ಪುಂಡರೀಕಾಂಬಕ ಪರಮದಯಾಳೊ ಬ್ರ-
ಹ್ಮಾಂಡರರಸನಾಥ ಬಿನ್ನಹ ಕೇಳೊ ಪ.
ನಂಬಿದವನು ಬಲ್ಲೆ ನಿನ್ನ ಪಾದವನು
ಇಂಬಾಗಿ ಸಲಹುವಿ ಎನ್ನ ಮಾನವನು
ಕುಂಬಾರ ಜನರೆಂಬ ಕುಹಕದ ನುಡಿಯ
ಶಂಭುವಂದಿತ ತಾಳಲಾರೆ ಎನ್ನೊಡೆಯ 1
ಅಜ ಭವೇಂದ್ರಾದಿ ಲೋಕೇಶರು ನಿನ್ನ
ಭಜಿಸಿ ಪೊಂದಿಹರತ್ಯಧಿಕ ಭಾಗ್ಯವನ್ನು
ಕುಜನರು ಕುತ್ಸಿತಾಹಂಕಾರವನ್ನು
ತ್ಯಜಿಸುವಂದದಿ ಎನ್ನೊಳಾಗು ಪ್ರಸನ್ನ 2
ಗರುಡಗಮನ ಗಜರಾಜನ ಪೊರೆದಂತೆ
ತ್ವರೆಯಿಂದೆನ್ನನು ಕಾಯ್ದರಹುದು ನಿಶ್ಚಿಂತೆ
ಉರಗರಾಜೇಂದ್ರ ಶಿಖರ ಸನ್ನಿವಾಸ
ಸಿರಿಯರಮಣ ಶುಭಕರ ಶ್ರೀನಿವಾಸ 3