ಭಕ್ತಿಯೆಂಬ ಹೆಣ್ಣ ಶಕ್ತಿಯನ್ನು ನೋಡಿ
ಮುಕ್ತಾಶ್ರಯ ಲಕ್ಷ್ಮೀಪತಿಯನ್ನು ಪಾಡಿ ಪ.
ಸ್ವಾನಂದ ಪರಿಪೂರ್ಣ ಪರಮ ಮಂಗಲಮೂರ್ತಿ
ಶ್ರೀನಿವಾಸಗೆ ಸರ್ವ ಸಂಗವ ಬಿಡಿಸಿ
ತಾನಿರುವಲ್ಲಿಗೆ ಹಿಡಿದೆಳತರಿಸಿ
ಸಾನುರಾಗದಿ ತನ್ನ ಸಂಗಡಲಿರಿಸಿ 1
ಅಣುರೇಣು ತೃಣಕಾಷ್ಠ ಪರಿಪೂರ್ಣ ಸರ್ವೇಶ
ಗಣನೆಯಿಲ್ಲದ ದಿವ್ಯ ಗುಣಗಳುಳ್ಳವನು
ಎಣಿಸಲು ಇವಳ ಜನರ ದೋಷಗಳನು
ಕ್ಷಣ ಬಿಟ್ಟಗಲದೆ ಇವಳ ಕೂಡಿಹನು 2
ಭೂಧರ ಗಿರಿವರ ಶೋಭಿತ ಮೂರ್ತಿ
ಮಾಧವ ಪರಿಹರಿಸುವನು ಭವಾರ್ತಿ
ಪಾದ ಪಲ್ಲವಗಳ ನಂಬಿದವರಿಗರ್ಥಿ
ಸಾಧಿಪ ಕರುಣಾಳು ಹರಿಯ ಶ್ರೀಕೀರ್ತಿ 3