ಈತನೆ ಗತಿಯೆಂದು ನಂಬಿದೆನೆ ನಾ
ನೀತನಂಥ ನಿಷ್ಕರುಣನ ಕಾಣೆ ಪಾತಕಹರ ಅ
ನಾಥರಕ್ಷಕ ಮಹದಾತ ಪರಮಭಕ್ತ
ಪ್ರೀತನೆಂಬುದ ಕೇಳಿ ಪ
ಮರುಳಾಗಿವನ ಬೆನ್ಹತ್ತಿದೆನೆ ಮನೆ
ಮಾರುಗಳೆಲ್ಲವ ತೊರೆದೆನೆ
ಕರುಣವಿಲ್ಲ ತುಸು ಹೊರಳಿ ನೋಡುವಲ್ಲ
ತಿರುತಿರುಗಿ ಮನಕರಗಿ ಸಾಕಾಯಿತು 1
ಜಾತಿಹೀನನೆಂಬುವೆನೇನೆ ಲೋಕ
ನಾಥನಿಗೆ ಕುಲ ಅದೇನೆ
ಈತನ ಹೊರ್ತು ಮತ್ತಾರಾಸೆನಗಿಲ್ಲ
ನೀತಿಯೆ ಈತಗೆ ಜಾತಿಭೇದವೆಂಬ 2
ಹೊಲೆಯರ ಮನೆಯಲ್ಲುಂಡನೆ ಇವ
ಗೊಲ್ಲರ ಕುಲದಲ್ಹುಟ್ಟಿದನೆ
ಗೊಲ್ಲರ ನಲ್ಲೆಯರಲ್ಲಿ ಹೋಗಿ ಈತ
ಗುಲ್ಲುಮಾಡಿ ಬೆಣ್ಣೆಗಳ್ಳನೆನಿಸಿಕೊಂಡ 3
ಪಾತರದವಳಲ್ಲಿಗ್ಹೋದನೆ ತಾ
ನೀತಿವಂತನ ಕಟ್ಟೊಡ್ಹೆಸಿದನೆ
ನೀತಿವಂತರು ಕೇಳಿರೀತನ ರೀತಿಯ
ದಾತ ಜಗನ್ನಾಥ 4
ನಿಲ್ಲದು ಮನ ಘಳಿಗಿವನಲಿ ನಾ
ಸಲ್ಲದ್ಹಾಂಗ್ಹೋದೆ ಮತ್ತೆಲ್ಲ್ಹೋಗಲಿ
ಬಲ್ಲಿದ ಶ್ರೀರಾಮನೆಲ್ಲ್ಹೋದರು ಬಿಡೆ
ಕಲ್ಲೆದೆಯವಗಾಗಿ ಪ್ರಾಣಹೋಗಲಿನ್ನು 5