ಬೇಡಿಕೆಗೆ ಮಿತಿಯಿಲ್ಲ ಬೇಡಿಕೆಗೆ ಕೊನೆಯಿಲ್ಲ
ಬೇಡಿ ಬದುಕುವುದೊಂದು ರೋಗವಯ್ಯ ಪ
ರೂಢಿಗೊಡೆಯನ ದಿವ್ಯನಾಮಗಳ ಕೊಂಡಾಡಿ
ಹಾಡುವವಗೆ ರೋಗಭಯವಿಲ್ಲವಯ್ಯಾ ಅ.ಪ
ಬೇಡುವವ ಮನೆಮನೆಗೆ ಓಡೋಡಿ ನಿಲಬೇಕು
ನಾಡಿಗರ ನೋಡಿ ಕೈ ನೀಡಬೇಕು
ನೋಡಿದರೆ ಕಟ್ಟಾಳು ಬೇಡುವೆ ಹೋಗತ್ತ ದುಡಿ
ಗೇಡಿ ಎಂದಾಗ ಗೋಳಾಡಲೇಕಯ್ಯ 1
ಕಂಡ ಕಂಡವರಿಗೆಲ್ಲ ಕೈಮುಗಿದು ಮಂಡೆಯ ಬಾಗಿ
ಭಂಡನೆಂದೆನಿಸುವುದು ಮಾನಭಂಗ
ಪುಂಡರೀಕಾಕ್ಷ ಗೋವಿಂದ ನಾಮವ ಹಾಡಿ
ಕೊಂಡಾಡಲೊದಗುವನು ಮಾಂಗಿರಿಯರಂಗ2