ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕೋಲ ಹಾಡು) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀ ರಾಮನ ಬಲಗೊಂಬೆ ರನ್ನದ ಪ. ಭೂಮಿಯೊಳಗೆ ಸೀತಾರಾಮನು ಜನಿಸಲು ಸೀಮೆಯ ನಾರಿ ಜನರೆಲ್ಲ ರನ್ನದಾ ಸೀಮೆಯ ನಾರಿ ಜನರೆಲ್ಲ ನೆರೆದು ಸು ಪ್ರೇಮದಿ ಪಾಡಿ ನಲಿದರು ರನ್ನದಾ 1 ಕುಂಡಲ ಕಂಠ ಮಾಲೆಯ ನೊಸಲಾ ತಿಲಕವು ರನ್ನದ ಮಾಲೆಯ ತಿಲಕನೊಸಲೊಳಗಿರಿಸಿದ ಬಾಲೇರು ಕೂಡಿ ನಲಿವುದ ರನ್ನದ 2 ಸಾರಸಂಭವ ಕ್ಷೀರ ವಾರುಧಿ ತಡಿಯಲ್ಲಿ ಭೋರನೆ ಬಂದು ಸ್ತುತಿಸಲು ರನ್ನದ ಭೋರನೆ ಬಂದು ಸ್ತುತಿಸಲು ರಾಮವ ತಾರನಾಗುವೆನೆಂದು ನುಡಿದನು ರನ್ನದ 3 ಪೃಥಿವಿ ನಾಯಕ ದಶರಥನಲ್ಲಿ ಜನಿಸಿದ ಕಥನೀಯ ಸುಗುಣ ಸಂಭೃತ ರಾಮರನ್ನದ ಕಥನೀಯ ಸುಗುಣ ಸಂಭೃತ ರಾಮ ಕೌಸಲ್ಯ ಸುತನೆಂದು ನಗುತ ಮನ್ಮಥನ ಜನಕನಿಗೆ 4 ಕೌಶಿಕ ಮುನಿಯ ಮಹಾಶೆ ಪೂರಿಸಿ ಯಜ್ಞ ಘಾಸಿ ಮಾಡಿದ ರಾಮ ಘಾಸಿ ಮಾಡಿದ ಜಗ ದೀಶನು ಸಕಲಾಭಿಲಾಷಾ ಪೂರಿಪೆನೆಂದು 5 ಪಾದ ಪಲ್ಲವವಿರಿಸುತ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ರಾಮ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ಸಿರಿ ನಲ್ಲ ಶಿವನ ಮಹ ಬಿಲ್ಲ ಮುರಿದನು 6 ಭೂತಳಾಧಿಪಜನವ್ರಾತಮಂಡಲದೊಳು ಸೀತೆಯನೊಲಿಸಿ ಶುಭದಿಂದ ರನ್ನದಾ ಸೀತೆಯನೊಲಿಸಿ ಶುಭದಿಂದ ಸ್ವಜನ ಸ- ಮೇತಾಯೋಧ್ಯಗೆ ಬಂದ ಖ್ಯಾತ ರಾಘವನಿಗೆ 7 ಜನಕನ ವಾಕ್ಯದಿಂದ ಜನಕಾತ್ಮಜೆಯ ಕೂಡಿ ವನಕಾಗಿ ನಡೆತಂದ ವನಜಾಕ್ಷ ರನ್ನದಾ ವನಕಾಗಿ ನಡೆ ತಂದ ವನಜಾಕ್ಷನಲ್ಲಿ ಶೂ- ರ್ಪನಖಿಯ ಮಾನಭಂಗವನು ಗೈದ ರನ್ನದಾ 8 ಖರದೂಷಣಾದಿ ದೈತ್ಯರ ಕೊಂದು ಮಾರೀಚ ದುರುಳನ ಸದೆದಾ ಧುರಧೀರ ರನ್ನದ ದುರುಳನ ಸದೆದಾ ಧುರಧೀರ ಶ್ರೀ ರಾಮ ಪರಿಪಾಲಿಸೆಮ್ಮನು ಕರುಣಾಳು ರನ್ನದ 9 ಪಾತಕಿ ದಶಕಂಠ ಸೀತೆಯನೊಯ್ದನೆಂದು ಕಾತರಗೊಂಡಂತೆ ಜನಕೆಲ್ಲ ರನ್ನದಾ ಕಾತರಗೊಂಡಂತೆ ಜನಕೆಲ್ಲ ತೋರ್ದ ರಘು ನಾಥನ ಮೊಖಲೀಲೆ ಖ್ಯಾತಿಯ ಪೊಗಳುತ10 ಮಂದರಾವಣ ಮೋಸದಿಂದ ಕೆಡಹಿದಂಥ ತಂದೆಯ ಸಖನಿಗಾನಂದ ಪದವನಿತ್ತ ತಂದೆಯ ಸಖನಿಗಾನಂದವ ಸಲಿಸಿ ಕ- ಬಂಧನ ದೈತ್ಯಯೋನಿ ಇಂದ ಬಿಡಿಸಿದಗೆ 11 ಬೇಡತಿ ಶಬರಿಯನ್ನು ನೋಡಿ ರಕ್ಷಣೆ ಮಾಡಿ ಪ್ರೌಢ ಮಾರುತಿಯಿಂದ ಕೂಡಿದ ರನ್ನದಾ ಪ್ರೌಢ ಮಾರುತಿಯನ್ನು ಕೂಡಿ ರವಿಜನ ಕಾ ಪಾಡಿ ವಾಲಿಯ ವಧೆ ಮಾಡಿದ ರನ್ನದಾ 12 ಪ್ರಾಣಾತ್ಮಜನು ನಾಗವೇಣಿಯ ವಾರ್ತೆಯ ತಾರೆ ಜಾಣತನದಲಿದ ಕ್ಷೀಣಾಂಬುಧಿಯೊಳಂದು ಜಾಣತನದಲಿದ ಕ್ಷೀಣಾಂಬುಧಿಯೊಳು- ಪ್ರ ವೀಣತನದಿ ಸೇತು ಕಾಣಿಸಿದವನಿಗೆ 13 ದೋಷಿ ರಾವಣನನು ನಾಶಗೈದಸುರಾರಿ ನೀಶ ನೀನೆನುತ ವಿಭೀಷಣಗೊರವಿತ್ತಾ ಈಶ ನೀನೆನುತಲಿವಿಭೀಷಣಗೊರವಿತ್ತ ವೈರಿ ಜಗದೀಶ ರಾಮನಿಗೆ 14 ಸೃಷ್ಟಿಜಾತೆಯ ಕೂಡಿ ಪಟ್ಟಾಭಿಷೇಕಗೊಂಡು ಶಿಷ್ಟ ರಕ್ಷಕನಾದ ಸಿರಿನಾಥ ರನ್ನದಾ ಶಿಷ್ಟ ರಕ್ಷಕನಾದ ಸಿರಿನಾಥ ವೆಂಕಟ ಬೆಟ್ಟದೊಡೆಯ ನಮ್ಮಭೀಷ್ಟವ ಕೊಡುವನ 15
--------------
ತುಪಾಕಿ ವೆಂಕಟರಮಣಾಚಾರ್ಯ
ಲಾಲಿಸಿ ರಘುವರನ ಚರಿತೆಯ ಸಾರ ಪೇಳುವೆ ಸುಖನಾಥನ ಪ ಶ್ರೀ ಲಲಾಮನು ಸುರರ ಮೊರೆಯನು ಭಾರ ಹರಿಸಲು ಲೀಲೆಯಲು ದಶರಥ ನೃಪಾಲನ ಬಾಲನೆನಿಸುತ ಅವತರಿಸಿದನು ಅ.ಪ. ಕುಶಿಸುತನ ಯಜ್ಞವ ರಕ್ಷಿಸಿ ಪಥದಿ ಋಷಿ ಪತ್ನಿಯ ಶಿಲಾರೂಪವ ಬಿಡಿಸಿದ ದೇವ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯ ಕರವನು ಕುಶಲದಲಿ ಪರಿಗ್ರಹಿಸಿ ಲೀಲೆಯ ನಸಮ ಭಾರ್ಗವನೊಡನೆ ತೋರಿದ 1 ತಂದೆ ವಾಕ್ಯವ ಪಾಲಿಸೆ ತಾ ಧರಣಿಗೆ ಬಂದ ಕಾರ್ಯವ ಸಲ್ಲಿಸೆ ಋಷಿಗಳಾಸೆ ತಂದು ತಾ ಮನಕಂಡು ವನಕೆ ಸತಿ ಸೋದರರ ಸಹಿತದಿ ಮುಂದೆ ಗಂಗೆಯ ದಾಟಿ ಭರದ್ವಾಜ ನಿಂದ ಸತ್ಕಾರವನು ಕೊಂಡನು2 ಚಿತ್ರಕೂಟದಲಿರಲು ವಿನಯದಿ ಬಂದು ಭಕ್ತ ಭರತನು ಬೇಡಲು ಪಾದುಕೆಯಿತು ಮತ್ತೆ ದಂಡಕವನ ಪ್ರವೇಶಿಸಿ ದೈತ್ಯರನು ಸಂಹರಿಸಿ ಶರಭಂಗ ಗಿತ್ತು ಮುಕ್ತಿಯ ಕುಂಭಸಂಭವ ನಿತ್ತ ದಿವ್ಯಾಸ್ತ್ರಗಳ ಪಡೆದನು 3 ವರಪಂಚವಟಿಯೊಳಗೆ ಶೂರ್ಪನಖಿಯು ದುರುಳ ಬುದ್ಧಿಯೊಳು ಬರೆ ಕಿವಿಮೂಗ ಕೊಯ್ಸಿ ಹರಿಣರೂಪದಿ ಬಂದ ದೈತ್ಯನ ಹರಣಗೈದಾಶ್ರಮಕೆ ತಿರುಗಲು | ಧರಣಿಸುತೆಯನು ಕಾಣದೆಲೆ ತಾ ನರರ ಪರಿಯಲಿ ಹಂಬಲಿಸಿದನು 4 ವನಜಾಕ್ಷಿ ವೈದೇಹಿಯ ಪುಡುಕುತ ಪಂಪಾ ಸನಿಹಕ್ಕೈತಂದು ವಾಲಿಯ ಸಂಹರಿಸ್ಯವನ ಅನುಜ ಸುಗ್ರೀವನಿಗೆ ಹರುಷದಿ ವಿನುತ ವಾನರ ರಾಜ್ಯದೊಡೆತನ ವನು ಕರುಣಿಸಿದ ಬಳಿಕ ಜಾನಕಿ ಯನು ಪುಡುಕೆ ಕಳುಹಿದನು ಕಪಿಗಳ 5 ಸ್ವಾಮಿಯ ಸ್ತುತಿಗೈಯುತ ಶ್ರೀ ಹನುಮಂತ ಆ ಮಹೋದದಿಯ ದಾಟುತ ಲಂಕೆಯ ಪೊಕ್ಕು ಭೂಮಿಜಾತೆಯ ಕಂಡು ರಾಮನ ಕ್ಷೇಮ ವಾರ್ತೆಯ ತಿಳುಹಿ ಬಹುಜನ ತಾಮಸರ ಸದೆಬಡಿದು ರಾವಣ ನಾ ಮಹಾ ನಗರಿಯನು ದಹಿಸಿದ 6 ಮರಳಿ ರಾಮನ ಬಳಿಗೆ ಬೇಗದಿ ಬಂದು ಮರುತ ಸುತನು ರಾಮಗೆ ಸೀತೆಯ ಕ್ಷೇಮ ವರುಹಿ ಚೂಡಾಮಣಿಯ ನೀಡಲು ಕರದಿ ಕೈಕೊಂಡದನು ನೋಡುತ ನರರ ಪರಿಯಲಿ ಹರುಷಬಾಷ್ಪವ ಸುರಿಸಿದನು ಶ್ರೀ ಕರಿಗಿರೀಶನು 7
--------------
ವರಾವಾಣಿರಾಮರಾಯದಾಸರು