ಇಂಥ ಜನಗಳಿಗೆ ಎಂಥಾದ್ದು ಹರಿಕಥೆ
ಕುಂತಿಮಕ್ಕಳಿಗಾಯ್ತು ಕಾಂತಾರವಾಸ ಪ.
ಸ್ವಂತ ಧರ್ಮವ ಬಿಟ್ಟು ಆಂತನ್ಯಧರ್ಮವ
ಸಂತಾಪಕ್ಕೊಳಗಾಗಿ ಭ್ರಾಂತಿಪಟ್ಟಿಹರು 1
ಜೀವಿಸಿ ಮೃಗದಂತೆ ಸಾವನು ಬಗೆಯದೆ
ಕೇವಲ ತಾಮಸ ಯಾವಜ್ಜೀವನವು 2
ಸರಕಾರದ ಭಯ ಸರ್ವರಿಗಿದ್ದರು
ಸರಿಯಾಗಿ ನಡೆಯದೆ ಬರಿದೆ ಬಳಲುವರು 3
ಬಡವರ ಬಾಯನು ಹೊಡೆದು ತಂದು ತನ್ನ
ಮಡದಿಮಕ್ಕಳಿಗುಣಬಡಿಸಿ ಮೆರೆವರೈ 4
ಲಕ್ಷ್ಮೀನಾರಾಯಣನ ಲಕ್ಷಣಾಂಕಿತರನ್ನು
ಲಕ್ಷ್ಯಕ್ಕೆ ತಾರದ ಕುಕ್ಷಿಂಭರರು 5