ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂಬೆನು ಪವಮಾನ ದೇವನಲಿ ಶ್ರೀನಿವಾಸ ಕರುಣಾ ತಾನಾಗೀತನಕಡೆಯಲಿ ಬಹ ಲಕ್ಷ್ಮೀಮಾನ, ದೀನ ಶರಣಾ ಪ. ದುರುಳ ದಶಾಸ್ಯನ ಸೆರೆಯೊಳಗಿಕ್ಕಿದ ಸುರವರನಣುಗನನೂ ನೆರೆಯದೆ ಮಾರುತಿ ಇರುವ ನಿಮಿತ್ತದಿ ಕರಿಸಿದ ರವಿಜನನು ತಿರುಗಿ ದ್ವಾಪರದಿ ಬರಲಾರ ರವಿಜನ ನರನಿಂದೊರಸಿದನು ಎರಡು ಯುಗದೊಳೀ ತೆರದಲಿ ಭಾರತಿ ವರನನು ಸೇರಿದನು 1 ಶ್ರೀಕರ ಜೀವರಿಗೇಕೀ ಭಾವವ ಪೋಕ ಮೃಗಗಳಂದೂ ಕಾಕರಟನದಂತೊರೆವದನರಿತು ದಿ- ವೌಕಸಗಣಬಂದು ಶ್ರೀಕಮಲಾಸನ ವಂದ್ಯನೆ ಸಲಹೆನೆ ಸಾಕುವ ತಾನೆಂದೂ ಈ ಕಲ್ಯಾಣ ಗುಣಾಢ್ಯನ ಭೂಮಿಗೆ ತಾ ಕಳುಹಿದನಂದು 2 ಅದರಿಂ ತರುವಾಯದಲಿ ಸುಖಾಂಭುದಿ ಒದಗಿದ ತ್ವರೆಯಿಂದ ಪದುಮನಾಭ ಮೂರುತಿಯ ಕೆಲದಿ ನಿಂ- ದದುಭುತ ಭರದಿಂದಾ ವಿಧಿಭವ ಲೋಕಾದ್ಯಧಿಕೃತ ಪುಣ್ಯಾ ಸ್ಪದ ತೋರುವೆನೆಂದಾ ವಿಧಿ ಪದ ಯೋಗ್ಯನ ಚದುರತನಕೆ ಮೆಚ್ಚಿ ಪೂರ್ಣಾನಂದ 3 ವರ ವೈಕುಂಠವ ರಜತ ಪೀಠ ಸ- ತ್ಪುರದೊಳಗಿರಿಸಿಹನು ವಿರಜೆಯ ಮುನಿಕಡತ ಸರಸಿಗೆ ಕರೆಸಿದ ಮುರದಾನವಹರನು ಚರಣಾಂಬುಜಕಿಂಕರವರ ಚಂದ್ರೇ- ಶ್ವರನಲಿ ಕರುಣವನು ಇರಿಸಿ ಭಜಿಪ ಸುರತರುವೆನಿಸಿದ ಶ್ರೀ- ವರನ ಮಹಾತ್ಮೆಯನು 4 ಜ್ಞಾನಾನಂದಾಂಬುಧಿ ಶೇಷಾದ್ರಿಯ ಶ್ರೀನಿವಾಸನಿವನು ತಾನಾಗಿಲ್ಲಿಗೆ ಬಂದಿಹ ಭಕ್ತಾ- ಧೀನ ದಯಾಕರನು ಮಾನಸಗತ ಮಾಲಿನ್ಯವ ಕಳೆದನು ಮಾನವ ಬಿಡಿಸುವನು ನಾನಾಭೀಷ್ಟವ ನಿರವಧಿ ಕೊಡುತಿಹ ಮೌನಿ ಜನಾರ್ಚಿತನು 5
--------------
ತುಪಾಕಿ ವೆಂಕಟರಮಣಾಚಾರ್ಯ