ಎಂಜಲೆನ್ನಲಿಬಹುದೆ ಮನುಜರಿದನ ಅಘವನಧ-
ನಂಜಯ ಸುವೈಕುಂಠದಾಸರ ವದನದ ಕಣವ ಪ.
ವದನವೆಂಬಾಕಾಶದಲಿ ಭಕುತಿ ಜೀಮೂತ
ಪದುಮನಾಭನ ನಾಮಾಮೃತದ ಕಡಲ
ಮುದದಿಂದ ತಕ್ಕೊಂಡು ಎನ್ನಂಗ ದೇಹದಲಿ
ಹದನರಿತು ಸುರಿದು ಮುಕ್ತಿಫಲವ ಬೆಳೆಸಿದುದನು 1
ಹೃದಯ ಕಾರಾಗೃಹದಿ ಶ್ರೀಹರಿಯನಾವಾಗ
ಹುದುಗಿ ಅಗಲಿಸಿದ ಕಾರಣದೊಳಂಗುಟದಿ
ಉದಿಸಿ ಗಂಗೆಯು ಪೋಪೆಡೆಯು ಅಳಿದಿರೆ ಇವರ
ವದನದಲಿ ಪೊರಟೆನ್ನಮ್ಯಾಲೆ ಹರಿದುದನು 2
ಪರಸನ್ನ ಹಯವದನ ಚರಣಸರಸಿಜಮಧು-
ಕರ ಸುವೈಕುಂಠದಾಸೋತ್ತಮನ್ನ
ವರವದನದಲಿ ವೇದಶಾಸ್ತ್ರಾಗಮದ ತಾ-
ತ್ಪರಿಯ ಬಿಂದುಗಳೆನ್ನ ಮ್ಯಾಲೆ ಹರಿದುದನು 3