಸಾನುರಾಗದಿ ನಮಿಸಿ | ಮೇಣು ಭಕುತಿಯಿಂದ ಙÁ್ಞನವಂತರೆ ನಿಮ್ಮಿಂ | ನಿತ್ಯ | ಧೇನಿಸುವೆವು ಹರಿಯಾ ಪುನೀತರ ಮಾಡುವಾ | ಕಾಣೋವನ್ಯ ವೃತವು ಆವುದುಪೇಳೆನಲು | ನಿತ್ಯ ಶೂದ್ರಾದಿ ನಾಲ್ಕು | ಜಾಣ ವರ್ಣರಿಂದ ಮಾಡ್ವದಕ್ಕೆ ಯೋಗ್ಯವೊ | ಏನು ಬೇಡಿದರೆ ತಡಿಯದೆ ಕೊಡುವುದೊ | ಜ್ಞಾನಿ ಜನಗಳಿಗೆಲ್ಲ ಮಂಗಳತಮ ವೃತವು | ಪುತ್ರಾದಿಗಳೀವುದು ಶ್ರೇಣಿ ದಿನ ಪ್ರತಿ ದಿನದಲ್ಲಿ ವರವಿದ್ಯ ಪ್ರದವೊ ಹಾನಿ ಲಾಭಗಳಲ್ಲಿ ಹನುಮಂತನ ನೆನಸೆ | ಮಾನನಿಧಿ ಸುತ ಸುಂದರ ವಿಠಲನ | ಧ್ಯಾನ ಧಾರಣವೀವ ಉತ್ತುಮಾಮಹವೃತವೊ 1 ರೂಪಕ ತಾಳ ಒಂದಾನೊಂದು ಸಮಯದಲ್ಲಿ ಶ್ರೀ ವ್ಯಾಸ ಶಿಷ್ಯ | ವೃಂದದಿಂದೊಡಗೂಡಿ ಯುಧಿಷ್ಠರನ ನೋಡಲು | ಅಂದುಳ್ಳ ದ್ವೈತ ವನಕೆ ನಡೆತಂದರು ಏನಂಬೆ | ಚಂದಾದ ನಿರ್ವೈರ ಮೃಗವೃಂದಗಳಿಂ ಕೂಡಿರುವ | ಕುಂದ ಮಂದಾರಾದಿ ಪುಷ್ಪಫಲ ವೃಕ್ಷಗಳಿಂ ಶೋಭಿಪ | ಕುಂದು ದೂರೋಡಿಸಿದ ಜ್ಞಾನಿಗಳ ಸಮೂಹವು | ಛಂದದಲಿ ಕಾವ್ಯಷಡಂಘ್ರಿ ನಿರತರಾಗಿ | ಮುಂದೆ ಅಧ್ಯಯನ ಶ್ರುತಸಂಪನ್ನರಾದವರು | ಒಂದೊಂದು ವೇದ ಋಗು ಯಜು:ಸಾಮಾಥರ್ವಣ ಒಂದೋಂದು ಶಾಖಾಶಾಸ್ತ್ರದಿ ಪ್ರವಚನಾಸಕ್ತರು | ಮಿಂದು ಹರಿಪದಜಲದಿ ಚತುರ ವೇದ ಘೋಷದಿ | ಸಂದೇಹವಿಲ್ಲದಲೇ ಭಗವದ್ಗೀತಾ ಲೀಲಾ | ಎಂದೆಂಬುವ ಹರಿಕಥಾಮೃತ ಪಾನ ಮಾಡುವ | ಸಂದೋಹ ಮುನಿಗಳಿಗೆ ನಿತ್ಯನ್ನದಾನವ ಮಾಡಿ | ಬಂಧುಗಳಿಂ ಸಹಿತ ಇರುವ ಯುಧಿಷ್ಟರನನ್ನು | ಸುಂದರ ವಿಠಲಾತ್ಮಕ ವ್ಯಾಸದೇವನು | ಅಂದು ದ್ವೈತವನದಲ್ಲಿ ಕೃಪಾ ದೃಷ್ಟಿಯಿಂದ ನೋಡಿದನು 3 ಕೃಷ್ಣದ್ವೈಪಾಯನಾ ಮುನಿಗಳಾಗಮ ಕೇಳಿ | ಕೃಷ್ಣೆ ಸಹಿತಾ ಅನುಜರೊಡನೆ ಕೂಡಿ | ಜೇಷ್ಠನಾದ ಯುಧಿಷ್ಠರನು ತಾ ದೂರ ನಡೆತಂದುವಾ | ಸಿಷ್ಟ ಕೃಷ್ಣಗೆ ಸಾಷ್ಟಾಂಗ ಪ್ರಣಾಮಗಳ ಮಾಡಿ ನಿ | ರ್ದಿಷ್ಟವಾದೆಕಾಂತ ಸ್ಥಳಕೆ ಕರೆತಂದು | ಶ್ರೇಷ್ಠವಾದಾಸನದ ಮೇಲೆ ಕುಳ್ಳಿರಿಸಿ | ಜೇಷ್ಟಾದಿಕೃಷ್ಣೇಯೊಡನೆ ಉತ್ಕøಷ್ಠ ಪೂಜೆಯ ಮಾಡೆ ಪರ ಮೇಷ್ಠಿ ಜನಕನು ತಾನು ತುಷ್ಟ ನಾಹೆ | ಶಿಷ್ಟಾಚಾರದಂತೆ ಕುಶಲ ಪ್ರಶ್ನೆಯು ಮಾಡ್ದ ನಿ | ರ್ದುಷ್ಟ ಭೀಮಾರ್ಜುನರೆ ಅಶ್ವಿನಿಯರೇ ಮನ | ಮುಟ್ಟಿ ಹರಿಪಾದ ಭಜನೆಯ ಮಾಡಿ ಸುಖಿಗಳಾಗಿಹ್ಯರೇ? ಧಿಟ್ಟತನದಲೆ ತಪವನೆಸಗಿ ಕಿರಿಟಯು | ನಿಷ್ಠಿಯಲಿ ಮಹರುದ್ರನೊಲಿಸಿ ಪಾಶುಪತವೆಂಬು | ತ್ಕøಷ್ಟಾಸ್ತ್ರ ಸಂಪಾದನೆಯ ಮಾಡಿದದು ಕೇಳಿ | ಹೃಷ್ಟನಾದೆನೊ ನಾನು ನಿಮ್ಮಿಂದಲಿ ಕೂಡಿ | ಕಷ್ಟಬಡುತಿರುವ ನಿನ ದುಃಖ ಶಾಂತ್ಯರ್ಥ | ಇಷ್ಟವೀವುದಕಾಗಿ ಬಂದಿಹನು ರಾಜಾಯು | ದ್ಯಿಷ್ಟರನೆ ಕೇಳುತ್ತಮ ವೃತವು ನಿನಗೋಸುಗ | ನಿಷ್ಠಿಯಿಂದಲಿ ಧರ್ಮತನಯ ನುಡಿದನು 4 ತ್ರಿವಿಡಿ ತಾಳ ನಮೊ ನಮೊ ತಾತ ಮಹಾ ಖ್ಯಾತವಂತರೆ ನಿಮಗೆ | ನಮೊ ನಮೊ ನಮೊ ಎಂದು ಬಿನ್ನೈಸುವೆ | ಶ್ರಮ ಪರಿಹರವೃತವಾವುದದÀರ ಮಹಿಮೆ | ಸುಮನಸರೊಡೆಯನೆ ಪೇಳಯ್ಯಾ ಜೀಯ್ಯಾ | ಕುಮತಿ ಪರಿಹರಿಸುವ ದೇವತೆ ಆರು ಉ | ತ್ತಮ ನಿಯಮ ಆವುದು ಪೂಜಾ ಕ್ರಮವು | ಶಮೆ ದಮೆವೀವ ನಿಯಮ ತಿಥಿ ಆವುದು | ರಮೆ ರಮಣನೆÉ ಆವ ಮಾಸದಲಿ ಮಾಡೋದು | ಶಮಲ ವಿವರ್ಜಿತ ವ್ಯಾಸದೇವನೆ ನಿಮ್ಮಾ | ಗಮನವು ಎಮ್ಮಯ ಕಷ್ಟ ದೊರೋಡಿಸಲು | ಸಮೀಚೀನ ಮತಿಯಿತ್ತು ಭಕ್ತರ ಪಾಲಿಪುದೆನುತ | ಸಮಚಿತ್ತ ಉಳ್ಳ ಮುನಿಗಳ ಕೂಡ ನಮಿಸಲು | ಭ್ರಮಣ ಮತಿಯ ಕಳೆವ ಹನುಮಾನ್ ಹ ನುಮನ್ನಾಮ ಪುನಃ ಪುನಃ ಸ್ಮರಿಸಿ ಶ್ರೀವ್ಯಾಸರು | ಆಮಮ ಪೇಳಲೇನೊ ಹನುಮದ್ವ್ರತವೋ | ಧೀಮಂತ ಹನುಮಂತನ ನಾಮೋಚ್ಚಾರಣೆಯಿಂದ | ಸಮಸ್ತ ಕಾರ್ಯ ಸಿದ್ದಿಪದು ಸಂಶಯ ಬ್ಯಾಡಿ | ಆ ಮಹಾ ದುಷ್ಟ ಗ್ರಹೋಚ್ಛಾಟನ ಜ್ವರಾದಿ | ತಾಮಸ ರೋಗ ನಿವರಣವಾಗುವದು | ಪ್ರೇಮದಿಂದಲಿ ಕೇಳು ಬಹು ವಾಕ್ಯಗಳಿಂದೇನು ? ಸೀಮೆಗಾಣದ ಅಭೀಷ್ಟಪ್ರದಾಯಕವೊ ನೀ ಮರೆಯದಿರು ಹಿಂದೆ ದ್ವಾರಕಿಯಲ್ಲಿ ಶ್ರೀ ಮದ್ವಿಷ್ಣುವೆ ಕೃಷ್ಣ ಪಾಂಚಾಲಿಯನಿ ಸ್ಸೀಮ ಭಕುತಿಗೆ ವೊಲಿದು ಈ ಮಹಾ ಹ ನುಮದ್ವ್ರತವನ್ನು ಉಪದೇಶಿಸಿ | ನೇಮದಿಂದಲೀ ವ್ರತವು ಮಾಡಿರೆನಲು ಕಾಮಿತಫಲವೀವಾ ವ್ರತದ ಮಹಿಮೆ ಆ | ಸ್ವಾಮಿ ಅನುಗ್ರಹದಿ ಸಂಪದೈಶ್ವರ್ಯದಿ ಆ ಮಹಾ ಸ್ತೋಮಗಳು ಪ್ರಾಪ್ತವಾಗಲು ನಿಮಗೆ | ಈ ಮಹಾ ವೃತ ಮಹಿಮೆ ತಿಳಿಯದ ಪಾರ್ಥನು ಪ್ರೇಮದಿಂ ದ್ರೌಪದಿ ಧರಿಸಿದ ದೋರವ ನೋಡಿ ಹೇ ಮಹಿಷಿಯೆ ಇದೆನೆನ್ನಲಾಗಿ | ತಾಮರಸನಯನೆ ಶ್ರೀ ಹನುಮದ್ದೋರವನ್ನೆ | ಆ ಮಹಾ ಐಶ್ವರ್ಯ ಗರ್ವಿಕೆ ಕ್ರೋಧಾದಿ ನಿ ಸ್ಸೀಮ ಪರಾಕ್ರಮಿ ನುಡಿದ ಅರ್ಜುನನು ಕಾಮಿನಿಯೆ ಕೇಳು ಆ ಹನುಮನೆಂಬೊ ಕಪಿ ನಾ ಮುದದಿ ಧ್ವಜದಲ್ಲಿ ಧರಿಸಿರುವೆನು ಈ | ಮರ್ಮವನು ತಿಳಿಯದೆ ಆ ವನಚರ ಶಾಖಾಮೃಗ | ಕಾಮಿತ ಫಲ ಕೊಡಬಲ್ಲದೆ ಕೇಳಿನ್ನು ಪಾಮರ ವ್ರತದಿಂದ ವಂಚಿಸಿದೆಲ್ಲದೇ ನೀನು ಕಾಮಿ ಜನರ ತೆರದಿಂದಲಿ ಅರ್ಜುನನು ಭಾಮೆ ದ್ರೌಪದಿ ಧರಿಸಿದ ತ್ರಯೋದಶ ಗ್ರಂಥಿಯುಕ್ತ ಆ ಮುದದ ದೋರವನು ಹರಿದು ಬಿಸಾಟಲು ಹೇಮಾದಿ ಸಕಲ ಸಂಪದೈಶ್ವರ್ಯ ರಾಜ್ಯವು ಭೂಮಿ ಸಹಿತ ಪ್ರಾಪ್ತವಾದುದೆಲ್ಲ ಪೋಗೆ | ಶ್ರಿಮದಾಂಧದಿಂದ ಪ್ರಾಪ್ತವ್ಯ ದುಃಖ ಫಲವು | ಪರಿಯಂತ | ರಾಮ ಮನೊರಮನು ಇನಿತು ನುಡಿಯೆ | ಸ್ವಾಮಿ ಆಜ್ಞವ ತಿಳಿದ ದ್ರೌಪದಿ ದೇವಿಯು | ಹೇ ಮಹತ್ಮರೆ ಶ್ರೀವ್ಯಾಸರ ನುಡಿ ನಿಜವೋ ನೇಮಗಳೆಲ್ಲಾ ತಿಳಿಯಲೋಶವೆ ಎಂದಿಗು 5 ಧ್ರುವ ತಾಳ ಕೇಳಯ್ಯಾ ಧರ್ಮರಾಜ ಆಲಸ ಮಾಡದೆ | ಪೇಳುವೆ ನಿನಗೊಂದು ಪುರಾತನ ಕಥೆಯು | ಆಲಿಸಿ ಮನಕೆ ತಂದು ಬಾಳು ಚನ್ನಾಗಿ ನೀನು | ಶೀಲೆ ಸೀತೆಯ ನೋಡುವ ಇಚ್ಛಾಉಳ್ಳ ಮಾ ನಿತ್ಯ ಲಕ್ಷ್ಮಣನೊಡಗೂಡಿ | ಮೇಲಾದ ಋಷ್ಯಮೂಕ ಗಿರಿಯ ಮಧ್ಯದಲ್ಲಿ ಶೀಲ ಭಕುತಿಯುಳ್ಳ ಹನುಮಂತನ ದರ್ಶನಾಗೆ ಆಳುವ ಕಪಿ ರಾಜ್ಯ ಸುಗ್ರೀವನ ಸಖ್ಯವನು ಬ ಹಾಳ ಮತಿಯುಳ್ಳ ವಾಯುಜ ಮಾಡಿಸೆ | ಮಾಸ ಮಳೆಗಾಲವು ವಾಸ ಮಾಡ್ಡ | ಕಾಲದಲಿ ಹನುಮನು ರಾಮದೇವಗೆ ನಮಿಸಿ | ನೀಲ ಮೇಘ ಶ್ಯಾಮ ಶ್ರೀ ರಾಮ ನೀನಿನ್ನ | ಬಾಲನ ಬಿನ್ನಪ ಮನಕೆ ತರಲು | ಪೇಳುವೆ ನಿಮ್ಮ ಸನ್ನಿಧಾನದಲೆನ್ನ ನಾಮ ಮಹಿಮೆ ಮೇಲುಸಿಲೆಯನದ್ಧರಿಸಿದ ಶ್ರೀರಾಮ ನೀನಙ್ಞನೆ | ಕಾಲ ಜನನದಲಿ ಇಂದ್ರನಿಂದಲಿ ಎನ್ನ ಮೇಲಾದ ವಜ್ರಾಯುಧದಿಂದ ಹನುಘಾತಿಸಲು ಭೂಲೋಕದಲ್ಲಿ ಅಂದಿನಾರಭ್ಯ ಹನುಮನೆಂದು ಖ್ಯಾತನಾಗಿ | ಕೇಳಯ್ಯಾ ಅಂಜನಾದ್ರಿಯಲ್ಲಿ ಸೂರ್ಯೋದಯ | ಕಾಲಕೆ ಪ್ರಕಟನಾದ ಬಾಲ ರವಿಯ ನೋಡಿ ಹಣ್ಣೆಂದು | ಮೇಲಾಗಿ ಭಕ್ಷಿಪುದಕೆ ಉಡ್ಡಾಣ ಮಾಡಲಾಗಿ | ಈ ಲೀಲೆಯ ತಿಳಿದು ಲೋಕ ಶಿಕ್ಷಣ ಗೋಸುಗ | ಕಾಲವಜ್ರಾಯುಧದಿಂದ ಹೊಡೆಯಲು ಮೂರ್ಛಿತ | ಬಾಲನಂತೆ ಬಿದ್ದವನೆನ್ನ ನೋಡಿ ಸ್ವಾಹಾ | ಲೋಲನ ಸಖನಾದ ವಾಯುದೇವನು ಎನ್ನ | ಮೇಲಿನ ಪ್ರೀತಿಯಿಂದ ಸರ್ವಜೀವರ ಶ್ವಾಸ | ಕಾಲನಾಮಕ ಭಗವಾನಿಚ್ಛೆಯಂತ ತೃಟಿ | ಕಾಲಬಿಡದೆ ಮಾಡ್ವ ಶ್ವಾಸ ನಿರೋಧಿಸೆ ಶಚಿ | ಲೋಲನಿಂದನ್ನ ಪುತ್ರನ ಕೆಡಹಿರಲವನನ್ನು ಈ | ಕಾಲಲವದಲ್ಲಿ ಕೆಡಹೆನೆನಲು ಆ | ಕಾಲದಲಿ ಬ್ರಹ್ಮಾದಿ ದೇವತೆಗಳು ಸಾಕ್ಷಾತ್ಕಾರರಾಗಿ | ಓಲೈಸಿ ಪೆಳ್ದ ಮಾತು ಎನಗೋಸುಗ ಆಂಜನೇಯಾ | ಬಾಲನೆ ಚಿರಜೀವಿಯಾಗು ನೀನೆ ಪರಾಕ್ರಮಿ | ಮೇಲೆನಿಪ ಶ್ರೀರಾಮನ ಕಾರ್ಯಸಾಧಕನಾಗೆನುತ | ಬಾಲ ಹನುಮನ ಪೂಜೆ ಮಾಡ್ಡರು ದೇವತೆಗಳು | ಮೇಲಾದ ಮಾರ್ಗಶಿರ ಶುದ್ಧ ತ್ರಯೋದಶಿ | ಕಾಲ ಅಭಿಜಿನ್ ಮೂಹೂರ್ತದಲ್ಲಿ ಆರು ಪೂಜಿಪರೊ | ಆಲಸವಿಲ್ಲದೆ ಪುರುಷಾರ್ಥ ಹೊಂದುವರೆಂದು | ತಾಳ ಮ್ಯಾಳರೊಡನೆ ವರವ ನೀಡಿ ಪೋದರು | ಆಲಯಾ ಸ್ವರ್ಗ ಸತ್ಯಾದಿ ಲೋಕಕೆ ಅಂದು ಹೀಗೆ | ಪೇಳೆ ಸುಂದರ ವಿಠಲ ರಘುರಾಮನು ನಸುನಗೆ | ಯಾಲಿ ಒಲಿದು ಹನುಮಗೆ ಹಸನ್ಮುಖನಾಗಿ ಇರಲು 6 ಮಟ್ಟತಾಳ ಭಕುತ ವತ್ಸಲ ನೀನು ಭಕುತರಿಚ್ಛವ ನೀನು | ಭಕುತ ಭಾಂಧವ ನೀನು ಭಕುತರೊಡಿಯ ನೀನು | ಭಕುತ ಪಾಲಕನೆಂಬ ಬಿರುದುಳ್ಳವ ನೀನು | ಭಕುತರಿಂದಲಿ ನೀನು ನಿನ್ನಿಂದಲೆ ಭಕುತರು | ಅಕಳಂಕ ಐಶ್ವರ್ಯ ಸತು ಚಿತು ಆನಂದಾತ್ಮಾ | ಮುಕುತಿ ಪ್ರದಾತನೆ ಸರ್ವ ಸ್ವಾಮಿ ನೀನು | ಸಕಲ ಲೋಕಗಳೊಡೆಯ ನಿನ್ನಿಂದಲೆ ಸರ್ವ ವ್ಯಕುತವಾಗ್ವದು ಸತ್ಯ ಸರ್ವಙ್ಞನು ನೀನು | ಭಕುತರ ಮನದಿಂಗಿತ ತಿಳಿಯದವನೆ ನೀನು | ಅಖಿಳ ಬ್ರಹ್ಮಾಂಡÀರಸನೆ ನಮೊ ನಮೊ ನಮೊ ನಮೊ | ಭಕುತರಿಂದಲೇ ನಿನ್ನ ಖ್ಯಾತಿ ಮೂರ್ಲೋಕಕ್ಕೆ ಭಕುತರೇ ನಿನ್ನಯಾ ಮಹಿಮೆಯ ಹೊಗಳುವರು | ಭಕುತರು ನಿನ್ನಿಂದಲೆ ಕೀರ್ತಿವಂತರÀಹರು | ಅಕುಟಿಲ ಪ್ರಭೋ ನೀನು ನಾ ನಿನ ನಿಜ ಭಕ್ತ | ಸಕಲ ಕಾಲದಲ್ಲಿ ನಿನ್ನನಾ ಮರೆಯದಲೇ | ಮಾಳ್ಪದು ನಿಜವಾಗೆ | ಶಕುತನೆ ಎನ ಕೀರ್ತಿ ನಿನ್ನಿಂದಾಗಲಿ ವಿಭೋ | ಉಕುತಿ ಲಾಲಿಸು ಪ್ರಭೋ ತವಚಿತ್ತವ ಧಾರೆ | ಭಕುತ ಹನುಮಂತ ಇನಿತು ವಿಙÁ್ಞಪಿಸಿ ನಿಲಲು | ಪ್ರಕಟಿತ ಅಶರೀರ ವಾಕ್ಯವು ಬಿಡದಲೆ | ಸಕಲ ನುಡಿ ಹನುಮಾ ಸತ್ಯನಾಡಿದನೆನಲು | ಸುಕರ ಏಕಮೇವ ದ್ವಿತಿಯ ಸುಂದರವಿಠಲ ತುಷ್ಟನಾಹೆ 7 ಝಂಪಿತಾಳ ಮಾಸಮಾರ್ಗಶೀರ್ಷ ಶುದ್ಧ ತ್ರೊಯೋದಶಿ | ಆ ಸುಮುಹೂರ್ತ ಜಯಾ ಅಭಿಜಿನ್ ಕಾಲಕೆ | ಶ್ರೀಶರಾಮನು ಹನುಮದ್ವ್ರತವ ಮಾಡ್ಡ ತ್ರಯೋ | ದಶ ಗ್ರಂಥಿüಯುತ ಹರಿದ್ರಾದೋರಗಳಲಿ | ಭಾಸುರಾಮತಿವೀವ ಹನುಮನಾವ್ಹಾನಿಸಿ | ಪೇಶಲಾಪೀತಗಂಧ ವಸ್ತ್ರ ಪುಷ್ಟಿಗಳಿಂದಲೀ | ಶ್ರೀಸೀತೆವಕ್ಷಸ್ಥಳದಿಪ್ಪ ನಿತ್ಯಾವಿಯೋಗಿನಿ | ಆ ಸುಗ್ರೀವ ಲಕ್ಷ್ಮಣಾದಿಗಳೊಡನೆ ನೆಸಗಿದನೇನೆಂಬೆ | ಲೇಶಬಿಡದೇ “ಓಂ ನಮೋಭಗವತೇ ವಾಯುನಂದನಾಯ” | ಈ ಸುಮಂತ್ರವ ಜಪಿಸಿ ತಾ ಸಹಸದಿ ಮಾಡ್ಡನೋ | ದೇಶಪರಿಮಿತ ಪ್ರಸ್ಥತ್ರಯೋಶಗೋಧೂಮವನು | ಆ ಸುದಕ್ಷಣೆ ತಾಂಬೂಲ ಸಹ ದ್ವಿಜರಿಗಿತ್ತದಾನ | ಮೀಸಲಾ ಮನದಿ ಈ ಸತ್ಕಥೆಯನು ಕೇಳಿ | ಭೇಶಮುಖಿ ಸೀತಿಯಳ ಕೊಡ್ದನೆಂಬದು ಖ್ಯಾತಿ | ಆ ಸತ್ಯಲೋಕರಿಗೆ ಆದುದು ಅಚ್ಚರವೆ ಪೂರ್ಣಕಾಮನಿಗೆ | ಕ್ಲೇಶನಾಶನವು ಸುಗ್ರೀವನಿಗೆ ವಿಶೇಷವಾದುದು ಸತ್ಯವೆನ್ನಿ | ತೋಷದಲಿ ವಿಭೀಷಣ ಶ್ರೀರಾಮನಾಙÉ್ಞಯಿಂ ಮಾಡ್ಡು | ದೇಶಲಂಕೆಯ ರಾಜ್ಯವನು ಪಡೆದನು | ಹೇ ಸುಮತಿಯೇ ಕೇಳಂದಿನಾರಭ್ಯ ಭೂಲೋಕಕೆ | ಲೇಸುವಿಶ್ರುತವಾದಿತೈ ಹನುಮದ್ವ್ರತವೂ | ಪರಿಯಂತ ಮಾಡ್ಡುದ ಕೀಸು ಉದ್ಯಾಪನೆಯಯ್ಯಾ ಆದಿ ಮಧ್ಯಾಂತಕೆ | “ಮಾಸಾನಾಂ ಮಾರ್ಗಶೀರ್ಷೋಹಂ” ಎಂದು ಗೀತೆÀಯಲಿ ಆ ಸ್ವಾಮಿ ದಿವ್ಯನುಡಿಯುಂಟು ಕೇಳ್ ಧರ್ಮಜನೆ | ಸ್ತ್ರೀಸಹಿತ ಅನುಜರೊಡನೇ ಈ ವ್ರತವನು | ಮೇಶನಾಜ್ಞೆಯಿದೆಂದು ಮಾಡಲು ನಿನಗೆ ರಾಜ್ಯ | ಕೋಶ ಭಾಂಡಾರಪ್ರಾಪ್ತಿಯಾಗುವದು | ಲೇಶ ಸಂಶಯ ಬ್ಯಾಡೆನಲು ಶ್ರೀ ವ್ಯಾಸ | ಆ ಸುಂದರ ವಿಠಲನ ಭಕುತರು ಮುದಭರಿತರಾಗೆ 8 ರೂಪತಾಳ ರವಿಯು ವೃಶ್ಚಿಕ ರಾಶಿಗೆ ಬರಲಾಗಿ | ಸವೆಯಾದ ಪದವೀವ ವ್ರತವಮಾಡುವದಕ್ಕೆ | ಕವಳಾ ಅಜ್ಞಾನಾಖ್ಯ ರಾತ್ರಿಕಳೆದು | ಸುವಿಮಲಾಜ್ಞಾನಾಖ್ಯ ಪ್ರಾತಃ ಕಾಲದಲೆದ್ದು | ಕವಿವ್ಯಾಸರ ಮುಂದೆ ಮಾಡಿ ಧರ್ಮಜನು | ಸುವಿವೇಕಬುದ್ಧಿಯಿಂ ಸ್ನಾನಾದಿಗಳ ಮಾಡಿ | ಹವಿಷಾದಿ ದ್ರÀ್ರವ್ಯಗಳಲಿ ಹರಿಯಚಿಂತಿಸಿ ಮಾ | ಧವÀನಾಜ್ಞೆಯಂತೆ ಉದ್ಯಾಪನವಂಗೈದು | ಕವ್ಯವಾಹನನಲ್ಲಿ ಮೂಲಮಂತ್ರದಿಂದ | ಲವಕಾಲ ಬಿಡದಲೆ ವೇದಸೂಕ್ತಗಳಿಂ ಹೋಮಿಸಿ | ನವಭಕುತಿಯಲಿ ಹನುಮಂತನ ವ್ರತಾಚರಿಸಲು | ಹವಣಿಸಿ ಸಂವತ್ಸರವು ಪೋಗಲು ಪಾಂಡವರು | ಬವರದಲ್ಲಿ ಕೌರವರಗೆ
--------------
ಸುಂದರವಿಠಲ
ಆರ್ತಭಾವ ಸುಳಾದಿ ಧ್ರುವತಾಳ ವೊಂದು ತೋರೆನಗರವಿಂದನಯನ ಮಂದಾಕಿನಿಯ ಪಡೆದ ಮುದ್ದು ಚರಣ ಸುಂದರಾಂಗ ತೋರೆನಗೆ ಸುರೇಂದ್ರನಾಥ ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ ಇಂದಿರೆ ಕರಕಮಲದಿಂದ ಪೂಜಿತನಾದ ಚಂದ್ರವದನ ನಿನ್ನ ಚೆಲುವ ಪಾದ ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ ವಂದ್ಯ ನಿನಗೆ ಕೋಟಿ ನಮೋ ನಮೋ ಎಂದು ಬೇಡುವೆ ದಯಾಸಿಂಧು ಎನಿಸಿದಾತ ಕಂದನಂದದಿ ನೋಡಿ ಸಲಹೋ ಎನ್ನ ಮಂದಬುದ್ಧಿಯ ಮಹಾಮದಡ ಪಾಮರ ಭವ ಬಂಧನದೊಳು ಸಿಲುಕಿ ನೊಂದೆನಯ್ಯ ಸಂದೇಹ ಮಾಡದೆ ಸಲಹದಿದ್ದರೆ ನಿನ್ನ ಹೊಂದಿ ಬಾಳುವುದೆಂತೊ ಮುಂದರಿಯೆ ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ ತಂದು ನೀಡೆನಿಗೆ ಇಂದೀವರಾಕ್ಷ 1 ಮಠ್ಯತಾಳ ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ ಜಗದುದರನೆ ನಿನ್ನ ಜಾಣತನವ ಬಿಟ್ಟು ಅಗಣಿತಗುಣಮಹಿಮ ಅಂತರಾತ್ಮಕ ದೇವ ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ ಚಿಗುರುದೋಷದಕುಡಿಯ ಚಿವುಟಿ ಹಾಕುತ ನಿನ್ನ ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ 2 ವಚನ ಸಕಲ ಸ್ನಾನವು ನೇಮ ಹೋಮ ಜಪಂಗಳು ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು ಸಕಲ ಪುರಾಣ ವೇದಾದಿಗ್ರಂಥಗಳು ಸಕಲ ಕಾರ್ಯವು ಸರ್ವೇಷ್ಟ ಫಲಂಗಳು ಸಾಯುಜ್ಯ ಪದವಿಗಳು ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ ಸಾರಥಿ ಸಮದೃಷ್ಟಿಲಿ ನೋಡಲು ಸಕಲಸಿದ್ಧ್ದಿಯು ಸರಿಯಾಗಿ ಕೈಗೂಡೋದು ಶಕಟಸುರಾಂತಕ ಕಕುಲಾತಿ ಮಾಡದೆ ಬಕನ್ವೈರಿಯೆನ್ನ ಭಾರವ ನೀ ವಹಿಸಲಿ ಬೇಕೊ ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ ಭಕುತಿಜ್ಞಾನದಲಿಡೊ ಭಯಹಾರಿ ಎನ್ನ 3 ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ ದಪರಾಧವೆಣಿಸದೆ ನೀ ಕರುಣದಲೆ ಸಾಂ- ದೀಪಗೆ ಸುತರನಿಟ್ಟ ಪಯಾಂಬುಧಿವಾಸ ಕೋಪದಿ ಬಯ್ದ್ದಾ ಶಿಶುಪಾಲಗೊಲಿದೆಯೊ ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ ಕಾಪಾಡೊ ಈ ಭವಕೂಪದೊಳಗೆ ಬಿದ್ದೆ ನೀ ಪಿಡಿಕೈಯ ದಯಾಪರಮೂರುತಿ ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ- ಸೂಪರಣನಂತೆ ದೂರೇನೋ ಎನ್ನ ಸ- ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ- ತಾಪ ಬಡಿಸದಿರೆಂದಾಪನಿತು ಪೇಳ್ವೆ ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ ನಾ ಪೊಂದಿದೆನೊ ದೊರೆ ನೀ ಪೊರೆಯೆಂದು 4 ಜತೆ ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ ಲೇಸು ನೀಡೆನಗೆ ಸದಾ ಸುಮಂಗಳವ 5
--------------
ಹರಪನಹಳ್ಳಿಭೀಮವ್ವ
ಇಂದ್ರಾಕ್ಷಿ ಸಲಹೆ ಬಂದು | ಸಂರಕ್ಷಿಸಿ ಇಂದ್ರಾಕ್ಷಿ ಸಲಹೆ ಬಂದು ಪ ಚಂದ್ರಶೇಖರನಂಕ ಸಂಸ್ಥಿತೆ ಚಂದ್ರ ಬಿಂಬಾನನೆ ದಯಾನ್ವಿತೆ ಇಂದ್ರ ಮುಖ ಸುರಗಣ ಸಮರ್ಚಿತೆ ತಂದ್ರ ಪರಿಹೃತೆ ಭಕ್ತತತಿ ಹಿತೆ ಅ.ಪ. ಅರಿಯದ ತರಳನಮ್ಮ | ನಿನ್ನಂಘ್ರಿ ಸೇವಿಪ ಮೆರೆವ ಭಾಗ್ಯವ ನೀಡಮ್ಮ | ಮರೆಯದಿರಮ್ಮಾ ಶರಣ ಜನರನು ಪೊರೆವೆನೆನ್ನುತ ಕರದಿ ಪಿಡಿದಿಹೆ ಬಿಡದೆ ಉನ್ನತ ದರವಿಯನು ಸಿದ್ದಾನ್ನ ಪಾತ್ರೆಯ ಕರುಣಿ ತ್ರಿಜಗಜ್ಜನನಿ ಸುಗುಣಿಯೆ 1 ನಿತ್ಯಾನಂದಿನಿ ಮೋಹಿನಿ | ಸುಗತಿ ಪ್ರದಾಯಿನಿ ಭೃತ್ಯಾನುಗ್ರಹ ಕಾರಿಣಿ | ಬುಧ್ಯಾಭಿಮಾನಿ ನಿತ್ಯಮಂಗಳೆ ಭೃತ್ಯವತ್ಸಲೆ ಸತ್ಯರೂಪಿಣಿ ಮೃತ್ಯುನಾಶಿನಿ ನಿತ್ಯತ್ವತ್ಪದ ಭಜಿಪ ಸಂಪದ- ವಿತ್ತು ಪಾಲಿಸೆ ಶ್ರೀ ಕಾತ್ಯಾಯಿನಿ 2 ಭೀಮಾ ಭೈರವನಾದಿನಿ | ಕುಮಾರ ಜನನಿ ಕಾಮನಿಗ್ರಹನ ರಾಣಿ | ವರವರ್ಣಿನಿ ಬ್ರಾಹ್ಮಿ ವೈಷ್ಣವಿ ಬ್ರಹ್ಮಚಾರಿಣಿ ಚಾಮುಂಡೇಶ್ವರಿ ಕೋಲರೂಪಿಣಿ ಭ್ರಮರಿ ಶಾಕಾಂಬರಿ ನೃಸಿಂಹಿಣಿ ಅಮಿತರೂಪಿಣಿ ಅಹಿತ ಮಾರಿಣಿ 3 ಸರ್ವಮಂಗಳ ಮಾಂಗಲ್ಯೆ | ಸರ್ವಾರ್ಥದೆ ಶಿವೆ ಶರ್ವನರ್ಧಾಂಗಿಯೆ | ಪರ್ವತನ ತನಯೆ ಶರ್ವಬ್ರಹ್ಮರ ವರದಿ ಕೊಬ್ಬಿ ಸು- ಪರ್ವರನು ಕಂಗೆಡಿಸೆ ದನುಜರು ಸರ್ವಶಕ್ತಳೆ ಮುರಿದು ಖಳರನು ಉರ್ವಿಭಾರವ ನಿಳುಹಿ ಪೊರೆದೌ 4 ಅಜಿತೆ ಭದ್ರದೆ ಆನಂದೆ | ನಿನ್ನನು ಬಿಡದೆ ಭಜಿಪರ ಪೊರೆವಳೆಂದೆ | ನಾನಿಂದು ಬಂದೆ ಕುಜನಮರ್ಧಿನಿ ಕುಟಿಲ ಹಾರಿಣಿ ಗಜಗಮನೆ ಗಂಭೀರೆ ಗುಣಮಣಿ ವೃಜಿನ ಪರಿಹರೆ ವಿಘ್ನಸಂಹರೆ ನಿಜ ಪದಾಂಬುಜ ಭಜಕನೆನಿಸಿ 5 ಶಿವದೂತಿ ಪರಮೇಶ್ವರಿ | ರುದ್ರಾಣಿ ಚಂಡಿಕೆ ಶಿವೆ ಭವೆ ಜ್ಞಾನೇಶ್ವರಿ | ಸೌಂದರ್ಯಲºರಿ ಭುವನ ಮೋಹಿನಿ ದೈತ್ಯನಾಶಿನಿ ತಾಪ ಜ್ವರ ನಿವಾರಿಣಿ ಕವಿಭಿರೀಡಿತೆ ದೇವ ಪೂಜಿತೆ ವಿವಿಧ ಫಲಗಳ ಒಲಿದು ಕೊಡುವಳೆ 6 ಶೃತಿ ಸ್ಮøತಿ ಶ್ರದ್ಧೆ ಮೇಧಾ | ವಿದ್ಯಾಸರಸ್ವತಿ ಧೃತಿ ಶಾಂತಿ ಕಾಂತಿ ವಾದಾ | ಎನಿಸುತ್ತ ಮೆರೆವ ವಿತತ ಮಹಿಮಳೆ ವಿಶ್ವತೋಮುಖೆ ಅತುಳ ಭುಜಬಲೆ ಭದ್ರಕಾಳಿಯೆ ಪಾವನಿ ಸತ್ವಶಾಲಿನಿ ಸತಿ ಶಿವಪ್ರಿಯೆ ನೀಡಿ ಸುಮತಿಯ 7 ಅರಿದರಾಂಕುಶ ಮುಸಲ | ಮುದ್ಗರಚಾಪ ಮಾರ್ಗಣ ಪಾಶ ಪರಶು ಘಂಟಾ ಶಕ್ತಿ ಪಾತ್ರೆಯು ವರಗದಾಭಯ ಕರದೊಳೊಪ್ಪುತ ದುರುಳರನು ಸಂಹರಿಸಿ ಸಂತತ ಸುರನರೋರಗರನ್ನು ಪೊರೆಯುವ 8 ಮಾರಿ ಮಸಣಿ ಹೆಮ್ಮಾರಿ | ಕರೆಕರೆದುಗೊಳಿಸುವ ಕ್ರೂರ ಶಾಕಿನಿ ಡಾಕಿನಿ | ಪೂತಣಿಯೆ ಮುಖರು ಘೋರ ರೂಪದಿ ಬಂದು ಪೋರರ ಗಾರುಗೊಳಿಸುತ್ತಿರಲು ತವಪದ ಸಾರಿ ನೆನೆದರೆ ತೋರಿ ಹಿಮ್ಮಡಿ ದೂರ ಸರಿವರು ಮುಗಿದು ಕರಗಳ 9 ತಾಪತ್ರಿತಯ ತಪ್ತರ | ಆಹ್ಲಾದಪಡಿಸಲು ಗೋಪತಿ ಮುಖವ ತೋರ | ಕೃಪಾಂಬುನಿಧಿಯೆ ತಾಪಸಾರಾಧಿತ ಪದಾಂಬುಜೆ ಶ್ರೀಪತಿಯ ಸೊದರಿಯೆ ನೀ ನಿಜ- ರೂಪುದೋರಲು ಪಾಪತಾಪ ಪ್ರ- ಳಾಪ ಮಾಡದೆ ರಾಪುಗೈವುದೆ 10 ದುರ್ಗಮ ಸಂಕಟದಿ | ಬಿದ್ದಿಹೆನಮ್ಮಾ ನಿರ್ಗಮ ಕಾಣೆನಮ್ಮಾ | ಉದ್ಧರಿಸಮ್ಮಾ ದುರ್ಗದಿಂತಾರಿಸುವೆ ಭಕ್ತರ ದುರ್ಗೆ ನಾಮಾಂಕಿತದಿ ಎಂಬರು ಕರವ ಸು- ಮಾರ್ಗ ತೋರಿಸೆ ದುರ್ಗೆ ಜನನಿಯೆ 11 ಸುರಾಸುರ ಸಂಗ್ರಾಮದಿ | ಮುರವೈರಿ ದಯದಿ ಸುರರು ಗೆಲ್ಲರು ಮುದದಿ | ಗರ್ವಿಸಲು ಭರದಿ ಹರಿಯ ರೂಪಾಂತರದಿ ತೃಣವನು ಧರೆಯೊಳಿರಿಸುತ ಬಲ ಪರೀಕ್ಷಿಸಿ ಸುರರು ಜಯಿಸದೆ ಮರುಳರಾಗಲು ಬರದೆ ಪರತತ್ವವನು ಕರುಣದಿ 12 ಕಿಂಕರ ಶಂಕರಿಯೆ | ಶತ್ರು ಭಯಂಕರೆ ಓಂಕಾರೆ ಹೂಂಕಾರೆಯೇ | ಸ್ಮಿತ ಅಟ್ಟಹಾಸೆ ಪಂಕಜಾಂಬಕಿ ರಕ್ತನಯನ ಕ ಳಂಕಮುಖಿ ಅತ್ಯುಗ್ರವದನೆ ನಿ ಶ್ಯಂಕ ಬಿಂಕದಿ ಬಂದೆ ಕಾಲದಿ ಮಂಕುಹರೆ ಸಂಕಟದೆಯೆನಿಸುವೆ 13 ರಕ್ತಬೀಜಾಸುರನ | ರಕ್ತವನು ಹೀರಿದ ಶಕ್ತಳೆಂದೆನುತ ನಿನ್ನ | ನಂಬಿದೆನು ಎನ್ನ ಉಕ್ತಿಲಾಲಿಸಿ ಒತ್ತಿ ವಿಘ್ನವ ಇತ್ತು ಜ್ಞಾನ ವಿರಾಗ ಭಕ್ತಿಯ ಮುಕ್ತಪಾವನ ಮಾಡಿ ಸಂತತ ಮುಕ್ತಿಕಾಂತನ ಸ್ಮರಣೆ ಪಾಲಿಸಿ14 ಮಹಿಷನ ಸಂಹರಿಸಿ | ಮಹಿಯನ್ನು ಪಾಲಿಸಿ ಮಹಿಸೂರೆ ನೆಲೆಯೆನಿಸಿ | ಪತಿಸಹಿತವಸಿಸಿ ಮಹಿಪತಿಗಳಾದಿಯಲಿ ಸರ್ವರಿಂ ಅಹರಹರ್ ಸೇವೆಯನು ಕೊಳುತ ಮಹಿಮೆ ತೋರುತಿರುವೆ ಪ್ರತಿದಿನ ಅಹಹ ಬಣ್ಣಿಸಲೊರೆವೆ ನರರಿಗೆ 15 ಚಂಡ ಮುಂಡರ ಮರ್ದಿಸಿ | ಚಾಮುಂಡಿಯೆನಿಸಿ ಖಂಡೆಯವನು ಝಳಪಿಸಿ | ಪುಂಡರನು ವಧಿಸಿ ಖಂಡ ಪರುಶುವಿನಂತೆ ಅದÀಟರ ರುಂಡಮಾಲೆಯ ಕೊಂಡು ಭೂತಗ- ಳ್ಹಿಂಡು ಡಿಂಡಿಮ ಡಂಡೆಣಿಸಲು ತಾಂಡವಾಡಿದ ಚಂಡಕಾಳಿಯೆ 16 ಶುಂಭ ನಿಶುಂಭರನು | ಕುಂಭಿಣಿಗೆ ಕೆಡಹೆ ಸುರರು | ಕುಂದುಭಿಯ ಹೊಡೆಯೆ ಡೊಂಬ ಕೊಳಾಸುರನ ಸೂಕರ ಡಿಂಬ ತಾಳುತ ಸೀಳಿ ದೈತ್ಯ ಕ- ದಂಬವೆಲ್ಲಕೆ ಕಂಭ ಸಂಭವ ನಿಂಬು ರೂಪವ ನಂಬಿ ತೋರಿದೆ 17 ಸಕಲ ಶಕ್ತ್ಯಾತ್ಮಕಳೆ | ಭುವಿಯಲಿ ಈ ಪರಿ ಪ್ರಕಟಳಾಗುತ ಖಳರ | ಕಟಕವನು ತರಿದು ಭಕುತವರ್ಗಕೆ ಬಂದ ಸಂಕಟ ನಿಕರ ಪರ್ವತ ವಜ್ರವೆನಿಸುತ ಮುಕುರದಂದದಿ ಪೊಳೆದು ಪೊರೆಯುವೆ ವಿಕಟನಾಮದಿ ನಿಕಟದಿರುತ 18 ಜ್ಞಾನೇಚ್ಚಾ ಕ್ರಿಯ ರೂಪಳೆ | ನಿನ್ನನು ನುತಿಸಿ ಆನತಿಸಿದವರಿಗೆ | ಪ್ರಸನ್ನಳಾಗಿ ಮಾನ ಸತಿಸುತ ಧ್ಯಾನ ಧನಮನೆ ಜ್ಞಾನ ಭಕ್ತಿ ವಿರಕ್ತಿ ಮುಂತವ ದೇನು ಬೇಡಲು ಕೊಡುವೆ ನಿನ್ನ ಸಮಾನರಾರನು ಕಾಣೆ ಜಗದೊಳು 19 ಅಂಗನಾಮಣಿಯರಿಗೆ | ಮಾಂಗಲ್ಯವೃದ್ಧಿಗೆ ಮಂಗಳಗೌರಿಯೆಂದು | ಪ್ರಸಿದ್ಧಿಗೊಂಡು ರಂಗುಮಾಣಿಕದ್ಹಸೆಯ ಪೀಠದಿ ಮಂಗಳದ್ರವ್ಯಗಳಿಂದೊಪ್ಪುತ ಮಂಗಳೇಕ್ಷಣದಿಂದ ಕುಳಿತಿಹೆ 20 ವೈದ್ಯ ಜ್ಯೋತಿಷ ಪುರಾಣ | ವೇದಾಂತ ಮುಂತಹ- ಗಾಧ ಗ್ರಂಥಗಳನು | ನಿಜಪತಿಯ ಮುಖದಿ ಸಾಧಿಸಿದೆ ಸಜ್ಜನರಿಗೋಸುಗ ಬೋಧಿಸಿದೆ ಗುಹ ಗಣಪ ಮುಖರಿಗೆ ಆದಿದೇವನ ಒಲಿಮೆ ಪಡೆಯಲು ಹಾದಿ ತೋರಿದೆ ಹೇ ದಯಾನಿಧೆ 21 ಅಷ್ಟಬಾಹುಗಳಿಂದಲಿ | ಅಷ್ಟಾಯುಧಂಗಳ ದಿಟ್ಟತೆಯಿಂ ಧರಿಸಿ | ಅಷ್ಟಾತ್ಮನಂವೆರಸಿ ಶಿಷ್ಟ ನಾಲ್ಮಡಿ ಕೃಷ್ಣ ಭೂಪನ ಇಷ್ಟದೇವತೆಯಾಗಿ ನೆಟ್ಟನೆ ಬೆಟ್ಟದಲಿ ರಂಜಿಸುವೆ ಭಕ್ತರಿಷ್ಟ ಹರಿಸುತ ಕೊಟ್ಟಭೀಷ್ಟವ 22 ಸಂತರ ನುಡಿಗಳು | ನಾನಾಂತು ನಿನ್ನಯ ಚಿಂತಿತಾರ್ಥದ ಪದವ | ಸ್ವಾಂತದಲಿ ತಂದು ಇಂತು ತುತಿಸಿದೆನರಿಯೆನನ್ಯಯಥ ಪಂಥವನು ಎನ್ನಂತರಂಗವ ನಂತು ತಿಳಿದಿಹೆ ಜನನಿ ಕೊಡು ಶ್ರೀ- ಕಾಂತ ಭಕ್ತಿಯ ಮುಂತೆ ಕರುಣದಿ 23
--------------
ಲಕ್ಷ್ಮೀನಾರಯಣರಾಯರು
ಏಳಯ್ಯ ಸದ್ಗುರುರಾಯ | ಈಗ ಏಳು ತುರಗ ಸೂತನುದಯಿಸುವ ಸಮಯ ಪ ಎದ್ದು ಶಿಷ್ಯರ ಕರೆಯಬೇಕು | ಗುರು ಇದ್ದ ದೋಷವ ಕಳೆಯಬೇಕು ಪರಿ ಶುದ್ಧರ ಮಾಡಿ ನೀನುದ್ಧರಿಸಬೇಕು 1 ಭಾಗವತ ಶಾಸ್ತ್ರವಿಚಾರ ಮುರೆರಡು ವಿಧ ಭೇದ ತಾರತಮ್ಯ ಸಾರುತ ಸಲಹೋ ಶಿಷ್ಯಪರಿವಾರ 2 ಪದಸುಳಾದಿಗಳ ಕೇಳಬೇಕು | ಕೇಳಿ ಅದರೊಳಿರುವ ತತ್ವವಿವರಿಸಬೇಕು ಮದಡತನವ ಕಳೆಯಬೇಕು ನಿನ್ನ ಪದ ನಂಬಿದವರಿಗೆ ಮುದಗರಿಯ ಬೇಕು 3 ಸತ್ಯನಾರಾಯಣ ಕಥೆಯ | ಬಹುವಿಸ್ತಾರವಾಗಿ ನೀ ಬಿತ್ತರಿಸಯ್ಯ | ಭೃತ್ಯರಾ ಮಾಯೆ ಓಡಿಸಯ್ಯ ಅಜ್ಞಾನ ಜ್ಞಾನ ಭಕ್ತಿ ವೈರಾಗ್ಯ ಸಂಪತ್ತು ನೀಡಯ್ಯ 4 ಒಂದೂರು ನಿಲಯನೆ ಏಳೊ ಶಾಮ ಸುಂದರವಿಠಲನ ಮಂದಿರನಾಳೋ ಬಂದ ನಿಂದೆಗಳೆಲ್ಲ ಹೂಳೋ ನಿನ್ನ ಪೊಂದಿದ ನಮ್ಮನ್ನು ಅಗಲಿದೆ ಆಳೊ 5
--------------
ಶಾಮಸುಂದರ ವಿಠಲ
ಕಂಡೆ ಕಂಡೆ ಸ್ವಾಮಿಯ ಕಂಡೆ ಕಂಡೆ ನಾ ಬ್ರಹ್ಮಾಂಡದೊಡೆಯನ ಪಾಂಡವರ ಪರಿಪಾಲಿಸುವನ ಪ್ರ- ಚಂಡ ಅಸುರರ ಶಿರವ ಚಕ್ರದಿ ಚೆಂಡನಾಡಿದ್ದ ಚೆಲುವ ಕೃಷ್ಣನ ಪ ಪಾದನಖದಿ ಭಾಗೀರಥ್ಯುದಿಸಿದಳು ಈರೇಳು ಲೋಕವನಿಟ್ಟ ಉದರದೊ- ಳಾದಿ ಮೂರುತಿ ಸಾರ್ವಭೌಮ 1 ಎಳೆದುಳಸಿ ಶ್ರೀವತ್ಸ ಕೌಂಸ್ತುಭ ಅ- ರಳು ಮಲ್ಲಿಗೆ ಹಾರ ಪದಕವು ಕೊ- ವೈಜಯಂತಿ ಮಾಲೆಯಂ- ತ್ಹೊಳೆವೊ ಮಾಣಿಕಾಭರಣ ಭೂಷಿತ 2 ಶೀಘ್ರದಲಿ ಜರೆಸುತನ ವಧÉ ಮಾ ಡ್ಯಜ್ಞದಲಿ ಶಿಶುಪಾಲರಂತಕ ರುಕ್ಮಿಣೀಪತಿ ಧರ್ಮಭೀಮರಿಂ- ದಗ್ರಪೂಜೆ ತಕ್ಕೊಂಡ ಕೃಷ್ಣನ 3 ಕಂಕಣ ಕರದಲಿ ಶಂಖ ಚಕ್ರವು ಅರ- ವಿಂದ ರೇಖವು ಚರಣದಲಿ ಪಂಕಜಾಕ್ಷನ ಮುಖದ ಕಾಂತಿಯು ಶಂಕೆಯಿಲ್ಲದೆ ಸೂರ್ಯರಂದದಿ 4 ಎಂಟು ಮಂದ್ಯೆರಡೆಂಟು ಸಾವಿರ ಸತಿಯ- ರಿಂದ ದ್ವಾರಾವತಿಯನಾಳಿದ ಪತಿತಪಾವನ ಪಾರಿಜಾತವ ಸತಿಗೆ ತಂದ ಶ್ರೀಪತಿಯ ಪಾದವ 5 ನಳಿನಮುಖಿ ದ್ರೌಪದಿಯು ಕರೆಯಲು ಸೆಳೆಯೆ ವಸ್ತ್ರ ಅಕ್ಷಯವ ಮಾಡಿಸಿ ಖಳರ ಮರ್ದನ ಕರುಣ ಸಾಗರೆಂ ದಿಳೆಯೊಳಗೆ ಹೆಸÀರಾದ ಕೃಷ್ಣನ 6 ನಂಬಿದವರನು ಬಿಡದೆ ತಾನಿ- ದ್ದಿಂಬಿನಲಿ ಸ್ಥಳಕೊಟ್ಟು ಕರೆವನು ಸುಂದರಾಂಗ ತಾ ಸೋಮಕುಲದಲಿ ಬಂದುದಿಸಿದ ಭೀಮೇಶ ಕೃಷ್ಣನ 7
--------------
ಹರಪನಹಳ್ಳಿಭೀಮವ್ವ
ಕಾಂತೆ ದ್ರೌಪತಾದೇವಿಗೆಂತು ಮರುಳಾದಿರಿಭ್ರಾಂತಿ ಹಿಡಿತೇನೊ ಏ ಹೀನ ಎಂಥ ನ್ಯಾಯವಯ್ಯಈ ಮಾತಿಗಿನ್ನೆಂತು ನಕುಲರಾಯ ಪ. ಹೆಣ್ಣು ಮಕ್ಕಳು ಹೊಳೆವೋದುತಪ್ತ ಸುಣ್ಣದಂತೆ ತಿಳಿವೋದುಸಣ್ಣವರೆನೀವು ಅಣ್ಣನ ಮಡದಿಗೆ ಕಣ್ಣು ಹಾಕುವರೇನೊ ಏ ಹೀನಾ 1 ಜಾತಿ ಮಾಣಿಕ ಮಾಲೆ ಕೊಡಲು ತಂದು ಕೋತಿ ರಾಜನ ಕೈಲಿಚಾತುರ್ಯದ್ವಸ್ತವು ನೀತಿಲೆ ಹಿಡಕೊಂಡುಆತುರ ಮಾಡಿದಂತೆ ನಿಮ್ಮಂತೆ2 ನಕುಲರಾಯನೆ ಕೇಳೊಸುಂದರಿಯಲ್ಲೆ ಕಕುಲಾತÉ ಭಾಳೊಸುಖಚಂದ್ರವದನಳೆ ಸಕಲರು ಬೆರೆಯಲು ನಕಲಿ ಆಯಿತು ಕಾಣೊನಿನ್ನಾಣೆ 3 ಅದ್ಬುತ ಮಹಿಮಳೊ ಧರ್ಮರಾಯಗೆಮುದದಿಕೊಟ್ಟರು ಕೇಳೊಅದ ತಾಳಲಾರದೆ ಇದು ನಿಮಗೈವರುಸುದತಿಯ ಬೆರೆಯುವರೇನೊ ಏ ಹೀನ4 ಪತಿ ನಗುವನು ಭಾಳೆ ಏ ತಾಳೊ 5
--------------
ಗಲಗಲಿಅವ್ವನವರು
ಕಾಲ ಕಳೆಯುವಿ ನಮ್ಮ ಐಕೂರಾರ್ಯರ ಸುವಾಕು ಕೇಳದೆ ಜೀವಿ ಪ ಮರುತಾಗಮ ಮರ್ಮವರಿಯದವರಿಗೆಲ್ಲಾ | ವರ ಭಾಗವತ ಗೀತಾ ಹರಿಕಥಾ ಮೃತ ತತ್ವ | ಯರಡೊಂದು ಕಾಲ ಕೃಪೆ ನೆಳಲಾಶ್ರಯಿಸದೆ 1 ಹರಿಮೂರ್ತಿ ಹರಿವ್ಯಾಪ್ತಿ ಹರಿಸತ್ಯ ಸುಚರಿತ್ರೆ | ಹರಿದಾಸರುಕ್ತಿ | ಹಿರಿದು ಕಿರಿದು ಭೇದ ನೆರೆ | ಸುರಹಸ್ಯವನರುಹಿ ಕಗ್ಗತ್ತಲೆ ಹರಿಸುವರಿವರೆ ನರ ನೀನಂಬದೆ2 ಮದಡ ಜನರಿಗೆಲ್ಲ ಪದಸುಳಾದಿಗಳನು | ಚತುರತನದಲಿಂದ | ವಿಧ ವಿಧ ವಿವರಿಸಿ | ಸದಮಲ ಸುಜ್ಞಾನ | ವದಗಿಸುವಂಥ ಈ ಬುಧರುಪದೇಶ ಮುದದಿ ಪಡೆಯದೆ 3 ಆಶೆ ಕ್ರೋಧಂಗಳ ಜಯಿಸುತ ಮನದಿಂದ ಕ್ಲೇಶಮೋದ ಸಮ ತಿಳಿದಿಹರೋ | ಯೇಸೇಸು ಕಾಲಕ್ಕೆ ಭೂಸುರೋತ್ತಮ ರಾದ | ಈ ಸುಗುಣರ ಸಹವಾಸ ದೊರೆವುದೆ 4 ಶ್ರೀ ಮುಖವಾಣಿಯು ಸಾಮಾನ್ಯವಲ್ಲವೋ ನೇಮದಿಂ ಕೇಳ್ವರ | ಶಾಮಸುಂದರ ಸುಧಾಮನಿಗೊಲಿದಂತೆ | ಪ್ರೇಮದಿಂ ಸಲಹುವ ನೀ ಮನದಲಿ ತಿಳಿ 5
--------------
ಶಾಮಸುಂದರ ವಿಠಲ
ಕುಲವಂತನೇ ನೀನು ಎಲೋ ಪರಮಾನಂದ ಕುಲಹೀನನೇ ನಾನು ಪೇಳೆಲವೊ ಸ್ವಾಮಿ ಪ ಹೊಲೆಯ ಪೆದ್ದಯ್ಯಗೆ ಒಲಿದವನ ಆಳಾದಿ ಕುಲದಿ ಮಾದಿಗರ್ಹರಳಯ್ಯನ ಮನೆಲುಂಡಿ ಚೆಲುವ ಕೂಸಿನ ಕೊರತೆ ಸಲಿಸಿದಿ ಬಲುಹಿತದಿ ಮಲಿನಸೀರೆಯ ನಿನ್ನ ತಲೆಗೆ ಸುತ್ತಿಕೊಂಡಿ 1 ಡೊಂಬಿತಿಯ ಗುಡಿಸಿಲಲಿ ಸಂಭ್ರಮದಿ ಮಲಗಿದಿ ಶಂಭೋ ಕುಣಿದೆಲೋ ಕುಂಬಾರಗೊಲಿದು ಸಾಂಬ ನೀ ನಡ ಪೊತ್ತು ಇಂಬು ಸುಡುಗಾಡು ನಿನಗಂಬುಧಿಧರನೆ 2 ಪುಲಿಚರ್ಮ ಹಾಸಿಕೊಂಡ್ಹೊಲಸು ಚರ್ಮುಟ್ಟಿರುವಿ ತಲೆ ಬುರುಡೆ ಕೊರಲಿಗೆ ಮಾಲೆ ಧರಿಸಿರುವಿ ಎಲೊ ದೇವ ಇನಿತಿರ್ದು ಕುಲವನೆಣಿಸುವಿ ನಿನ್ನ ಒಲವು ಬೇಡುವರಿಗೆ ಶ್ರೀರಾಮಸಖನೆ 3
--------------
ರಾಮದಾಸರು
ಗುರು ವಿಜಯರಾಯರ ಪದಸರಸಿಜ ಸೇವಿಪ ನರನೇ ಜಗನ್ಮಾನ್ಯ ಧನ್ಯಾ ಪ ದುರಿತ ತರಿಯಲವತರಿಸಿ ನರಹರಿಯ ಪರಿಚರಿಸುವ ನಿಜ ಅ.ಪ ಭೂಕಾಂತನ ಬಹು ಬಾಧಿಗೆ ತಾಳದೆಈ ಕರುಣಿಕನ ತನವಾಬೇಕಿಲ್ಲೆಂದರು ತಾಕಿಕದ ಸ್ಥಿತಿಸಾಕುವ ಶ್ರೀ ದೇವಾಶ್ರೀ ಕಳತ್ರನ ಕೃಪಾ ಕಟಾಕ್ಷದಿಂ-ದೇಕ ಮನೋಭಾವಾಸ್ವೀಕರಿಸುತ ಪರಲೋಕ ಸಾಧನವನೀ ಕರಿಸಿದರಾನೇಕ ದುರ್ವಿಷಯವ 1 ಇಂತುಪಯ ನಿಶ್ಚಿಂತನಾಗಿ ಗುರು-ವಂತರಾತ್ಮ ಹರಿಯಾಸ್ವಾಂತತಿ ಭಜಿಸುತ ಚಿಂತವರೇವಲಿ ಹನು-ಮಂತನ ಪರಮದಯಾಎಂತು ಪೇಳಲಿ ಬಲು ಶಾಂತರಾಗಿ ಶ್ರೀ-ಕಾಂತನ ಪರಿಪರಿಯಾಅಂತರಂಗದೊಳನುಭವಿಸುತ ಗುಣ-ವಂತರಿವರಿಗೆ ದಿಗವಂತದಿ ಸರಿಯಾ 2 ಲೇಸು ಜ್ಞಾನವ ಬಯಸುವ ಜನರೋಲ್‍ಆ ಸೋಮಪುರದಲಿವಾಸವಾದ ರಾಮದಾಸರಿಂದುಪ-ದೇಶವ ಕೊಳ್ಳುತಲೀಹೇಸಿ ವಿಷಯದಿಂದೋಷಿಯಾದ ಶ್ರೀನಿ-ವಾಸರಾಯರಲ್ಲೀ ಯೇಸು ಜನ್ಮದ ಸುಕೃತವು ಇವರನು ನಿ-ರ್ದೊಷಿಗಳನು ಗೈದಿಸಿದರು ತ್ವರಿತದಲಿ 3 ವೇದ ವೇದ್ಯನ ಗುಣಂಗಳ ಪದ ಸು-ಳಾದಿ ಪ್ರಮೇಯವನೂ ಸಾದರದಿಂದಲಿ ಭೂದೇವರಿಗೆ ಬೋಧಿಸಿ ತತ್ವವನೂಸಾಧಿಸಿ ಭೇದವ ಜೀವೇಶ್ವರ ಮತಭೇದಿಸಿ ವಾದಿಯನೂಆದಿ ವ್ಯಾಧಿ ಅನಾದಿ ಭೂತಗಣ ಭೇದಿಸಿ ಮಾಡಿ ಪರೋದರ ಗತವನೂ 4 ಪತಿ ಅಚಲ ವ-ಸತಿಯನೆ ಮಾಡೀದಾಕೃತಿ ರಮಣನ ಒಲಿಸುತನಶನ ವ್ರತ ಪಥದಿಂದಾಗಾಧಾನುತಿಸುತ ಕಮಲಾಪತಿ ನರಸಾರಥಿ ಪ್ರತಿಮೆಯಪ್ರತಿಷ್ಠಿಯ ಹಿತದಿಂದಗೈದಾ 5
--------------
ಕಮಲಪತಿವಿಠ್ಠಲರು
ಗೋಪಾಲದಾಸರಾಯ ಮಾಂಪಾಲಯ ಪ ಗೋಪಾಲದಾಸರಾಯಾ ಅಪಾರ ಮಹಿಮ ಮ- ತ್ಪಾಪಗಳೋಡಿಸಿ ಕಾಪಾಡೊ ಗುರುರಾಯ ಅ.ಪ ಸುಜನ ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ 1 ಧನ್ವಂತ್ರಿ ಜಪದಿ ಜಗನ್ನಾಥದಾಸರ ಬನ್ನವ ಬಿಡಿಸಿದ ಘನ್ನ ಮಹಿಮಗುರು 2 ಏನು ಕರುಣವೋ ಶ್ರೀ ಮಾನವಿ ದಾಸರಿಗೆ ಸಾನುರಾಗದಿ ಆಯುರ್ದಾನವ ಮಾಡಿದ 3 ಪದುಮನಾಭನ ಪದಪದುಮ ಮಹಿಮೆಗಳ ವಿಧ ವಿಧ ಪದಸುಳಾದಿಗಳಿಂದ ತುತಿಸಿದ 4 ಶರಣು ಜನಕೆ ಸುರತರುವೆನಿಸಿ ಧರೆಯೊಳು ಮೆರೆವ ' ಕಾರ್ಪರ ನರಹರಿ’ ಯ ನೊಲಿಸಿದಂಥ5
--------------
ಕಾರ್ಪರ ನರಹರಿದಾಸರು
ತಿರುಪತಿವಿಠಲರ ಹಾಡು ದಾಸರಾಯರ ನೋಡಿದ್ಯಾ | ಶ್ರೀಶ ಪ್ರಾಣೇಶ |ದಾಸರಾಯರ ನೋಡಿದ್ಯಾ ||ದಾಸರಾಯರ ಪಾದಾಶ್ರಯವ ಮಾಡಲು |ದೋಷಗಳೋಡಿಸಿ ಶ್ರೀಶನೊಲಿಸಿ ಕೊಡುವ ಪ ಸ್ನಾನದಿ ಮಹಮಂತ್ರವ | ನಿತ್ಯದಿ ಮಾಡಿ |ಜ್ಞಾನಪೂರ್ವಕ ಜಪವು ||ದ್ಯಾನದಿ ಬಿಂಬನ ಹವಣಿ ಮನದಿಂದ |ಮೌನದಿ ಪೂಜಿಸ್ವಾನಂದದೊಳಿರುವಂಥ 1 ಸತತ ಶ್ರೀ ಹರಿಯ ನಾಮ | ಸ್ಮರಣೆಯೊಳು |ರತರಾಗಿಕೊಂಡು ಪ್ರೇಮ ||ಗತಿಗೆ ನೀನೆ ಜಗತ್ಪತಿಯೆಂದು ನಿಶ್ಚಯ |ಮತಿವುಳ್ಳ ಮಹಿಮನ ತುತಿಸುವ ಗುರುಗಳ 2 ಮೊದಲರ ಪದ್ಧತಿಯ | ತಿಳಿದು ಮಾಡೆ |ಪದುಮನಾಭನ ಸೇವೆಯು ||ಪದ ಸುಳಾದಿಗಳರ್ಥ | ಮುದದಿ ಕೇಳುತ ಜಗ |ದುದರ ತಿರುಪತಿ ವಿಠಲನ್ನೆನದು ನಲಿವ ಮುದ್ದು 3
--------------
ಶ್ರೀಶಪ್ರಾಣೇಶವಿಠಲರು
ದಾಸರ ನೋಡಿರೈ ಮನದಭಿಲಾಷೆಯ ಬೇಡಿರೈ | ಭಾಸುರ ಕಾರ್ಪರಾಧೀಶನಾ ಸನ್ನಿಧಿ ವಾಸ ಕೃತನತ ಪೋಷಾ || ಹಿಂದೆ ಪ್ರಲ್ಹಾದನು ಮಾತೆಯ ಗರ್ಭದೊಳಿರಲು ಮುಂದೆ ಈತ ಹರಿಭಕ್ತಾಗ್ರೇಸರನೆಂದು ಮನಸ್ಸಿಗೆ ತಂದು | ಛಂದದಿ ಹರಿಪರನೆಂಬೊ ತತ್ವ ಬೋಧಿಸಿದ ಜ್ಞಾನವ ಗರೆದ || ವೃಂದಾರಕ ಮುನಿಯೆಂದಿವರನು ಭಾವಿಸುತ ಅಭಿವಂದಿಸುತ 1 ಬೋಧ ಸಚ್ಛಾಸ್ತ್ರ ಧರ್ಮವ ಮುದದಿ ತಿಳಿಗನ್ನಡದದಿ ಸತಿ ಸುಳಾದಿ ರೂಪದಿ ವಿರಚಿಸಿ ದಯದಿ ಸಾರುತ ಜಗದಿ | ಬಲುವಿಧ ಭವದೊಳು ಬಳಲುವ ಸಜ್ಚನ ಕೊಲಿದ ಕಲುಷವ ಕಳೆದ | ಇಳೆಯೊಳು ಇವರು ಪೇಳಿದ ವಚನವು ವೇದ ದೊಳಗಿನ ಸ್ವಾದ 2 ಈ ಮಹಾಕ್ಷೇತ್ರದ ಸ್ವಾಮಿ ನರಸಿಂಹ ಪಾದ ಅರ್ಚಕರಾದ | ಭೀಮಾರ್ಯರ ಸದ್ಭಕ್ತಿಗೆ ನೆಲಸಿಹರಿಲ್ಲಿ ಅನುದಿನದಲ್ಲಿ || ನೇಮದಿ ತನ್ನನು ಸೇವಿಪ ಭಕುತರ ಕರವ ಕರುಣದಿ ಪಿಡಿವ || ಜಗದೊಳು ಮೆರೆದ 3
--------------
ಶಾಮಸುಂದರ ವಿಠಲ
ದಾಸರಾಯರ ಪಾಡಿರೋ | ರಂಗನೊಲಿದ ಶ್ರೀ |ದಾಸರಾಯರ ಪಾಡಿರೋ ಪ ದಾಸರಾಯರ ಪಾಡಿ | ದೋಷಗಳೀಡಾಡಿಶಾಶ್ವತ ಲೋಕಗ | ಳಾಶಿಪ ಜನರೆಲ್ಲಾ ಅ.ಪ. ಮಾನವಿ ಕ್ಷೇತ್ರಸ್ಥಿತನೂ | ಘನಕರ್ಣೀಕ ನರಸಪ್ಪನೆಂಬ ದ್ವಿಜನೂ |ಜ್ಞಾನಿ ತಿಮ್ಮಣ್ಣನ ಸತಿಸಹಿತ ಸೇವಿಸೆಮಾನ್ಯ ಸಹ್ಲಾದ ತಾ ಸುತನಾಗಿ ಜನಿಸಿದ 1 ಶಾಲಿವಾಹನ ಶಕವೂ | ಮತ್ತೇಗಾಳಿಗಣಯುತ ಹತ್ತಾರ್ನೂರು |ಕೀಲಕವತ್ಸರ ಶುಕ್ಲ ಶ್ರಾವಣದಲ್ಲಿಶೀಲ ವೆರಡೆನೆ ದಿನ ಜನಿಸಿಹರನ್ನಾ 2 ಈತನು ಹರಿಭಕ್ತನೊ | ಪ್ರಹ್ಲಾದಗೆಪ್ರೀತಿಯ ಸೋದರನೋಧಾತ ಜನಕ ಹರಿ ಮಾತಿನಿಂದಲಿ ಇವಖ್ಯಾತನಾಗಿ ಶ್ರೀನಿವಾಸನೆಂದೆನಿಸಿದ 3 ಆದ ಸಕಾಲದಿ ದ್ವಿಜನು | ಸದ್‍ಬೋಧಿತ ವರದೇಂದ್ರರಿಂ |ಭೇದ ಮತದೊಳದ್ವಿತೀಯ ನೆಂದೆನಿಸುತ್ತವಾದಿ ನಿಗ್ರಹದೊಳತ್ಯಾದರವನೆ ಪೊತ್ತ4 ಒದಗಲುದ್ಧುøತ ಕಾಲವೂ | ಪ್ರಾಪ್ತಸಾಧು ವಿಜಯ ದಾಸರು | ಮುದದಿ ನರ್ತವಗೈದು ಕೀರ್ತನೆ ಪಾಡಲುಹದಗೆಟ್ಟನಿವನೆಂದು ಬಿರುನುಡಿ ನುಡಿದಂಥಾ5 ಒದಗಲುದರ ರೋಗವೂ | ಮುಂದೆಹದನ ಕಾಣದೆ ತಪಿಸಾಲು |ಮೋದ ತೀರ್ಥರ ರೂಪ ಆದರದಲಿ ಭಜಿಸಿಸಾಧು ಸೋತ್ತಮ ದ್ರೋಹ ಕಳವ ಮಾರ್ಗವ ತಿಳಿದ6 ವಿಜಯ ದಾಸರ ಪಾದವಾ | ತಮ್ಮಯನಿಜ ಶಿರದೊಳು ಪೊತ್ತು ಮೆರೆವಾ |ನಿಜ ಶಿಷ್ಯ ಗೋಪಾಲದಾಸರಲ್ಲಿಗೆ ಬಂದುಭಜಿಸೆ ಅವರ ಆಯು ನಾಲ್ವತ್ತು ಪಡೆದಂಥ 7 ಮಂತ್ರಿತ ಭಕ್ಕರಿಯಾ | ಭುಜಿಸೆ ದೇಹಯಂತ್ರ ಸಾಧನ ಕೊದಗಲೂ |ಮಂತ್ರೋಪದೇಶವ ಗೊಳ್ಳುತ ಮುದದಿಂದೆಯಂತ್ರೋದ್ಧಾರಕ ಪ್ರಿಯ ರಂಗನ ಒಲಿಸಿದ 8 ಇಂದು ಭಾಗದಿ ಸ್ನಾನವೂ | ಮಾಡುತಲಿರೆಸ್ಕಂಧಾ ರೋಹಿತ ಶಿಲೆಯಸ್ಥ |ಇಂದಿರಾ ರಮಣ ಶ್ರೀ ಜಗನ್ನಾಥ ವಿಠಲನಸುಂದರಾಂಕಿತವನ್ನು ಧರಿಸಿದ ಶಿರದಲ್ಲಿ 9 ಪಾಂಡುರಂಗನ ಕಾಣುತ | ತನ್ನಯದಿಂಡುಗೆಡಹಿದ ಆಕ್ಷಣಾ |ಅಂಡಜಾಧಿಪನುದ್ದುಂಡ ದೇವರ ದೇವಪುಂಡರೀಕಾಕ್ಷನ ಪಾದಕೆ ಶರಣೆಂದ 10 ಸ್ವಾದಿ ಕ್ಷೇತ್ರಕ್ಕ ಪೋಗೀ | ಪೂಜ್ಯರಾದವಾದಿರಾಜರ ಪೂಜಿಸೀ |ಸಾಧು ವರ್ಯರ ಆಜ್ಞಾಧಾರಕರಿವರಾಗಿಬುಧರಿಗೆ ಹರಿಕಥಾ ಸುಧೆಯ ಸಾರವನಿತ್ತ 11 ಪದ ಸುಳಾದಿಗಳಿಂದಲಿ | ಹರಿಯ ಪಾದಸದ್ವನಜವ ಸ್ತುತಿಸುತಲೀ |ಹೃದಯ ಸದ್ಮದಿ ತದ್ಧಿಮಿ ಧಿಮಿ ಧಿಮಿಕೆಂದುವಿಧಿಪಿತ ಹರಿಯನ್ನ ಕುಣಿಸಿ ಮೋದಿಸಿದಂಥ 12 ಸುವತ್ಸರವು ಶುಕ್ಲದೀ | ಸಿತಭಾದ್ರನವಮಿ ತಾರೆಯು ಮೂಲದೀ |ರವಿಯ ವಾರವು ಸಂದ ಶುಭದಿನದಲಿ ಗುರುಗೋವಿಂದ ವಿಠಲನ ಸೇರಿ ತಾಮೆರೆದಂಥ 13
--------------
ಗುರುಗೋವಿಂದವಿಠಲರು
ದ್ರೌಪದಿ ಸುಳಾದಿ ಪುರಂದರ ಗುರು ನಾಗೇಶಾವೇಶ ಗುರು ಶ್ರೀಪಾದ ರಾಯ ಗುರು ಯೋಗಿ ಟೀಕಾರ್ಯ ಗುರು ಶ್ರೀಮದಾಚಾರ್ಯ ಗುರು ನಾಗಶÀಯನ ನೀನು ಸಕಲ ಜಗದ್ಗುರು ಈತ ಗುರು ಸಂತತಿಗೆ ವಂದೀಸಿ ತಾತ್ವಿಕರ ಜಾಗು ಮಾಡದೆ ನಮಿಪೆ ಜ್ಞಾನ ಪ್ರದಾತರೆಂದು ಆಗಮ ಪೌರಾಣ ಶೃತಿ ತತಿಗಳೊಳೆಲ್ಲ ಆಗುವಳಭಿಮಾನಿ ಭಾರತೀದೇವಿ ಎಂದು ಈಗ ಈ ಮಹಿಮಳ ಚರಿತೆ ಬುದ್ಧಿಗೆ ದೇವಿ ತಾಗಿಸಿದಂದದಿ ಸಾಗಲಿ ನುಡಿವುದು ನಾಗರಾಜನ ಜನನಿ ಸ್ವಪ್ನದಿ ಸುಳಿದಳು ಕೂಗಿದೆ ಅಯೋನಿಜೆ ದುಃಖರಹಿತಳೆಂದು ಭಾಗವತರ ಕಾಯ್ವ ಭಾಗ್ಯ ಸಂಪನ್ನದೇವಿ ಯೋಗಿ ಜನರಿಗೆಲ್ಲ ಗುರುಪತ್ನಿ ಎಂದೆನಿಪೆ ಆಗಾಗ ಅವತರಿಸಿ ಅನಿಲನ ಕಾರ್ಯಕ್ಕೆ ಆಗುವೆ ಸಹಕಾರಿ ಅಸುರರ ಸಂಹಾರಿ ಶ್ರೀ ಗುರೋರ್ಗುರು ಹರಿ ಗೋಪಾಲಕೃಷ್ಣವಿಠಲ ಭಾಗವತರ ಕಾಯ್ವ ನಿನ್ನದ್ವಾರದಿ ಸ್ಮರಿಸೇ 1 ಕೃತಿಸುತೆ ಕೊಂಡದಿ ಉದಿಸಿ ಸುತೆ ಎನಿಸಿದೆ ದ್ರುಪದನಿಗೆ ಚ್ಯುತರಹಿತ ಯೌವನಯುತೆ ಐವರಿಗರಸಿಯು ಆದೆ ಪ್ರತಿಯಿಲ್ಲದ ಪತಿವ್ರತೆ ಸುರತತಿ ಜನನಿಯು ನೀನೌ ಮಾ- ರುತ ಸುತನಲ್ಲದೆ ನಿನಗಿನ್ನಿತರರ ಸಂಗವು ಉಂಟೆ ಸುತರಂದದಿ ನಾಲ್ವರ ತಿಳಿದತಿಶಯದಲಿ ಅವರವರಾ ಸತಿಯರ ನಿನ್ನೊಳಗಡಿಗಿಸಿ ರತಿ ಕಾಲದಲೊಲಿದಿತ್ತೆ ಮತಿವಂತರಿಗಲ್ಲದೆ ಪ್ರತಿ ಜನರಿಗೆ ಮೋಹಕವು ಕ್ಷಿತಿಯೊಳು ನೀನವತರಿಸೀ ಕ್ಷಿತಿಗೇ ತೋರಿದ ಲೀಲೆ ಅತಿ ಸೌಭಾಗ್ಯದಿ ಮೆರೆದೆ ಕ್ಷಿತಿಪತಿಸೂಯಾಗದಲಿ ಖತಿಗೊಳ್ಳಲು ಖಳ ಜನರು ಸ್ಥಿತ ಸಾಮ್ರಾಜ್ಯವ ಕಂಡು ಕ್ಷಿತಿಭಾರವನಿಳುಹಲು ಶ್ರೀಪತಿ ಪತಿಮನವರಿಯುತ ಕುರು ಪತಿಸಭೆಯಲಿ ಭ್ರಮಿಸುತ ಜಾರುತ ಸರಸಿಯೋಳ್ ಬೀಳುತಿರೆ ಪತಿ ಶ್ರೀಪತಿ ಮೊಗವೀಕ್ಷಿಸಿ ಅತಿ ಹಾಸ್ಯದಿ ನೀ ನಗಲು ಖತಿಗೊಳ್ಳಲು ಕುರುಪತಿ ಕಲಕಿತು ದ್ವೇಷದ ಭಾವಗಳು ಪತಿ ಭಾರದ ಹರಣಕೆ ಮೂಲಾಯಿತು ನಿನ್ನಯ ನಗೆ ಕಿಡಿ ತಾ ಕಾತುರಕ್ಕಸ ತರುಗಳಿಗೆ ಸೋಕಿತು ಕಾಮನ ಬಿಸಿಯು ಮತಿಹೀನರು ನಿನ್ನನು ಬಯಸುತ ಬರೆ ದ್ವೇಷಾಗ್ನಿ ಜ್ವಲಿ ಸುತ ವಾಯು ಸಹಾಯದಲಿ ಹುತಗೈಸಿದೆ ಖಳತತಿಯ ಪತಿಯಂತರ್ಗತ ಕೃಷ್ಣನ ನುತಿಸುತ ಭಕ್ತ್ಯಾಜ್ಯಾಹುತಿ ಕ್ಷಿತಿ ಭಾರವನಿಳುಹಿಸಿದೆ ಹಿತತಂಗಿಯೆ ಗೋಪಾಲಕೃಷ್ಣವಿಠ್ಠಲಗೇ ನೀ ಪ್ರತಿಯುಂಟೆ ನಿನಗೆ ಈ ಕ್ಷಿತಿಯೊಳು ನಾಕಾಣೆ 2 ಮಡಿಯದೆ ದುರ್ಯೊüೀಧನನು ಮುಡಿಯನು ಕಟ್ಟೆನು ಎಂಬ ದೃಢ ಸಂಕಲ್ಪಳೆ ಪುಷ್ಪ ಮುಡಿಯಲಪೇಕ್ಷಿಸಿದೆ ನೀ ಒಡೆಯುವರುಂಟೇ ಇದರ ಒಡಲಿನ ಮರ್ಮವ ದೇವಿ ಒಡೆಯ ವೃಕೋದರ ನಿನ್ನ ನುಡಿ ಕೇಳುತ ವನ ಪೊಕ್ಕು ಮಡುಹುತ ಯಕ್ಷರ ತಂದು ಮುಡಿಸಿದ ಸೌಂಗಂಧಿಕವ ಪೊಡವಿಯೊಳ್ಹರಡಿತು ವಾರ್ತೆ ಒಡಲರಿಯದೆ ಜನತತಿಗೆ ಪಿಡಿಯುತ ಕರದಲಿ ಪುಷ್ಪ ಒಡೆಯನ ಪ್ರೇಮದಿ ನೋಡಿ ಮುಡಿಸಿದೆ ಸಿರಿಹರಿ ಮುಡಿಗೆ ಕಡು ಭಕ್ತಿಯೊಳಂತರದಿ ಬಿಡುಬಿಡು ಬಿಂಕವ ಲೀಲೆ ಕೊಡು ಕೊಡು ಭಕ್ತಿಯ ಬಾಲೆ ಪಡಿಸಾನಂದವ ಶೀಲೆ ನುಡಿಸಡಿಗಡಿಗ್ಹರಿ ಲೀಲೆ ಒಡಗೂಡತ ಪತಿಯೊಡನೆ ನಡೆಸಿದ ಚರಿತೆಗಳೆಲ್ಲ ಕಡು ಮೋಹವು ರಜ ತಮರಿಗೆ ಕೊಡುವುದು ಸುಖ ಸುಜನರಿಗೆ ಪೊಡವಿಪತಿ ಗೋಪಾಲಕೃಷ್ಣವಿಠಲ ನಿನ್ನ ನಡೆನುಡಿ ಮೆಚ್ಚುತ ನಡೆಸಿದ ಭಾರತ ನಾಟಕವÀ 3 ಆನಂದ ಜ್ಞಾನಪೂರ್ಣೆ ಆಗಾಗ ಒದಗಿದ ಹೀನ ದುಃಖದ ಸÉೂೀಂಕು ಉಂಟೆ ನಿನಗೆ ಇನ್ನು ಪ್ರಾಣಪತಿಗಳೈವರೆದುರಲಿ ಖಳ ನಿನ್ನ ಮಾನ ಹಾನಿಯ ಗೈಸೆ ಜಗವೆ ತಲ್ಲಣಿಸಿತು ಮಾನಾಭಿಮಾನ ಬಿಟ್ಟು ಶ್ರೀನಿಧಿ ಗತಿ ಎನ್ನೆ ಅಕ್ಷಯ ವಸನವು ಪ್ರಾಣಪಂಚಕ ಹರಿಯಾಧೀನವೆಂಬುವ ತತ್ವ ಪ್ರಾಣಕ್ಕೆ ಪ್ರಾಣಬಿಂಬ ಸ್ವಾಮಿ ಎಂಬುವ ತತ್ವ ಮಾನಾಭಿಮಾನ ತೊರೆದು ಪ್ರಾಣೇಂದ್ರಿಯವ ಜರಿದು ಮಾನಸದಲಿ ಹರಿಯ ಸ್ಮರಿಸಿದರಕ್ಷಯ ಸ್ಥಾನಪ್ರಾಪ್ತಿಯು ಎಂಬ ತತ್ವರಹಸ್ಯಗ- ಳಾನು ಸೂಚಿಸೆ ನಿನ್ನ ಕೃತಿಯಲ್ಲದಿನ್ನಿಲ್ಲ ದಾನವರೆಲ್ಲ ನಿನ್ನ ಕಾಮಿಸಿ ನೋಡಲವರು ಏನೆಂಬೆ ಮಾಡಿದಂಥ ಅಲ್ಪಸ್ವಲ್ಪದ ಪುಣ್ಯ ಕ್ಷೀಣಗೈಸುತ ಸೆಳೆದು ಹೀನ ಪಾಪದಿ ನೂಕಿ ಹಾನಿಗೈಸಿದೆ ಪವಮಾನಸುತನಿಂದಲಿ ಮಾನುನಿಮಣಿ ಸರ್ವಕ್ಷೇಮ ಪಾಲಿಪ ಭಕ್ತ- ರಾನನದಲಿ ನೋಡೆ ಜ್ಞಾನಾನಂದವನಿತ್ತು ಹೀನ ನರಕದಿ ಬಿದ್ದ ಭ್ರಾತೃಸಹಿತದಿ ಕುರುಪ ಕಾಣದೆ ನಿನ್ನ ಮಹಿಮೆ ಜ್ಞಾನರಹಿತನಾಗಿ ಜಾಣೆ ಶ್ರೀ ಗೋಪಾಲಕೃಷ್ಣವಿಠ್ಠಲನ ನಿಜ ಜ್ಞಾನ ಪಾಲಿಸಿ ಕಾಯೆ ಭೀಮಸೇನನ ಜಾಯೆ 4 ಮುಕ್ತರ ಬಂಧುವೆ ನೀನು ಭಕ್ತಿಯದಾತಳÉ ನೀನು ತತ್ವ ತಿಳಿಸುವೆ ನೀನು ಚಿತ್ತದೆ ನೆಲಸುವೆ ನೀನು ಹತ್ತದು ದುಃಖವು ನಿನಗೆ ಸುತ್ತದು ಶೋಕವು ನಿನಗೆ ಮುಕ್ತಾರ್ಥವ ಕೊಡುವವಳೆ ಮತ್ತೆ ಅಯೋನಿಜಹಳೆ ಮುತ್ತು ಮಾಣಿಕ್ಯವು ನವರತ್ನದ ಆಭರಣಗಳ ಕಂಚುಕ ನೆತ್ತಿಲಿ ಮಕುಟವನಿಟ್ಟು ಚಿತ್ತದೊಲ್ಲಭನಂಕದಲಿ ಹತ್ತಿ ಸಿಂಹಾಸನದಲಿರೆ ಸುತ್ತಲು ಸೌಪಣ್ರ್ಯಾದಿ ಸುರಸ್ತ್ರೀಯರು ಓಲೈಸೆ ಚಿತ್ತದಿ ಸಿರಿಹರಿಯನು ಭಕ್ತಿಲಿ ಭಜಿಸುತ ಮುಕ್ತಾ- ಮುಕ್ತರ ಕೃಪಪಾಂಗದಲಿ ಸುತ್ತಲೀಕ್ಷಿಸಿ ಕಾವೆ ಭಕ್ತಿಲಿ ದ್ರೌಪದಿ ಎಂದು ಎತ್ತಿದ ಸ್ವರದಲಿ ಕೂಗೆ ಚಿತ್ತದೊಲ್ಲಭನೊಡನೆ ಚಿತ್ತೈಸೆನ್ನಯ ಮನಕೆ ಹತ್ತಿಕಾಡುವ ಎನ್ನ ದುಷ್ಕøತ ಕರ್ಮಗಳೆಲ್ಲ ಕತ್ತರಿಸುತ ಕಾಯಮ್ಮ ಸತ್ಯಾಪ್ರಿಯನನು ತೋರೆ ಆರ್ತಜನರ ಪಾಲ ಗೋಪಾಲಕೃಷ್ಣವಿಠ್ಠಲನ್ನ ಅರ್ಥಿಯಿಂದಲಿ ಎನ್ನ ಚಿತ್ತದಿ ತೋರೆಲೆ ಜನನಿ 5 ಜತೆ ತತ್ವದೇವತೆಗಳ ಜನನಿ ತತ್ವಾರ್ಥ ತಿಳಿಸೇ ಆಪ್ತ ಗೋಪಾಲವಿಠ್ಠಲನೆಂದೆನಿಸೇ
--------------
ಅಂಬಾಬಾಯಿ