ಆಗಿದ್ದ ಹರಿ ಈಗಿಲ್ಲವೇನು
ಸಾಗರಶಾಯಿ ಭಕ್ತರಭಿಮಾನ್ಯಲ್ಲೇನು ಪ
ಖುಲ್ಲರ್ಹಾವಳಿಯಿಂದ ಝಲ್ಲು ಬಿಡಿಸಿ ಮುನಿಯ
ಕಲ್ಲನ್ನು ಸತಿಮಾಡ್ದ ಬಿಲ್ಲು ಇಕ್ಕಡಿಗೈದ
ಕೊಲ್ಲಿ ದಶಮುಖನನ್ನು ನಲ್ಲೆಯಳ ಕರೆತಂದ
ಒಲ್ಲಿದು ರಾಜ್ಯವನಿತ್ತ ಸುಲಭದ್ವಿಭೀಷಣಗೆ1
ಅರಮನೆಕಂಬದಿ ಅರಿಯದಂತಡಗಿ ತಾ
ದುರುಳನ ಸದೆಬಡಿದು ತರಳ ಸಲಹಿದ
ಬರುವ ಮುನಿಶಾಪವಂ ವರಚಕ್ರದಿಂ ತಡೆದು
ಕರುಣದಿ ನೃಪನನ್ನು ಪೊರೆದ ಪರಮಾತ್ಮ 2
ಕರುಣಾಳು ಶ್ರೀರಾಮ ಚರಣದಾಸರ ಮನಕೆ
ಕೊರತೆಯ ತರದಂತಿರುವ ಬೆಂಬಿಡದೆ
ಮರುಗಿ ಸೊರುಗುವುದ್ಯಾಕೊ ಸರುವ ಭಾರವನ ಮೇ
ಲ್ಹೊರೆಸಿ ಮೊರೆಯಿಟ್ಟ ಬಳಿಕರಿಯನೇನೀಶ 3