ವಾಮನಾವತಾರ
ವಾಮನನನು ನೆನೆ ಹೇ ಮನವೇ ವಟು
ವಾಮನನನು ನೆನೆ ಹೇ ಮನವೇ
ಕಾಮಪೂರಣ ಲಕ್ಷ್ಮೀಧಾಮನ ಮರೆಯದೆ ಪ.
ಶ್ಯಾಮಸುಂದರ ಸುರ ಪ್ರೇಮದಿ ಕಶ್ಯಪ
ಧಾಮವಾ ಬೆಳಗುತ ಬಂದ
ಭೂಮಿಯನಳದ ಸುತ್ರಾಮಗಿತ್ತ ನಿ
ಸ್ಸೀಮ ಸಾಹಸ ಗೋವಿಂದ ನೀ ಸಲಹೆಂದು 1
ಬಲಿಯ ದೃಢಕೆ ಮೆಚ್ಚಿ ಸಲಹುತ ಮುಂದಿನ
ವಲಭಿದಾಗುವೀ ನೀನೆಂದ
ಕಲುಷಾಪಹಪದಕಮಲವ ಶಿರದೊಳು
ನಿಲಿಸಿ ಬಾಗಿಲೊಳು ನಿಂದವ ನೀನೆಂದು 2
ಶ್ರೀ ಭೂಮಿಯುತ ಮುಕ್ತಾಭರಣಾಶ್ರಿತ
ಸೌಭಾಗ್ಯಕರ ಲೀಲಾ
ಆಭೀರರ ಕನ್ನೆಯರೊಲಿಸಿದ ಪದ್ಮ-
ನಾಭ ವೆಂಕಟಪತಿ ಪರಮ ಪುರುಷನೆಂದು 3