ಶರಣಜನಮಂದಾರ ಮುರದಾನವವಿದಾರ
ಕರವಿಡಿದು ಕಾಪಿಡೈ ಕಮಲನಾಭ
ಧರೆಯೊಳಾರಿರ್ಪರೈ ಪರಮಸತ್ಯಾತ್ಮರೀ
ಪರಿಯ ನೋಡಲು ನಿನಗೆ ಸರಿಯನರಿಯೆ
ಮೂರಡಿಯ ನೆವದಿ ನೀನಾರಯ್ದು ಭೂಮಿಯಂ
ಧಾರಾವಿಧಿಯಿನಿತ್ತ ದೈತ್ಯವರನ
ಶಿರಮೆಟ್ಟಿ ಪಾತಾಳ ಕುಹರದೊಳ್ ಸೆರೆವಿಡಿದು
ಪರಮ ಜಾಗರದಿಂದ ಕಾಪುಗುಡುವೈ
ಕರಿರಾಜವರದ ಲಕ್ಷ್ಮೀವಿನೋದ
ಕರುಣಾಳು ನೀನೆಂದು ತಿಳಿದೆ ಮನದೆ
ಭರದಿಂದ ಮೈದೋರು ಮುದುವ ಬೀರು
ವರಶೇಷ ಗಿರಿನಿಲಯ ಸುಗುಣವಲಯ