ಧ್ಯಾನಿಸಿನ್ನು ಶ್ರೀನಿವಾಸನಾ ಶ್ರಿತಕಲ್ಪಭೂಜನ
ಧ್ಯಾನಿಸಿನ್ನು ಶ್ರೀನಿವಾಸನಾ ಪ.
ನಖಮಣಿಶ್ರೇಣಿವಿರಾ-
ಜಿತ ನಳಿನಚರಣಯುಗಳನ
ಸುಕುಮಾರ ಕಮನೀಯಾಂಗನ
ಅಖಿಲ ಲೋಕಕ್ಷೇಮಧಾಮನ 1
ಪೀತಾಂಬರಧರ ವರ ಜೀ-
ಮೂತನೀಲವರ್ಣನ
ಶ್ರೀತರುಣೀಶುಭವಕ್ಷನ
ಶ್ರೇತವಾಹನಸೂತನ ಖ್ಯಾತನ 2
ಶಂಖ ಚಕ್ರ ಗದಾ ಪುಷ್ಕ-
ರಾಂಕ ಚತುರ್ಭುಜನ
ಪಂಕಜನಾಭನ ಕೌಸ್ತುಭಾ-
ಲಂಕೃತ ಶ್ರೀವರದೇವನ 3
ಚಂದ್ರಸಹಸ್ರಸಮಾನನ
ಕುಂದಕುಟ್ಮಿಲರದನನ
ಸುಂದರಾರುಣಾಧರಾರ-
ವಿಂದದಳಾಯತನಯನನ 4
ಕನಕಕುಂಡಲಕರ್ಣಯುಗನ
ಮಣಿಖಣಿತಕಿರೀಟನ
ಗುಣನಿಧಿ ಲಕ್ಷ್ಮೀನಾರಾ-
ಯಣನ ಸಂಕರ್ಷಣನ ದೃಢದಿ 5