ಯಾಕೆ ನಿರ್ದಯವೋ ದೇವ ದೇವ ಸ್ವಭಾವ
ಯಾಕೆ ಮರೆತೆ ದೇವಾ [ಎನ್ನನು] ಪ
ಯಾಕೆಂಬುದರಿಯೆನಾ ಶ್ರೀಕರಾಂಬುಜನೇತ್ರ
ಕಾಕುಮನುಜನೆಂದು ನೀಕರಿಸಿದೆಯೋ ಅ.ಪ
ಉದರ ಪೋಷಣೆಗಾಗಿ ವಿಧ ವಿಧ ದೇಶದಿ
ಬಧಿರ ಹೆಳವ ಮೂಗ ಅಧಿಕರೋಗಿಯು ಅಂಧಾ
ವಿದಿತ ವೇಷಗಳಿಂದ ಅಧಿಕ ಬಳಲಿದೆನಯ್ಯ
ಪದುಮಾಕ್ಷ ಪರಂಧಾಮ ಮುದದೆ ಪೋಷಿಸಲು1
ಪರರ ನಿಂದನೆ ಗೈದೆ ನೆರೆಯವರನು ಕೊಂದೆ
ಪರರ ಸ್ವತ್ತನು ತಂದೆ ಪರರನ್ನವನು ತಿಂದೆ
ದುರಿತಕಾರ್ಯವಗೈದೆ ನರಹರಿ ನಿನ್ನ ಮರೆದೆ
ಪರರು ಕಾವವರಿಲ್ಲ ನೆರೆನಂಬಿದೇ ನಿನ್ನ 2
ಸಾವು ಜನ್ಮಂಗಳಿಂದ ನೋವು ಬಂಧನವಡೆದು
ಬೇವಿನಂದದೆ ದುರ್ಗುಣಭಾವವ ತಳೆದೆನೋ
ಕಾವರಿಲ್ಲವೋಯೆನ್ನ ಶ್ರೀವನಿತಾರನ್ನ
ಸಾವುನೋವನು ಬಿಡಿಸೊ ಮಾವಿನಕೆರೆರಂಗ 3