ಕನಿಕರವಿಲ್ಲವೆ | ವನರುಹಲೋಚನಾ ಪ
ಘನಕೃಪಾಪೂರ್ಣ ನೀನೆನುವುದು ಜಗವೆಲ್ಲಾ
ಎನಗದು ನಿಜವೆಂದು ಅರಿವಾಗಲಿಲ್ಲ ಅ.ಪ
ವೇದ ಪುರಾಣವ ಓದಿ ತಿಳಿಯಲಿಲ್ಲ
ಸಾಧುಸಂತರ ಸೇವೆ ಸಾಧಿಸಲಿಲ್ಲ
ಭಾರ ನಾನಾದೆನಲ್ಲ
ಆದಿಮೂರುತಿ ನಿನ್ನಾರಾಧನೆ ಮಾಡಲಿಲ್ಲ 1
ಜ್ಞಾನ ಸುಧಾರಸ ಪಾನವ ಮಾಡಲಿಲ್ಲ
ದೀನತೆಯೊಳು ನಿನ್ನ ಧ್ಯಾನಿಸಲಿಲ್ಲ
ದೀನರ ಸಂಗದಿ ಶ್ವಾನನಂತಾದೆನಲ್ಲ
ನಾನು ನನ್ನದು ನಿನ್ನಾಧೀನವಾಗಲು ಇಲ್ಲ 2
ನಿನ್ನ ಬಿಟ್ಟನ್ಯರ ಇನ್ನು ಸೇವಿಪುದಿಲ್ಲ
ಅನ್ನ ಪಾನಂಗಳೊಳಿನ್ನಾಸೆಯಿಲ್ಲ
ನಿನ್ನ ನಾಮಾಮೃತವನು ಬಿಡುವವನಲ್ಲ
ನಿನ್ನವನೆಂದೆನ್ನ ಮನ್ನಿಸೊ ಮಾಂಗಿರೀಶ 3