ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲಾಕ್ಷ ಶ್ರೀಹರಿ ಪ ನೊಂದೆನೊ ಭವಬಂಧದೊಳಗೆ ಸಿಂಧುಶಯನ ಪೊರೆಯೊ ಜಗದ್ವಂದ್ಯ ಪಾದಕೆರಗಿ ನಮಿಸುವೆ 1 ಸುಂದರಾಂಗ ಹರಿಯೆ ಭಕ್ತವೃಂದ ಪೊರೆದು ಕಾಯ್ವ ದೇವ ಸಿಂಧುಶಯನ ಶ್ರೀ ಮುಕುಂದನೆ 2 ಪಾಲಿಸೆನ್ನ ಪವನನಯ್ಯ ಪಾದಕೆರಗಿ ಮುಗಿವೆಕಯ್ಯ ಲೋಲಲೋಚನೆಯರ ಪ್ರಿಯನೆ 3 ರಂಗನೆ ಉತ್ತುಂಗ ಮಹಿಮ ಮಂಗಳರೂಪ ಪಾಂಡುರಂಗ ಕೃಪಾಪಾಂಗ ಶ್ರೀಹರಿ4 ಪಾಹಿ ಪಾಹಿ ಪಂಕಜಾಕ್ಷಿ ಪಾಹಿ ಲಕ್ಷ್ಮೀರಮಣ ಶ್ರೀಶ ಪಾಹಿ ಕಮಲನಾಭ ವಿಠ್ಠಲನೆ 5
--------------
ನಿಡಗುರುಕಿ ಜೀವೂಬಾಯಿ
ಅರೋಗಣೆಯ ಮಾಡೊ ಅಂಜನಾದ್ರಿಯ ವಾಸ ಆಲಸ್ಯವೇತಕೋ ಆಯಿತು ವೆಂಕಟೇಶ ಪ ತಳಿಗೆಯ ತೊಳೆದಿಟ್ಟು ಸುಳಿಬಾಳೆ ಎಲೆಯಿಕ್ಕಿ ನಳಿನಲೋಚನೆಯರುಗಳಿಂದ ಅಭಿಘರಿಸಿ ಎಳೆಯ ಮಾವಿನ ಮಿಡಿಯು ಉಪ್ಪು ಬೇವಿನ ಸೊಪ್ಪು ಹುಳಿಗೂಡಿ ಅರೆದಿಟ್ಟ ಶುಂಠಿ ಕಡಲೆ ಹಂಬೆ 1 ಕಣಿಲೆ ಕಂಚಿನಕಾಯಿ ಅಣಿಲೆ ಅಂಬಟನೆಲ್ಲಿ ಒಣಗಿದ ಮೆಣಸಿನ ಉರಿಯು ಉಪ್ಪಿನ ಹೆರೆಯು ಕಣುಮನಕ್ಕೊದಗಿಯೇ ಅಣಿಯಾಯಿತೆಡೆಯೊಳು 2 ಹೆರೆದ ತೆಂಗಿನಕಾಯ ಅರೆದ ಸಾಸಿವೆಯಿಕ್ಕಿ ಅರೆದು ಬೇಯ್ಸಿದ ಓಗರದೊಳು ಕಲಸಿಟ್ಟು ತರಿದ ಗುಳ್ಳದಕಾಯಿ ಹಾಗಲು ಕುಂಬಳಕಾಯಿ ಕೊರೆದ ಬಾಳೆಯಕಾಯಿ ಹುರಿದದೇ ತುಪ್ಪದಿ 3 ಸಣ್ಣಕ್ಕಿಯೋಗರವು ಬೆಣ್ಣೆಕಾಸಿದ ತುಪ್ಪ ಗಿಣ್ಣಲನೊರೆಹಾಲು ಸಣ್ಣ ಮೆಣಸು ಸಾರು ಅನ್ನ ಚಿತ್ರಾನ್ನವು ಮೊಸರನ್ನ ಹೆಸರ್ಹುಗ್ಗಿ ಉಣ್ಣಬಾರೆಲೋ ನೀನು ಇನ್ನು ತಡ ಬೇಡ 4 ಕೇಸಕ್ಕಿಯೋಗರವು ದೋಸೆ ಪಾಯಸವನ್ನು ಬೀಸು ಹಾರಿಗೆಯತಿರಸವು ಮಂಡಿಗೆಯು ಏಸು ಹೋಳಿಗೆ ಬೇಕೈಸನೀ ಉಣಲೇಳು 5 ಚಕ್ಕುಲಿ ಕರಜಿಯಕಾಯಿ ಮನೋಹರವು ಚೊಕ್ಕ ಬಿಳಿಯ ಬೇಳೆಸುಕ್ಕಿನುಂಡೆಯು ಕದಳಿ ರಸಾಯನವು ಇಕ್ಕಿಸಿಕೊಳ್ಳೊ ನೀ ಮಕ್ಕಳಾಟಿಕೆ ಬೇಡ 6 ಏಲಕ್ಕಿ ನಾಗರನಿಂಬೆ ಬೇವಿನಸೊಪ್ಪು ಮೇಲೆ ಒಗ್ಗರಿಸಿದ ನೀರು ಮಜ್ಜಿಗೆಯು ಹಾಲು ಮೊಸರು ಹಸಿಮಜ್ಜಿಗೆ ಸಹವಾಗಿ ಜಲವು ಮುಟ್ಟದ ಹಾಗೆ ಬೇರೆ ಬೇರಿರಿಸಿದೆ 7 ಗಾಯಿತ್ರಿ ಮಂತ್ರದಿಂ ತೋಯವ ಪ್ರೋಕ್ಷಿಸಿ ಬಾಯೊಳು ಪ್ರಣವವನು ಜಪಿಸಲಾಕ್ಷಣದಿ ರಾಯವೆಂಕಟಪತಿಯು ಆಪ್ಯಾಯನವ ಮಾಡಿ ದಾಯವಾಗಿತ್ತನು ಭಕ್ತಜನರಿಗೆಲ್ಲ 8 ಈ ರೀತಿಯಿಂದಲೆ ಆರೋಗಿಸುವುದೆಂದು ವಾರಿಜನಾಭನ ಸಾರಿ ವರ್ಣಿಸಲು ಮೋರೆಯ ಪ್ರಸಾದ ಕರೆದು ಇವನು ನಮ್ಮ ವರಾಹತಿಮ್ಮಪ್ಪನೊಂದುಗೂಡಿರುವನು 9
--------------
ವರಹತಿಮ್ಮಪ್ಪ
ಎತ್ತಣದನಿಯಿದು ಎತ್ತಣ ಮಧುರವ ಚಿತ್ತಾಕರ್ಷಕ ಬಾನುಲಿಯೇ ಪ ಮತ್ತ ಭೃಂಗಾಳಿಯ ಝೇಂಕೃತಿ ಶ್ರುತಿಯು ಸುತ್ತ ಮಯೂರದ ನಾಟ್ಯದ ನಲವೋ ಅ.ಪ ಏಣಲೋಚನೆಯರ ಕಾಂಚನ ಕಿರುಗೆಜ್ಜೆ ವೀಣಾನಾದವ ಅಣಕಿಪುದು ತಾಣವದೆಲ್ಲಿಯೋ ಕಾಣಿರೆ ಸಖಿಯರೇ ವೇಣು ಗೋಪಾಲನ ನಾಟ್ಯವಿದಲ್ತೇ 1 ಅಲ್ಲಿ ನೋಡೇ ತಂಗಿ ಬಾನೆಡೆಯಿಂದಲಿ ಮಲ್ಲಿಗೆ ಪೂಮಳೆ ಸುರಿಯುತಿದೆ ನಲ್ಲೆಯರಿಂಚರ ಸರಿಗಮಪದನಿಯು ಎಲ್ಲ ರಾಗಗಳಲಿ ನಲಿಯುತಲಿಹುದು 2 ಅಂಗನೆಯರೆ ನಮ್ಮ ಗೆಜ್ಜೆಯ ಝಣರವ ಮಂಗಳಗಾನಕೆ ಇಂಬಿರಲಿ ಹೊಂಗೊಳಲೂದುವ ಚಿನ್ಮಯ ಮಾಂಗಿರಿ ರಂಗನ ದರ್ಶನ ಮಾಡುವ ಬನ್ನಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಮಲ ಭವನ ಪಿತನೆ ಸುವ್ವಿ ಅಮರಸುತನ ಸಖನೆ ಪ ಸುವ್ವಿ ಉಮೆಯ ಪತಿಯಸಖನೆ ಸುವ್ವಿರಮೆಯ ಪತಿಯಚ್ಯುತನೆ ಅ.ಪ ಚಂದ್ರಕಾಂತದೊರಳ ಕಡೆದು ಸಾಂದ್ರ ಕುಂತಳೆಯರು ನೆರದು ಸರಸಮಿಗೆ ಯಿಂದ ನಲಿದು ಸುವ್ವಿಲಾಲೆ 1 ಸೇರಿಸಿದ್ದ ಸೆರಗು ಜಾರೆ ಹೊಗರು ಮೀರೆ ಸಾರೆ ಕಸ್ತೂರಿ ಪರಿಮಳವಿರೆ ಸರಸಗುಣದಿಂದ ಮಿತ್ರೆ 2 ಹರಿಣಲೋಚನೆಯರು ಕೂಡಿ ಹರುಷಮಿಗೆ ನಲಿದಾಡಿ ಧರೆಯೊಳಮರ ಪುರಿಯ ನೋಡಿ ಧೊರೆಯು ಲಕ್ಷ್ಮೀಪತಿಯ ಪಾಡಿ 3
--------------
ಕವಿ ಲಕ್ಷ್ಮೀಶ
ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ ದೀಜನ ಮನೋಹರ ಮಾಣಿಕ್ಯ ಕನಕಾ ವೈಜಯಂತಿ ಹಾರ ಪಾವನ್ನ ಪದಕ ಪ ಕೇಶಿಭಂಜನ ವ್ಯೋಮಕೇಶ ವಂದಿತ ಪಾದ ಕ್ಲೇಶನಾಶನ ವಾತೇಶನ ಜನಕ ಕೇಶರಿರುಹ ಮುಂಜಿಕೇಶನೆ ಕುಂಕುಮ ಶೌರಿ 1 ವಾರುಣಿ ಪತಿನುತ ವಾರುಣನ ಭಯ ನಿ ವಾರಣಾ ವಾರಣಾಶಿ ಪುರದರಸೆ ವಾರಣ ನಗರಿಯ ವಾರನಹತಪಲ್ಲ ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ 2 ಮಾದೇವಿ ರಮಣ ಭೂಮಿದೇವಿ ಉದ್ಧಾರ ಮಾಧುರ್ಯ ವಚನ ಉಮಾದೇವಿ ವಿನುತಾ ಮಾಧಾರ ಮಹಶೂರ ಮತ್ಕುಲನೆ ಪ್ರೇ ಮಾಧವ ರಾಯಾ 3 ಗೋವಳಿ ಪರಿಪಾಲ ಗೋವಳೇರಾ ಪ್ರಿಯಾ ಗೋವುಗಳ ಕಾಯಿದ ಗೋವಳರಾಯಾ ವಿಪ್ರ ಸಂರಕ್ಷ ಗೋವಿದಾಂಪತಿ ರಂಗ ಗೋವಿಂದ ನಂದ 4 ಮಧುಕೈಟಭಾಸುರ ಮದಗರ್ವ ಮರ್ದನ ನಿತ್ಯ ಮಧುರನ್ನ ಪಾನಾ ಮಧುರಾಪುರ ಪಾಲ ಮದಗಜ ಹರಣಾ ಶಾ ಮದವರ್ಣ ಶರೀರ ಮಧುಸೂದನನೆ 5 ಇಷ್ಟಭಕ್ತರ ಕುಲ ಇಷ್ಟದೈವವೆ ಸರ್ವ ಇಷ್ಟಾರ್ಥ ಕೊಡುವ ಬಲಿಷ್ಟನು ನಿನ್ನ ಇಷ್ಟ ಅಷ್ಟಯೆಂದು ತಿಳಿಯಲಿ ವಶವಲ್ಲ ವಿಷ್ಣು ಸರ್ವೋತ್ತಮ ವಿಶ್ವನಾಟಕನೆ6 ಅಕ್ರಮದಲಿ ಸ್ವರ್ಗ ಆಕ್ರಮಿಸಿ ಬಲಿ ವಿಕ್ರಮನಾಗಿ ಕಾಲಕ್ರಮಣಿ ಮಾಡೆ ಶಕ್ರಮರ್ಚಿಸೆ ಅನುಕ್ರಮನಾಗಿ ಪ ರಾಕ್ರಮದಲಿ ಬೆಳದೆ ತ್ರಿವಿಕ್ರಮನೆ 7 ವಾಮಲೋಚನೆಯರ ವಾಮನ ಕೆಡಿಸಿದೆ ವಾಮನವಾಶಿಷ್ಟವಾ ಮುನಿವಂದ್ಯ ವಾಮನದಲಿ ದಾನವಾಮನ್ಯಗಳರನ್ನು ಅ ವಮಾನ ಮಾಡಿದೆ ಸಿರಿವಾಮನನೆ 8 ಶ್ರೀಧರ ರಮಣನೆ ಶೃಂಗಾರ ವಾರಿಧಿ ಶ್ರೀಧನ ಸಂಪತ್ತಾಶ್ರಿತ ಜನರಿಗೆ ಶ್ರೀಧೇನು ನೀನಯ್ಯಾ ಶ್ರೀ ಕರುಣಾಕರ ಶ್ರೀದೇವಿ ಉರಭೂಷಾ ಶ್ರೀಧರನಂತಾ 9 ಋಷಿಕೇಶನ ತಾತ ಋಷಿಜನ ಸಂಪ್ರೀತ ಋಷಿಕುಲೋದ್ಭವ ಪುರುಷ ರಾಮ ಮಹಾ ಋಷಿನಾಮಧೇಯನೆ ಋಷಿಪತ್ನಿ ಪಾಲನೆ ಋಷಿಗಳ ಒಡೆಯನೆ ಹೃಷಿಕೇಶ ದೇವ 10 ಪದುಮಜಾಂಡದಲ್ಲಿ ಪದುಮೆ ಮಾತನು ಕೇಳಿ ಪದುಮನಾಭಿಯಲ್ಲಿ ಪದುಮಜನ ಪೆತ್ತ ಪದುಮಾಸ್ಯ ಪದುಮಾಕ್ಷ ಪದುಮಕರನೆ ಪಾದ ಪದುಮ ಮಿಗಲು ಕಾಂತಿ ಪದುಮನಾಭನೆ11 ಧಾಮನಿಧಿಕುಲನು ಧಾಮನೆ ನಿರುತ ತ್ರಿ ಧಾಮನಿವಾಸ ಸುಧಾಮನ ಮಿತ್ರ ಧಾಮ ಪುಣ್ಯಧಾಮ ಭಕ್ತ ಹೃದ್ವನಜ ಧಾಮ ಮಧುಕರನೆ ದಾಮೋದರ ಧರ್ಮಾ 12 ಶಂಖ ಸುರಾಹರಾ ನಿಃಶಂಕ ಚರಿತ ಶಂಖಪಾಣಿ ಶಶಾಂಕ ಸುವದನ ಸಂಖ್ಯೆಯಿಲ್ಲದೆ ತಾಯಿ ಸಂಕಲೆ ಹರಿಗಡಿದೆ ಸಂಕರುಷಣನುವುಜ ಸಂಕರುಷಣನೆ 13 ಪ್ರಧಾನ ಮೂರುತಿ ಪ್ರದ್ವೀಪ ವರ್ಣ ಸುಪ್ರದಾಯಕನೆ ಪ್ರದೇಶ ಪರಿಮಾಣ ವರಪ್ರದ ಸಿದ್ಧನೆ ಪ್ರದ್ಯುಕ್ತ ಅವ್ಯಕ್ತ ಪ್ರದ್ಯುಮ್ನ ವಿಶ್ವ14 ವಾಸುವಾನುಜ ಶ್ರೀನಿವಾಸ ಪುಂಡ್ರೀಕ ವಾಸುದೇವನ ಶಮನಪುರದಲ್ಲಿ ವಾಸಮಾಡಿಸಿದಯ್ಯಾ ವಾಸವಾರ್ಚಿತ ಶ್ರೀ ವಾಸುದೇವ 15 ಅನುಗಾಲವು ನಿನ್ನ ಅನುಸರಿಸಿದೆ ನಾನು ಅನುಕೂಲವಾಗಿ ಎನ್ನನು ಸಾಕುವುದು ಅನುಮಾನವ್ಯಾತಕೆ ಅನಿಮಿತ್ತ ಬಂಧು ಅನಿರುದ್ಧ ಶ್ರೀಶಾ 16 ಪುರುಷ ಪುರುಷ ಶ್ರೇಷ್ಠ ಪುರುಷಾರ್ಥ ಕಾರಣ ಪುರುಷೇಶ್ವರ ತತ್ಪುರುಷಾದಿ ಪುರುಷ ಪುರುಷ ಬೀಜ ವೇದ ಪುರುಷ ಪರಮ ಪುರುಷ ಪುರುಷರು ಮೋಹಿಸುವ ಪುರುಷೋತ್ತಮನೆ 17 ಅಕ್ಷಯ ಬಲ ಸಹಸ್ರಾಕ್ಷ ರಕ್ಷಕ ಅಕ್ಷರಪರ ಬ್ರಹ್ಮ ಗೀರ್ವಾಣಧ್ಯಕ್ಷ ಅಕ್ಷಯ ಪಾತ್ರಿಯ ಶಾಖಾದಳವನ್ನು ಅಕ್ಷಯ ಮಾಡಿದಧೋಕ್ಷಜ ಚಕ್ರಿ 18 ನರಸಖ ನರಹರಿ ನಾರಾಯಣ ವಾ ನರ ದಳನಾಯಕ ನಾರದ ವಿನುತ ನರಕ ಉದ್ಧಾರಕ ನರಕಾಂತಕ ಕಿ ನ್ನರ ಸುರನರೋರಗ ವೃಂದ ನರಸಿಂಹ 19 ಸಚ್ಚಿದಾನಂದಾತ್ಮ ಸಚಲ ವಿಗ್ರಹನೆ ಸಚ್ಚರಾಚರದೊಳೂ ಗುಣಪರಿಪೂರ್ಣ ಸಚ್ಛಾಸ್ತ್ರದಲಿ ನಿನ್ನ ಸಾಮರ್ಥಿ ಪರಿಪೂರ್ತಿ ಸಚ್ಚೂತ ಚುತಿ ದೂರ ಚಿನ್ಮಯ ರೂಪಾ 20 ಜನನ ಮರಣ ನಾಶ ಜನನಾದಿಕರ್ತಾಂ ಜನಸುತಗತಿ ಪ್ರೇಮಾಂಜನ ಗಿರಿಧಾಮ ಜನಕವರದ ಸಜ್ಜನರಘದಹನ ದು ರ್ಜನರ ಕುಲರಾತಿ ಜನಾರ್ದನನೆ 21 ವೀಂದ್ರವಾಹನ ಮಹೇಂದ್ರಧಾರನೆ ಗ ಜೇಂದ್ರನ್ನ ಬಿಡಿಸಿ ನಕ್ಷೇಂದ್ರನ ಸೀಳಿ ನಾ ಗೇಂದ್ರ ಶಯನ ಗುಣಸಾಂದ್ರ ಗೋಕುಲ ಚಂದ್ರ ಇಂದ್ರಮಣಿ ನಿಭ ರಾಮಚಂದ್ರ ಉಪೇಂದ್ರಾ 22 ಹರಿ ಎನುತಾ ಹರಿ ಹರಿದು ಓಡಿ ಬರೆ ಹರಿದು ಪೋಗಿ ಪರಿಹರಿಸಿದ ಖಳನ ಹರಿ ಹರಿಯು ನಲಿವನೆ ಹರಿರೂಪ ಪರಿ ಹರಿನಾಮವೆ ಗತಿ ಹರಿ ಸರ್ವೋತ್ತಮಾ23 ಕೃಷ್ಣದ್ವಯಪಾಯನ ಉತ್ಕøಷ್ಟ ಮುನೇಶ ಕೃಷ್ಟಿಗೆ ಬಂದ ಕಷ್ಟ ಓಡಿಸಿದೆ ಕೃಷ್ಣವತ್ರ್ಮನೆ ಸಂತುಷ್ಟೀಲಿ ಸುಖಬಡುವ ಕೃಷ್ಣಾವತಾರ ಕೃಷ್ಣ ಕಮಲೇಶ 24 ನಿನ್ನ ಮಹಿಮೆಯನ್ನು ಬಣ್ಣಿಸಲಳವಿಲ್ಲ ನಿನ್ನೊಳಗೆ ನೀನು ಬೀಯ ಬೀಜವನು ಎನ್ನ ಪಾಲಿಸುವುದು ವಿಜಯವಿಠ್ಠಲ ಪ್ರಸನ್ನ ಭಕ್ತರ ವರದ ಬಾಲ ಗೋಪಾಲ ಜೋ ಜೋ 25
--------------
ವಿಜಯದಾಸ
ನಲಿದಾಡು ಬಾರೊ ಗರುಡತುರಂಗಾ ಪ ದುರುಳ ಭಸ್ಮಾಸುರ ಉರಿಹಸ್ತ ಪಡೆದಂದು ತರುಣಿರೂಪದೆ ನಲಿದು ಹರನ ಪೊರೆದೆಯಲ್ತೆ 1 ಲೋಲ ಲೋಚನೆಯರ ಆಲಯಗಳ ಪೊಕ್ಕು ಹಾಲು ಬೆಣ್ಣೆಯ ಮೆದ್ದ ಗೋಪಾಲ ವಿಠಲನೇ 2 (ಭವ ಬಂಧವು ನಾಮಪ್ರಿಯ ಪರಂಧಾಮನೇ) 3 ಆವ ಬಂಧವನ್ನೂ ಬಿಡಿಸಿ ನವನೀತವೀವನೇ ಕಾವರಿಲ್ಲವೋಯೆನ್ನ ಮಾವಿನ ಕೆರೆರಂಗಾ 4 ಕಾಮಿತಂಗಳ ದೇವ ಶಾಮಲಾಂಗನೆ ನಿನ್ನ ನಾಮವ ನೆರೆಸಾರು ರಾಮದಾಸಾರ್ಚಿತ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೆರಗದಿರು ಮನವೇ ನೀ ತತ್ವವನು ತಿಳಿಯದೆ ಮರುಗಬೇಕಾಗುವುದು ಅವಿವೇಕಕೆ ಪ ಸಿರಿಯರಸ ನರಹರಿಯ ಮರೆತು ಬಾಳುವ ನರನು ನರಕಕ್ಕೆ ಗುರಿಯಾಗಿ ಸೊರಗುವನು ನಿಜದಿ ಅ.ಪ ಸುಲಭವಲ್ಲವೊ ನಿನಗೆ ಮನುಜ ಜನ್ಮದ ಲಾಭ ತನುಭೋಗವಲ್ಲವೊ ಅದರ ಫಲವು ವನಜನಾಭನ ಮನದಿ ನೆನೆನೆನೆದು ದಿವ್ಯ ಸ ನ್ಮಾನವ ಪಡೆಯುವತನಕ ಶುನಕಕ್ಕೆ ಸಮನೋ 1 ಭವಮೋಹದಿಂದ ನೀ ಘನ ಪಾಪಗಳ ಮಾಡಿ ಧನಿಕನೆಂದೆನಿಸಿದರೆ ಎಣಿಕೆ ಬಾರದೋ ದಿನದಲ್ಲಿ ಧನದಿಂದ ಪಡುವ ಭೋಗಗಳು ಬಂ ಧನದಲ್ಲಿ ಕೆಡಹುವುವು ನಿನ್ನನು ನಿಜದಿ 2 ಪ್ರೇಮಪಾಶಕೆ ಸಿಲುಕಿ ವಾಮಲೋಚನೆಯರ ಕಾಮಿತಕೆ ಬಿದ್ದು ನಿರ್ನಾಮವಾಗದಿರೊ ಹೇಮದಾಸೆಗೆ ನಿನ್ನ ಕಾಮನೆಂದ್ಹೊಗಳುವರೋ ರೋಮ ರೋಮದಿ ಸುಲಿದು ಕೊನೆಗೆ ಬಿಸುಡುವರೋ 3 ಮುನ್ನ ಏಸೇಸು ಜನ್ಮಗಳ ಪೊಂದಿದೆಯೊ ನೀ ನಿನ್ನವರು ಯಾರೆಂದು ಪೇಳಲಳವೇ ಘನ್ನ ಮಹಿಮನಲಿ ಸಂಪನ್ನಮತಿಯನೆ ಪೊಂದು ಪನ್ನಗಶಯನ ಪ್ರಸನ್ನನಾಗುವನು 4
--------------
ವಿದ್ಯಾಪ್ರಸನ್ನತೀರ್ಥರು
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ 1 ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ2 ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ 3
--------------
ಕೆಳದಿ ವೆಂಕಣ್ಣ ಕವಿ