ಅ. ಗಣಪತಿ - ಸರಸ್ವತಿಯರು
ಶ್ರೀ ಗಣಪತಿ ಓಂ ನಮೋನಮೋ | ಜಯ
ಶ್ರೀ ಗಣಪತಿ ಓಂ ನಮೋನಮೋ ಪ
ಅಗಜಾವರಸುತ | ನಿಗಮಾಗಮನುತ |
ಯೋಗಿಗಳರಸನೆ | ಭಾಗವತರ ಪ್ರೀಯ ಅ.ಪ
ಶುಭ | ಲಗ್ನಪ್ರದಾಯಕ |
ಭಗ್ನದುರಿತ ನಿಜ | ಮಗ್ನ ಪ್ರಭಾಕರ1
ವಿದ್ಯಪ್ರದಾಯಕ | ಬುದ್ಧಿ ಪ್ರದಾಯಕ |
ಸಿದ್ಧಿಸಂಪದ ಆಯುರ್ ವೃದ್ಧಿ ಪ್ರದಾಯಕ 2
ಶಕ್ತಿ ಪ್ರದಾಯಕ | ಸೌಖ್ಯಪ್ರದಾಯಕ |
ಭಕ್ತಿದಾಯಕ ನಿಜ | ಮುಕ್ತಿದಾಯಕ ನಮೋ 3
ಋಣಬಂಧಂಗಳ | ಗುಣದಿಂ ಬಿಡಿಸುತ್ತ |
ತ್ರಿಣಯಕುಮಾರನೆ | ಪ್ರಣತನ ಪಾಲಿಸೋ 4
ಭವ ಭಯ ಹರ | ತ್ರೈಭುವನಜನಾರ್ಚಿತ |
ಕವಿಸುತಲೋಲನೆ | ಶಿವಸದಾನಂದನೆ 5