(ಲಾಲಿ ಹಾಡು)
ಲಾಲಿ ರಘುಕುಲವೀರ ರಾಕ್ಷಸಗಣಾರಿ
ಲಾಲಿ ಜಗದೇಕ ಸುಂದರ ಸೇತುಕಾರಿ
ಲಾಲಿ ನಗಚಾಪ ಹೃತ್ಕಮಲ ಸಂಚಾರಿ
ಲಾಲಿ ಸುಗುಣಾಂಬುನಿಧಿ ಸುಜನಾರ್ತಿ ಹಾರಿ ಪ.
ಧರಣಿ ಭಾರವನು ಬೇಗಿಳುಹಬೇಕೆಂದು
ಸುರರು ನಡೆತಂದು
ಸಿರಿವರನೆ ನಿನ್ನ ಪ್ರಾರ್ಥನೆ ಮಾಡಲಂದು
ಧರೆಯೊಳವತರಿಸಿ ರಾಜಿಸಿದೆ ಗುಣಸಿಂಧು 1
ದರಚಕ್ರ ಶೇಷರನು ಸರಿಯಾಗಿ ತನ್ನಾ
ವರಜಪದವೈದುತವತರಿಸಿರಲು ಮುನ್ನ
ಭರತ ಶತ್ರುಘ್ನ ಲಕ್ಷ್ಮಣರೆಂಬರನ್ನ
ಚರಣ ಸೇವಕರೆನಿಸಿ ಪೊರದಿ ಗುಣರನ್ನ 2
ಶ್ರೀ ರಾಮ ಸೀತಾವರಾಶ್ರಿತ ಪ್ರೇಮ
ಮಾರುತಿಗೆ ವಿಧಿಪದವನಿತ್ತ ಗುಣಧಾಮ
ಘೋರ ರಾವಣ ಮುಖ್ಯ ದಿತಿಜ ನರ್ದೂಮ
ಭೂರಮಣ ಶೇಷಗಿರಿವರ ಪೂರ್ಣಕಾಮ 3