ನಾರದ ಮುನಿವರರೆ | ಸದ್ಗುರುವರ
ನಾರಾಯಣ ಪ್ರಿಯಶ್ರೀ ಪ
ನಾರದ ಮುನಿವರರೆ ನಿಮ್ಮಯ
ಚಾರುಚರಣಕೆ ನಮಿಪೆನು ಆ
ದ್ವಾರಕಾಪುರನಿಲಯ ಕೃಷ್ಣನ-
ಸಾರ ಪೇಳ್ದಿರಿ ಅ.ಪ.
ಪರಮ ಸುಂದರ ರೂಪನು | ಆ ಕೃಷ್ಣನು
ಪರತರ ಪರಮಾತ್ಮನು
ಶರಣಜನ ಮಂದಾರನಾತನು
ಕರುಣಶರಧಿಯು ಕಾಮಜನಕನು
ಸರಸಿಜೋದ್ಭವ ಸುರರಿಗಧಿಕನು
ಹರಿಯು ಇವನೆಂದರುಹಿದಿರಿ ಗುರು 1
ಲೋಕಮೋಹಕನಯ್ಯನು | ಶ್ರೀಕೃಷ್ಣನು
ಲೋಕ ವಿಲಕ್ಷಣನು
ಲೋಕ ಕಂಟಕರನ್ನು ಶಿಕ್ಷಿಸಿ
ನಾಕ ನಿಲಯರ ಭರದಿ ರಕ್ಷಿಸಿ
ಲೋಕ ಕಲ್ಯಾಣವನ್ನು ಗೈದ ತ್ರಿ
ಲೋಕದೊಡೆಯನೆಂದರುಹಿದಿರಿ ಗುರು 2
ವಿಧಿ ಶುಭರೂಪನ | ಶ್ರೀಕೃಷ್ಣನ
ದೇವಾದಿದೇವೇಶನ
ಪಾವನಾಂಘ್ರಿಗಳನ್ನು ಪೂಜಿಸಿ
ಸೇವಿಸುವ ಸೌಭಾಗ್ಯವೆಂದಿಗೆ
ದೇವ ಕರಿಗಿರಿನಿಲಯ ನರಹರಿ
ಯಿವನೆಂಬುದನೆನಗೆ ತಿಳುಹಿರಿ 3