ಹರಿಯೆ ಎನ್ನ ದೊರೆಯೆ ನಿನ್ನಯ ಮರೆಯಹೊಕ್ಕೆನೊ ಪ
ವ್ಯಾಘ್ರಗಿರಿಯೊಳಿರುವ ಸಿರಿನಾರಾಯಣ ಅ.ಪ
ಸಕಲ ಲೋಕಗಳನು ನೀನೇ ಸೃಜಿಸುವಾತನು
ಸುಖದಿ ಪ್ರಾಣಿಗಳನು ನೀನೇ ಸಲಹುವಾತನು
ಪ್ರಕಟವಾದ ಜಗವ ನೀನೆ ಪ್ರಳಯಗೈವನು
ನಿತ್ಯ ನೀನೆ ನಿಯಮಿಸುವನು 1
ಸ್ಥೂಲ ಸೂಕ್ಷ್ಮರೂಪ ನೀನೆ ಮೂಲ ಪುರುಷನು
ಲೀಲೆಯನ್ನು ಪ್ರಕಟಗೈವ ಕಾಲರೂಪನು
ನೀಲಲೋಹಿತಾದಿ ವಿಬುಧಜಾಲವಂದ್ಯನು
ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2
ಪರಮಪುರುಷ ಪಂಕಜಾಕ್ಷ ಪತಿತಪಾವನ
ಶರಧಿ ಶಯನ ಸಕಲಲೋಕ ಸಂವಿಭಾವನ
ವರಗುಣಾಢ್ಯ ವಿಗತಮಾಯ ವಿಶ್ವಮೋಹನ
ದುರಿತಗಜ ಮೃಗಾಧಿರಾಜ ವರದವಿಠಲ ವಿಹಗಯಾನ3