ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವ ಸಿಂಗನಾದನು ಪ ರಂಗಮಾನವ ಸಿಂಗನಾಗಲು ಭಂಗಾರ ಗಿರಿಯ ಶೃಂಗಗಳಲ್ಲಾಡೆ ಹಿಂಗದೆ ಎಂಟು ಮಾತಂಗ ಸಪುತ ದ್ವೀ- ಪಂಗಳು ಕಂಪಿಸೆ ವಿಗಡದಿ ಅ.ಪ. ವನಜ ಭವನಂದನರಾನಂದದಿ ವನಧಿಯೊಳಿದ್ದ ವನಜನಾಭನ ವನಜಾಂಘ್ರಿ ದರುಶನಕ್ಕೋಸುಗದಿ ಘನ ವೈಕುಂಠ ಪಟ್ಟಣ ಸಾರೆ ವಿನಯರಲ್ಲದ ಜಯನು ವಿಜಯನವ- ರನು ತಡೆಯಲು ಮುನಿದೀರ್ವರಿಗೆ ದನುಜಾಂಗದಿಂದ ಜನಿಸಿರೋ ಎಂದು ಮುನಿಗಳು ಶಾಪವನ್ನು ಈಯೆ 1 ದಿಕ್ಕು ಎಂಟರೊಳು ಕಕ್ಕಸರೆನಿಸಿ ದಿಕ್ಕು ಪಾಲಕರ ಲೆಕ್ಕಿಸದಲೇವೆ ಸೊಕ್ಕಿ ತಿರುಗುವ ರಕ್ಕಸರಾಗಲು ಮುಕ್ಕಣ್ಣ ಬಲದಿಂದಕ್ಕೆ ಜದಿ ನಕ್ಕು ಪರಿಹಾಸ್ಯಕಿಕ್ಕಿ ಸರ್ವರನು ಮುಕ್ಕಿ ಮುಣಿಗಿ ಧರ್ಮಕೆ ವಿರೋಧಿಸಿ ಸಿಕ್ಕದಂತಲ್ಲಲ್ಲಿ ತುಕ್ಕುತಿರೆ 2 ಇತ್ತ ಶಾಪದಿಂದಲಿತ್ತಲೀರ್ವರಿಗಾ ಪೊತ್ತ ಸುರಾಂಗದಲಿತ್ತಲೋರ್ವವನಿಯು ಕಿತ್ತು ಒಯ್ಯಲು ಬೆಂಬುತ್ತಿ ಹರಿಯು ಕೊಲ್ಲೆ ಇತ್ತ ಹಿರಣ್ಯನುನ್ಮತ್ತದಿಂದ ಸುತ್ತುತಿರುವಾಗ ಪುತ್ರನು ಭಾಗವ ತ್ತೋತ್ತಮನಾಗಿ ಸರ್ವೋತ್ತಮ ಬ್ರಹ್ಮನ ಕರವ ಲೋ- ಕತ್ರಯವರಿವಂತೆ ಬಿತ್ತಿದನು3 ಸೊಲ್ಲು ಕೇಳುತಲಿ ಎಲ್ಲೆಲೊ ನಿನ್ನ ದೈ- ವೆಲ್ಲೊ ಮತ್ತಾವಲ್ಲೆಲ್ಲಿಹನೆನುತಲಿ ನಿಲ್ಲದರ್ಭಕನ್ನ ಕಲ್ಲು ಕೊಳ್ಳಿ ಮುಳ್ಳು ಕರವಾಳ ಬಿಲ್ಲು ನಾನಾ ಎಲ್ಲ ಬಾಧೆಯನ್ನು ನಿಲ್ಲದೆ ಬಡಿಸೆ ಎಳ್ಳನಿತಂಜದೆ ಎಲ್ಲೆಲ್ಲಿಪ್ಪನೆಂದು ಸೊಲ್ಲನು ಬೇಗದಿ ಸಲ್ಲಿಸೆನೆ 4 ಏನು ಕರುಣಾಳೊ ಏನು ದಯಾಬ್ಧಿಯೊ ಏನು ಭಕ್ತರಾಧೀನನೊ ಏನೇನು ನಾನಾ ಮಹಿಮನೊ ಏನೇನೊ ಏನೊ-ಈ- ತನ ಲೀಲೆ ಕಡೆಗಾಣರಾರೊ ದಾನವಾಭಾಸನ ಮಾನಹಾನಿ ಗೈಯೆ ಸ್ಥಾಣು ಮೊದಲಾದ ಸ್ಥಾನದಲ್ಲಿ ಸರ್ವ ದೀನರಿಗೆ ದತ್ತ ಪ್ರಾಣನಾಗ 5 ತುಟಿಯು ನಡುಗೆ ಕಟ ಕಟ ಪಲ್ಲು ಕಟನೆ ಕಡಿದು ನೇಟನೆ ಚಾಚುತ ಪುಟಪುಟ ನಾಸಪುಟದ ರಭಸ ಕಠಿನ ಹೂಂಕಾರ ಘಟುಕಾರ ನಿಟಿಲನಯನ ಸ್ಫುಟಿತ ಕಿಗ್ಗಿಡಿ ಮಿಟಿಯೆ ಹುಬ್ಬಿನ ನಿಟಿಲ ರೋಷದಿ ಮಿಟಿಯೆ ಚಂಚು ಪುಟದಂತೆ ರೋಮ ಚಟುಲ ವಿಕ್ರಮುದ್ಧಟ ದೈವ 6 ನಡುಕಂಭದಿಂದ ಒಡೆದು ಮೂಡಿದ ಕಡು ದೈವವು ಸಂಗಡಲೆ ಚೀರಲು ಬಡ ಜೀವಿಗಳು ನಡುಗಿ ಭಯವ ಪಡುತಲಿ ಬಾಯ ಬಿಡುತಿರೆ ಕಡೆಯೆಲ್ಲೊ ಹೆಸರಿಡಬಲ್ಲವರಾರೊ ತುಡುಗಿ ದುಷ್ಟನ ಪಡೆದ ವರವ ಪಿಡಿದು ಅವನ ಕೆಡಿಸಿ ಹೊಸ್ತಿಲೊ- ಳಡಗೆಡಹಿದನು ಪವಾಡದಲಿ 7 ವೈರಿಯ ಪಿಡಿದು ಊರುಗಳಲ್ಲಿಟ್ಟು ಘೋರ ನಖದಿಂದ ಕೊರೆದು ಉದರವ ದಾರುಣ ಕರುಳಹಾರ ಕೊರಳಲ್ಲಿ ಚಾರುವಾಗಿರಲು ಮಾರಮಣ ಸಾರಿಗೆ ಭಕ್ತಗೆ ಕಾರುಣ್ಯಮಾಡಿ ಶ್ರೀ ನಾರೀಶನಾನಂದದಿ ತೋರುತಿರೆ ಸುರ- ವರರ್ನೆರೆದು ಅಪಾರ ತುತಿಸಿ ಪೂ- ಧಾರೆ ವರುಷ ವಿಸ್ತಾರೆರೆಯೆ 8 ನೃಕೇಸರಿಯಾಗೆ ಭಕುತಗೆ ಬಂದ ದುಃಖವ ಕಳೆದು ಸುಖವನೀವುತ್ತ ಅಕಳಂಕದೇವ ಲಕುಮಿಪತಿ ತಾ- ರಕ ಮಂತ್ರಾಧೀಶ ಸುಕುಮಾರ ಅಖಿಳ ಲೋಕಪಾಲಕ ಪ್ರಹ್ಲಾದಗೆ ಸಖನಾಗಿ ಇಪ್ಪ ಸಕಲ ಕಾಲದಿ ಭಂಜನ ವಿಜಯವಿಠ್ಠಲ ಮುಕುತಿ ಈವ ಭಜಕರಿಗೆ9
--------------
ವಿಜಯದಾಸ