ಅಮ್ಮ ನೀ ಕರೆತಾರೆ ಅರವಿಂದನಯನ
ಒಮ್ಯಾದರು ಬಾರ ನಮ್ಮನೆಗೆ
ಬ್ರಹ್ಮನ ಪಡೆದನಗಮ್ಯಮಹಿಮನೆ ತಾ
ಕಾಮ್ಯಾರ್ಥ ಕರೆವ ಶ್ರೀ ರಮ್ಮೆರಮಣನ ಪ
ಘನ ಉದಕದಿ ನೋಡೆ ಗ್ರಂಥಚೋರನ ಕೊಂದು
ವೇದವ ತಂದಜಗಿತ್ತು ಬರುವೊನೊ
ಪಯಾಬ್ಧಿಯೊಳು ಸುಧೆ ಸುರಜನರಿಗೆ ನೀಡಿ
ಮೇರುಮಂದರದಲಡಗಿಕೊಂಡಿಹನೊ 1
ಭೂಮಿ ಬಗಿದು ನೋಡ್ಹೇಮಾಕ್ಷನಂತಕನಾಗಿ
ಕೋಡಿಂದಲಾ ಧರೆನೆತ್ತಿ ಬರುವೊನೊ
ಉಗುರಿನಿಂದಲಿ ಉರಬಗಿದು ಕರುಳನ್ಹಾಕಿ
ಮೃಗರೂಪ ಧರಿಸಿ ಕಂಬದಲಿ ಬರುವೊನೊ 2
ಗೊತ್ತನ್ಹೇಳುವೆ ಈ ಜಗತ್ತು ಸಾಲದಲ್ಹೋಗಿ
ಒತ್ತಿ ಬಲಿಯ ಬಾಗಿಲ್ಹತ್ತಿಲಿರುವೊನೊ
ಹೈಹಯ ಮೊದಲಾದ ಸರುವ ರಾಜರನೆಲ್ಲ ಗೆಲಿದು
ಕಾಮಧೇನು ಕೊಂಡು ಬರುವನೊ3
ಒಬ್ಬ ಸತಿಯನಾಳಲಾರದೆ ಗರ್ಭಿಣಿಯ
ದಬ್ಬಿ ಕಾನಡಿಗೊಬ್ಬೆ (ಕಾಡಿನಲ್ಲೊಬ್ಬೆ?) ಲ್ಲಿರುವೊನೊ
ತೋಷ್ಟಪುತ್ರಿಯರು ಮೇಲಷ್ಟಭಾರ್ಯರು
ಶತಪತ್ನೇರನಾಳದಿನ್ನೆತ್ತÀ ಪೋಗಿಹನೊ 4
ಬತ್ತಲೆ ತಿರುಗುವನಿತ್ತ ಬರುವನ್ಹ್ಯಾಗೆ
ವಸ್ತ್ರವ ಕೊಟ್ಟು ನಮ್ಮ್ಹತ್ತಿಲೆ ಹರಿಯ
ಖಡ್ಗ ಪಿಡಿದು ಕಲಿಗಳ ಕೊಲ್ಲಲ್ಹೋಗುವ
ಬಿದ್ದು ಪಾದಾರವಿಂದಕ್ಕೆರಗಿ ಭೀಮೇಶಕೃಷ್ಣ(ನ) 5