ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮನ ನೋಡಿದೆ ರಘುಕುಲ ತಿಲಕನ ಕಾಯ ಕೌಸಲ್ಯ ತನಯನ ಪ ತಾಮಸ ದೈತ್ಯರ ಲೀಲೆಯಲಿ ಕೊಂದು ಭೂಮಿ ಭಾರವನಿಳುಹಿದ ನಿಸ್ಸೀಮನಅ.ಪ. ತಾಟಕಾದಿಗಳ ಘೋರಾಟವಿಯಲಿ ಪಾಟುಪಡಿಸಿದ ಹಾಟಕಾಂಬರನ ತೋಟಿಗೊದಗಿದ ಮಾರೀಚಾದಿಗಳ ಆಟನಾಡಿಸಿದ ನೀಟುಗಾರ 1 ಹಲವು ಕಾಲದಿ ಶಿಲೆಯಾಗಿರ್ದ ಲಲನೆ ಅಹಲ್ಯೆಯ ಶಾಪವ ಹರಿಸಿ ಕಲುಷವ ಕಳೆಯುತ ಕುಲಸತಿ ಮಾಡಿದ ನಳಿನ ನಯನನ 2 ಹರನ ಧನುವನು ಸ್ಮರನ ಧನುವಿನಂತೆ ತ್ವರದಿ ಮುರಿದು ನಿಂದ ಸುಕುಮಾರನ ಧರಣಿಪ ಜನಕನ ಭಕ್ತಿಗೆ ಒಲಿದು ಧರಣಿಜೆಯ ವರಿಸಿ ಹರುಷವಿತ್ತನ 3 ತಾತನ ಭಾಷೆಯ ಪ್ರೀತಿಯಿಂ ಸಲಿಸೆ ಸೀತೆ ಸಹಿತ ಭ್ರಾತ ಲಕ್ಷ್ಮಣವೆರಸಿ ಆತುರದಿಂದಲಿ ಅರಣ್ಯವನೈದಿ ಕೌತುಕ ತೋರುತ ಚರಿಸಿದವನ4 ಖರದೂಷಣ ತ್ರಿಶಿರಾದಿ ರಕ್ಕಸರ ಅರೆಕ್ಷಣದಲಿ ತರಿದು ಬಿಸುಟವನ ಹಿರಣ್ಯಮೃಗವ ಬೆನ್ನಟ್ಟಿ ಕೆಡಹುತ ವರ ಜಟಾಯು ಶಬರಿಗೆ ಒಲಿದವನ 5 ವಾತಸುತನ ಕಂಡಾತನ ಪದುಳಿಸಿ ತರಣಿ ಸುತಗೆ ಅಭಯವನಿತ್ತ ಜಾತವೇದನೆದುರಲಿ ಸಖ್ಯವ ಮಾಡಿ ಘಾತಕ ವಾಲಿಯ ನಿಗ್ರಹಿಸಿದನ 6 ಕೋತಿ ಕರಡಿಗಳ ಹಿಂಡನು ಕೂಡಿಸಿ ಸೇತುವೆಗಟ್ಟಿಸಿ ಜಲಧಿಯ ದಾಟಿ ಪಾತಕಿ ರಾವಣನÀ ಶಿರಗಳ ಕಡಿದು ಸೀತೆಯ ಸೆರೆಯನು ಬಿಡಿಸಿದಾತನ 7 ಮೊರೆಯನು ಪೊಕ್ಕಾ ವರ ಭೀಷಣನ ಕರುಣದಿ ಕರೆದು ಕರವನು ಪಿಡಿದು ಧರೆಯಿದು ಸ್ಥಿರವಾಗಿರುವ ಪರಿಯಂತ ದೊರೆತನ ಮಾಡೆಂದ್ಹರಸಿದಾತನ 8 ಅಕ್ಕರೆಯಿಂದಲಿ ಅರ್ಚಿಸುವರಿಗೆ ತಕ್ಕಂತೆ ವರಂಗಳ ನೀಡುತಲಿ ಮಿಕ್ಕು ರಾಜಿಸುತಿಹ ಪಂಪಾಪುರದ ಚಕ್ರತೀರ್ಥದಿ ನೆಲೆಸಿಹನ 9 ಕಂತುವೈರಿ ವಿರುಪಾಕ್ಷಗೆ ತಾರಕ ಮಂತ್ರ ನಾಮಕನಾಗಿರುತಿರ್ಪನ ಯಂತ್ರೋದ್ಧಾರನಾಗಿರುವ ಹನುಮನ ಮಂತ್ರಿಯ ಮಾಡಿಕೊಂಡು ರಾಜಿಪನ 10 ದುಷ್ಟ ರಕ್ಕಸ ದಮನವ ಮಾಡಿ ಶಿಷ್ಟ ಜನರುಗಳಿಷ್ಟವ ಸಲಿಸುತ ಶ್ರಿಷ್ಟಿಗೊಡೆಯನೆನಿಸಿ ಮೆರೆಯುತಲಿರುವ ದಿಟ್ಟ ಶ್ರೀ ರಂಗೇಶವಿಠಲನ 11
--------------
ರಂಗೇಶವಿಠಲದಾಸರು