ಒಟ್ಟು 155 ಕಡೆಗಳಲ್ಲಿ , 50 ದಾಸರು , 148 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೂಢನಾದ ಯೋಗಿಯ ಬಗೆಯಿದು | ಈ | ರೂಢಿಯೊಳು ಜನಕಿನ್ನು ಕಾಣಿಸದು ಪ ಮಾತುಗಳ ಆಡನು | ಮೌನಗಳ ಮಾಡನು | ನೀತಿ ಅನೀತಿಗಳೆಂಬುದ ನೋಡನು | ಯಾತರೊಳು ತನಗೆ ಸಂಪ್ರೀತಿಯೆಂಬುವದಿಲ್ಲ | ದಾತನಾಗಿನ್ನಾತ ಚರಿಸುತಿಹನು 1 ವೇದಗಳ ನೋಡನು ಶಾಸ್ತ್ರಗಳ ಕೇಳನು | ನಾದ ಬಿಂದು ಕಳಾತೀತ ತಾನು | ಸಾಧು ಸಂತರ ಸಂಗದೊಳು ಬೋಧದಲಿ ನಲಿವುತಲಿ | ಆದ್ಯನಾದಿ ತಾನೆಂದು ತಿಳಿದಿಹನು 2 ವಂದಿಸಲು ಹಿಗ್ಗನು | ನಿಂದಿಸಲು ತಗ್ಗನು | ಬಂದದಕೆ ತಾ ಹಿಂದು ಮುಂದಾಗನು | ತಂದೆ ಭವತಾರಕನ ಚರಣಾರವಿಂದವನು | ಹೊಂದಿ ಪೂರ್ಣಾನಂದದೊಳಗಿಹನು 3
--------------
ಭಾವತರಕರು
ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ ಕಾಮಿತಾರ್ಥವನೀವ ಕರುಣಿ ಭೂದೇವಿ ಪ ಹರಿಯ ಪಾದದಲುದಿಸಿ ಹರಿಗೆ ವಧುವೆನಿಸಿ ಹರಿಗೆ ಸುತೆಯನು ಇತ್ತು ಹಿರಿಯಳಾದೆ ಹರಿನಾಮ ಕೀರ್ತನೆಯ ಹೊರೆವ ಧಾರುಣಿ ನಿನ್ನ ಮೊರೆಹೊಕ್ಕೆ ಮರೆಯದಿರು ಕರುಣದೋರೆನಗೆ 1 ಕ್ಷಮೆ ದಮೆಯು ಶಾಂತ ಸದ್ಗುಣವೊಪ್ಪುವಳೆ ನಿನಗೆ ಭ್ರಮೆಬಟ್ಟು ಭೂಭುಜರು ಕಡಿದುಕೊಳುತಿಹರು ಅಮಿತ ಮಹಿಳೆ ನಿನ್ನ ನಿಜವ ಬಲ್ಲವರಾರು ತಮಗೆ ಋಣವಿದ್ದುದನು ಕೊಂಡೊಯ್ವರಲ್ಲದೆ 2 ಚಿನ್ನ ಭಂಡಾರಗಳು ನಿನ್ನೊಡಲೊಳೊಪ್ಪಿದವು ಉನ್ನಂತ ರತುನಗಳು ನಿನ್ನೊಳಡಗಿಹವು ಅನ್ನ ಪಾನಂಗಳಿಗೆ ಬೀಜ ಮೂಲವೆ ನೀನು ನಿನ್ನ ಮರೆತಿಹ ಜನಕೆ ಮುನ್ನ ಸುಖವುಂಟೆ 3 ಒಬ್ಬ ರಾಯನ ಗೆಲುವೆ ಒಬ್ಬ ರಾಯನಿಗೊಲಿವೆ ಒಬ್ಬನಿಗೆ ಮೈಯ ನೀನು ಕೊಡುವೆ ಒಬ್ಬರಾದರು ನಿನ್ನ ನಿಜದಿ ಬಾಳ್ದಪರಿಲ್ಲ ಗರ್ಭಜಾತನ ಹರಿಯ ಕೈಯ ಕೊಲಿಸಿದೆಲಾ 4 ಅಂಬುಧಿಯೆ ವಸನಗಳು ಕುಂಭ ಕುಚಗಳೆ ಗಿರಿಯು ಸಂಭ್ರಮದ ನದಿ ಕಾಲುವೆ ನಿನ್ನ ಬೆವರುಗಳು ಎಂಭತ್ತನಾಲ್ಕು ಲಕ್ಷ ಜೀವರಾಶಿಗಳೆಲ್ಲ ತುಂಬಿಕೊಂಡಿರುತಿಹುದು ಅಂಗೋಪಾಂಗದಲಿ 5 ಮೂಢನಾದೆನು ನಿನ್ನ ಬೇಡಿಕೊಂಬರೆ ಮನದಿ ರೂಢಿ ದೇವತೆಯೆ ಮಾಡು ದಯವನು ನೀನು ಮನದಭೀಷ್ಟವನೆಲ್ಲ ಪಾಡು ಪಂಥವು ಬೇಡ ಪಡೆದ ಮಗನೊಡನೆ 6 ನಂಬಿದೆನು ನಾ ನಿನ್ನ ಕುಂಭಿನಿಯೆ ಕೈವಿಡಿದು ಇಂಬಾದ ಪದವಿಯನು ಸಂಭ್ರಮದಿ ಕೊಡುತ ಬೆಂಬಡದೆ ವರಾಹತಿಮ್ಮಪ್ಪ ಕರುಣದಲಿ ಹಂಬಲಿಪ ತೆರದಿಂದ ಸಲಹುವುದು ಜಗದಿ 7
--------------
ವರಹತಿಮ್ಮಪ್ಪ
(ಅ) ಮಾಡುವುದೋ ಕೃಪೆ ದಾಸನೊಳು ರಾಮ ಮಾಡುವುದೋ ಕೃಪೆ ದಾಸನೊಳು ಪ ನೋಡ ನೋಡುತ ಕೈಯ್ಯ ಬಿಡುವರೆ ಬೇಡ ಬೇಡಿಕೊಂಬೆನು ರೂಢಿಯೊಳು ನಿನ್ನಂಥ ಕರುಣಿಯ ನೊಡಲಿಲ್ಲವೋ ಎಲ್ಲಿಯು ಅ ಬಂದೆನೋ ನಾನಾ ಜನ್ಮದಲೀ | ರಾಮ ನೊಂದೆನೋ ನಾ ಬಹು ಭವಣೆಯಲೀ ದ್ವಂದ್ವ ದುಃಖದಿ ಕಂದಿ ಕುಂದುತ ಮುಂದುಗಾಣದೆ ಕೆಟ್ಟೆನೋ ಕಂದನೆನ್ನುತ ಬಂದು ಪೊರೆ ಪರಮಾತ್ಮ ನಂಬಿದೆ ನಿನ್ನನು 1 ದಾನ ಧರ್ಮಗಳ ನಾನರಿಯೆ | ರಾಮ ಮೌನ ಮಂತ್ರಗಳ ನಾನರಿಯೆ ಧ್ಯಾನ ಧಾರಣ ಜ್ಞಾನಸಾಧನವೇನೊಂದನು ಅರಿಯೆ ಹಾನಿಯಿದ ನಾನೇನನೊರೆಯಲಿ ಮಾನನಿಧಿ ನಿನ್ನವನು ನಾ 2 ಕಾಮಿನಿ ಕಾಂಚನ ಭೂಮಿಗಳ | ರಾಮ ಕಾಮಕೆÉ ಸಿಕ್ಕಿದೆನೋ ಬಹಳ ನೇಮ ನಿಷ್ಠೆಗಳೇನೂ ಇಲ್ಲದೇ ತಾಪದಿ ನಾ ಕೆಟ್ಟೆನೋ ನಾಮಸುಧೆಯ ಪಾನ ಕರುಣಿಸು ಪ್ರೇಮದಲಿ ಶ್ರೀಕಾಂತನೇ 3
--------------
ಲಕ್ಷ್ಮೀನಾರಯಣರಾಯರು
(ಅನಂತೇಶ್ವರ ದೇವರನ್ನು ನೆನೆದು) ಯಾಕಿಲ್ಲಿ ಬಂದು ಮಲಗಿದೆಯೊ ಎಲಾ ಹರಿಯೇ ಲೋಕೋತ್ತಮಾನಂತೇಶ್ವರ ದೇವಾಲಯದಿ ಪ. ಬಿಡದೆ ಪಾಲ್ಗಡಲೊಳಗೆ ಕಡು ವೈಭವದಿ ತಡಿಗೆ ಝಡಿದು ಬರುತಿಹುದು ಭೋರ್ಗುಡಿಪ ತೆರೆಯ ಝಡಿವ ನಾದಕೆ ಒಡಂಬಡದೇಕಾಂತದಿ ಬಂದು ಮಡದಿ ಶ್ರೀದೇವಿ ಸಹಿತೊಡನೆ ಮಲಗಿದೆಯೋ 1 ನೀರೊಳಗೆ ಮುಳುಗಿ ವೇದವÀ ತಂದು ಬೆನ್ನಿನೊಳು ಭಾರವನು ಪೊತ್ತು ಬಹಳಾಲಸ್ಯವೋ ಧಾರುಣಿಯ ಸಲಹೆ ಭೋರ್ಗುಡಿಸಿ ಸ್ತಂಭದಿ ಬಂದ ಕ್ರೂರತನಕಿದುವೆ ವಿಸ್ತಾರ ಸಮಾಧಾನತೆಯೋ 2 ರೂಢಿಗೊಡೆಯ ತಾನಾಗಿ ಮೋಡಿಯೊಳು ಭೂದಾನ- ಬೇಡಿದೆನು ಎಂಬ ನಾಚಿಕೆಯ ಮನವೋ ಖೋಡಿ ನೃಪತಿಯರ ಹೋಗಾಡಿಸುತ ಕಾಡಿನೊಳು ಕೋಡಗರ ಕೂಡಿ ರಥ ಓಡಿಸಿದ ಬೇಸರವೋ 3 ಲೋಲಾಕ್ಷಿಯರ ವ್ರತವ ಹಾಳುಮಾಡುತ ಕಲಿಯ ಕಾಲದೊಳು ಗೈವಂತಮೇಲುಕಾರಿಯದ ಕಾಲೋಚಿತವ ಮನದೊಳಾಲೋಚಿಸುತ್ತಹಿಯ ಮೇಲೆ ಪವಡಿಸಿ ನಿದ್ರಾಲೋಲನಾಗಿಹೆಯೋ 4 ಯುಗಯುಗದೊಳವತಿರಿಸ ಜಗದ ಭಾರವನಿಳುಹಿ ಬಗೆಬಗೆಯ ನಾಟಕದಿ ಮಿಗೆ ಪಟ್ಟ ಶ್ರಮವ ತೆಗೆಯಲೋಸುಗ ಚರಣಯುಗವ ಮೃದುಕರದಿ ಶ್ರೀ ಸೊಗಸಿನಿಂದೊತ್ತುವ ಸೊಂಪೊಗರಿತೋ ನಿನಗೆ 5 ಲಲಿತ ವೈಕುಂಠದೊಳಗೆ ಜಲಜಭವಮುಖ್ಯಸುರ- ಗಲಭೆಯುಂಟೆಂದಲ್ಲಿ ನಿ¯ದೆ ಈಗ ಲಲನೆಯಳ ಕೂಡೆ ಸರಸಗಳನಾಡಲು ತನಗೆ ಸ್ಥಳವಿಲ್ಲವೆನುತಿಲ್ಲಿ ನೆಲಸಿಕೊಂಡಿಹೆಯೋ 6 ಸೇರಿರ್ದ ಶರಣ ಸಂಸಾರಿ ನೀನೆಂದು ಶ್ರುತಿ ಸಾರುವುದು ಕರುಣವನು ತೋರೆನ್ನ ದೊರೆಯೇ ದಾರಿದ್ರ್ಯದೋಷವಪಹಾರಿಸುತ ಇಷ್ಟಾರ್ಥ- ಸೇರಿಸೈ ಶ್ರೀ ಲಕ್ಷ್ಮೀನಾರಾಯಣನೆ ಹರಿಯೇ 7
--------------
ತುಪಾಕಿ ವೆಂಕಟರಮಣಾಚಾರ್ಯ
(ಆ). ವಿವಿಧ ದೇವತಾ ಸ್ತುತಿ ರುದ್ರದೇವರು ಬೇಡಿಕೊಂಬೆನು ನಾನು ರೂಢಿಗೊಡೆಯನಾಗಿ ಆಡುವನಂತೇಶನಿದಿರೊಳು ಮೂಡಿದ ಚಂದ್ರಶೇಖರನ ಪ ಒಪ್ಪುವ ಶಿರದೊಳಗೆ ಸರ್ಪನ ಮೇಲೊರಗಿಪ್ಪನ ಮಗಳನ್ನು ಒಪ್ಪದಿ ಧರಿಸಿದನ 1 ಮುಪ್ಪುರಹರನೆಂದು ಮೂರು ದೃಷ್ಟಿಗಳುಳ್ಳ ಕಪ್ಪುಕೊರಳ ದೇವನ ರೌಪ್ಯದ ಪುರವರಧೀಶನೆಂದೆನಿಸಿಯೆ ಇಪ್ಪಂಥ ಪರಶಿವನ 2 ಗಿರಿಯ ನಂದನೆಯನ್ನು ಉರದೊಳು ಧರಿಸಿಯೆ ಕರಿಚರ್ಮ ಪೊದ್ದವನ ಗರುಡನ ಭಯಕಂಜಿ ಮೊರೆಹೊಕ್ಕ ಶರಣನ ಕರುಣದಿ ಕಾಯ್ದವನ 3 ಉರಗಾಭರಣವ ಸುತ್ತಿಕೊಂಡಿರುವಂಥ ಗರುವ ದೇವರ ದೇವನ ಚರಣ ಸೇವಕರನ್ನು ಸ್ಥಿರವಾಗಿ ಸಲುಹುವ ಬಿರುದುಳ್ಳ ಪರಶಿವನ 4 ದ್ವಾರಕಿವಾಸನಾಚಾರ್ಯನ ಮುಖದಿಂದ ಸೇರಿಸಿಕೊಂಡವನ ಧಾರುಣಿ ಸುರರಿಗೆ ಶೈವ ವೈಷ್ಣವವೆಂಬ ಚಾರವ ತೋರಿದನ 5 ಮೀರಿದ ದಾರಿದ್ರ್ಯವೆಂಬ ವೃಕ್ಷದ ಬೇರ ಹಾರಿಸಿ ತರಿದವನ ಸಾರಿದ ಭಕ್ತರ ಸಲುಹುತ್ತ ಮುಂದಣ ದಾರಿಯ ತೋರ್ಪವನ 6 ಬತ್ತೀಸ ಗ್ರಾಮಕ್ಕೆ ಕರ್ತನೆಂದೆನಿಸಿಯೆ ಅರ್ತಿಯಿಂ ನಲಿವವನ ಪಾರ್ಥಸಂಗರದೊಳು ಮೆಚ್ಚಿಯೆ ಶರವಿತ್ತು ಕೀರ್ತಿಯ ಪೊತ್ತವನ 7 ಸ್ಮಾರ್ತರ ನಿಂದಿಸಿ ರಚಿಸುವ ಯಾಗಕ್ಕೆ ಮೃತ್ಯುವನೊಟ್ಟಿದನ ಮೃತ್ಯುಂಜಯನೆಂದು ಮೊರೆಹೊಕ್ಕ ನರರ ಕಾ- ಯುತ್ತಲಿರ್ಪವನ 8 ಕೊಡಲಿಯ ಪಿಡಿದವ ಪಡೆದಿಹ ಕ್ಷೇತ್ರದಿ ಉಡುಪಿನ ಸ್ಥಳವೆಂಬುದು ಪಡುವಲು ಮೂಡಲು ಎರಡಾಗಿ ತೋರುವ ಒಡಲೊಂದೆ ಮೃಡನೊಬ್ಬನೆ 9 ಕಡಗೋಲ ಪಿಡಿದಿಹ ಕೃಷ್ಣ ನಿಂತದರಿಂದ ಪೊಡವಿಯುತ್ತಮವಾದುದು ಬಡವರ ಬಡತನ ಉಡು (ಪಿಯ)1 ಕಾಣಲು ಸಡಲಿತು ಸುಲಭದಲಿ 10 ಚಿಂತೆಗಳೆನ್ನನು ಭ್ರಾಂತಿ(ಬ)2 ಡಿಸುತಿದೆ ಅಂತಕಾಂತಕ ಲಾಲಿಸು ಪಂಥವ ಮಾಡದೆ ಏಕಾಂತ ಭಕ್ತರಿಗೆಲ್ಲ ಸಂತೋಷವನು ಪಾಲಿಸು 11 ಪಿಂತೆನ್ನ ಕೃತ್ಯ ಬೆನ್ನಾಂತು ಬಂದರು ಇಭ- ವಾಂತದಿ ನೀ ಹಾರಿಸು ಸಂತತ ಎನ್ನನು ಸಲಹಯ್ಯ ಪಾರ್ವತೀ ಕಾಂತನೆ ಕಡೆ ಸೇರಿಸು 12 ಹರ ಹರ ಮಹಾದೇವ ಪರದೈವ ಶಂಕರ ಮೆರೆವ ಆ ವೃಷಭಧ್ವಜ ವರದ ಕೃತ್ತೀವಾಸ ಸ್ಮರನಾಶ ದೇವೇಶ ಸಿರಿಕಂಠ ಪುರಹರನೆ 13 ಗಿರಿಯ ಮಗಳ ಗಂಡ ಉರಿಗಣ್ಣ ಮಹಾರುದ್ರ ಸ್ಥಿರವಾದ ಶಿವಬೆಳ್ಳಿಯ ಪುರಪತಿ ಅನಂತೇಶ ವರಾಹತಿಮ್ಮಪ್ಪನ ಸರಿಯೆಂದು ತೋರ್ಪವನ14
--------------
ವರಹತಿಮ್ಮಪ್ಪ
(ಉಂಗುರ ಕಳೆದಾಗ ಮಾಡಿದ ಪ್ರಾರ್ಥನೆ) ಬೇಡಿಕೊ ಮೂಢಾ ಬೇಡಿಕೊ ಬೇಡಿಕೊ ಭಕ್ತವತ್ಸಲನಲ್ಲಿ ಭಕ್ತಿ ಮಾಡು ಪೂಜೆಯನು ಯಥಾಮತಿ ಶಕ್ತಿ ದೂಡುತ್ತ ದುರುಳರ ಕುಚಿತ್ತಯುಕ್ತಿ ರೂಢಿವಳಗೆ ಸಂಗ್ರಹಿಸು ವಿರಕ್ತಿ ಪ. ಲಾಭಾಲಾಭ ಜಯಾಪಜಂiÀiಗಳು ಸ್ವಾಭಾÀವಿಕವಾಗಿ ಬಹ ಹಗಲಿರುಳು ನಾ ಭಾಗಿ ವರದನ ಪದ ಪದ್ಮ ನೆರಳು ನೀ ಭಜಿಸಿದ ಮೇಲೆ ಬಾಯೊಳು ಬೆರಳು 1 ಯತ್ನವಿಲ್ಲದೆ ಬಹ ನಷ್ಟಗಳಂತೆ ರತ್ನ ಭಂಗಾರ ಸಿಕ್ಕುವುದ್ಯಾಕೆ ಚಿಂತೆ ನೂತ್ನವಾದ ಮೋಹವನು ಬಿಡು ಭ್ರಾಂತೆ ರತ್ನಗರ್ಭವ ನಂಬಿರುವುದೆ ನಿಶ್ಚಿಂತೆ 2 ಅರಿ ಮಿತ್ರೋದಾಸೀನರಿಲ್ಲವು ಹರಿಗೆ ಸರಿಯಾಗಿ ನಡೆಸುವ ಸರ್ವ ಜೀವರಿಗೆ ಪರ ವಸ್ತು ನೀನೆಂದು ಸೇವೆ ಮಾಳ್ಪರಿಗೆ ಸುರ ವೃಕ್ಷದಂತೆ ಕಾರಣವಾಹ ಸಿರಿಗೆ 3 ಋಣವಿಲ್ಲದೆ ವಸ್ತು ಕ್ಷಣವಾದರಿರದು ಉಣುವ ಭೋಗಗಳೆಂದು ತಪ್ಪವು ನೆರದು ಅಣು ಮಹತ್ತುಗಳಂತರಾತ್ಮನ ಬಿರುದು ಗಣನೆ ಮಾಳ್ಪರ ಕೂಡಿ ನೆನೆ ಮನವರಿದು 4 ಆಶಾ ಪಾಶದಿ ಸಿಕ್ಕಿ ಕೆಡದಿರು ವ್ಯರ್ಥ ಶ್ರೀಶನ ನೆನೆವುದೆ ಸಕಲ ವೇದಾರ್ಥ ಶೇಷಗಿರೀಶನು ಸತ್ಪುರುಷಾರ್ಥ ದಾಸಗೆ ತಾನಾಗಿ ಕೊಡಲು ಸಮರ್ಥ5
--------------
ತುಪಾಕಿ ವೆಂಕಟರಮಣಾಚಾರ್ಯ
(ಬಪ್ಪನಾಡಿನ ಪಂಚದುರ್ಗೆ) ಮಂಗಲಂ ಶ್ರೀಪಂಚದುರ್ಗೆಗೆ ಜಯ ಮಂಗಲಾರತಿಯೆತ್ತಿ ಶ್ರೀಮಹೇಶ್ವರಿಗೆಪ. ಶಂಕರನಂಕಾಲಂಕಾರಿಗೆ ಕುಂಕುಮಬೊಟ್ಟಕಸ್ತೂರಿ ಲಲಾಟೆಗೆ ಪಂಕಜಗಂಧಿ ಶ್ರೀಪಾರ್ವತಿಗೆ1 ಕೋಕಿಲಗಾನೆಗೆ ಕೋಕಪಯೋಜೆಗೆ ಶ್ರೀಕಂಠನರ್ಧಾಂಗಿ ಶ್ರೀಗೌರಿಗೆ ಏಕದಂತನ ಜನನಿಗೆ ಜಗದಂಬೆಗೆ ಲೋಕನಾಯಕಿ ಶ್ರೀಮಹಾಕಾಳಿಗೆ2 ಕಂಜದಳಾಕ್ಷಿಗೆ ಕಲಧೌತಗಾತ್ರೆಗೆ ಕುಂಜರಗಮನೆ ಕಂಧರಜಾತೆಗೆ ಮಂಜೀರನೂಪುರರಣಿತಪದಾಬ್ಜೆಗೆ ನಂಜುಂಡನ ಮನಮಂಜುಳೆಗೆ3 ಅಂಗಜರೂಪೆಗೆ ಮಂಗಲದಾತೆಗೆ ಭೃಂಗಕುಂತಳೆ ಸರ್ವಮಂಗಲೆಗೆ ಬಂಗಾರಮಕುಟೋತ್ತಮಾಂಗದಿ ಧರಿಸಿದ ಸಂಗೀತಲೋಲೆಗೆ ಶರ್ವಾಣಿಗೆ4 ರೂಢಿಗಧಿಕ ಬಪ್ಪನಾಡಿಗೊಡತಿಯಾಗಿ ಮೂಡಿತೋರಿದ ಶ್ರೀಮುಕಾಂಬಿಕೆಗೆ ಕ್ರೋಡಾವತಾರ ಲಕ್ಷ್ಮೀನಾರಾಯಣ ಸೊಸೆ ಬೇಡಿದಿಷ್ಟವನೀವ ಸರ್ವೇಶೆಗೆ5
--------------
ತುಪಾಕಿ ವೆಂಕಟರಮಣಾಚಾರ್ಯ
(ಮದ್ರಾಸಿನ ತಿರ್ವಳಕೇಣಿ ಪಾರ್ಥಸಾರಥಿ) ಏನು ಮಾಡಲಿನ್ನು ನೀನಲ್ಲದೆ ಯಾದಾರ ಬೇಡಲಿನ್ನು ಪ. ಮಾನಿನಿ ದ್ರೌಪದಿ ಮೊರೆಯಿಡುವುದ ಕೇಳಿ ಸಾರಥಿ ದೇವ ಅ.ಪ. ನೀನಿತ್ತ ಸೌಭಾಗ್ಯದ ಗರ್ವದಿ ಎನ್ನ ಧ್ಯಾನಾದಿಗಳ ಮಾಡದೆ ನಾನಾ ವಿಧದ ದುರ್ಮಾನುವಾದುದರಿಂದ ನೀನೆ ಸದ್ಗತಿಯೆಂದು ಧ್ಯಾನಿಸಿಲ್ಲಿಗೆ ಬಂದೆ 1 ಬಡತನದಿಂದಿರಲು ಸಕಲ ಸುರ- ರೊಡೆಯ ನೀ ಕೈ ಪಿಡಿದು ರೂಢಿ ಮದದಿ ನಿನ್ನನು ಬಿಟ್ಟು ಕಡೆಗೆ ನಿನ್ನಯ ಪಾದದೆಡೆಗೆ ಬಂದೆನು ದೇವ 2 ಪಶ್ಚಿಮ ವಾರಿಧಿಯ ತೀರದಲಾದ ದುಶ್ಚರಿತ್ರೆಯ ತಾಳದೆ ಆಶ್ಚರ್ಯತಮವಾದ ಸಚ್ಚರಿತ್ರನೆ ನಿನ್ನ ನೆಚ್ಚಿ ಬಂದಿಹೆನೊ ವಿಪಶ್ಚಿತರೊಡೆಯನೆ 3 ನಕ್ಷತ್ರಗಳಂದಿಂದಲು ಯೆನ್ನಪರಾಧ- ವಕ್ಷಯವಾಗಿರಲು ಅಕ್ಷರಿ ವಂದ್ಯ ನೀ ಲಕ್ಷ ಬಿಡುವುದೆ ಕ- ಟಾಕ್ಷದಿಂದಲಿ ನೋಡಿ ರಕ್ಷಿಸು ಕರುಣದಿ 4 ಎಷ್ಟು ಕರ್ಮಿಯಾದರು ನಿನ್ನಲಿ ಮನ- ವಿಟ್ಟು ಬಂದಿರುವೆನಲ್ಲ ದುಷ್ಟಮರ್ದನ ಶಿಷ್ಟರಕ್ಷಣ ಭಾಜಕ ಜ- ನೇಷ್ಟದಾಯಕ ಸೃಷ್ಟ್ಯಾದೃಷ್ಟಕರ್ತ 5 ನಟನ ಮಾಡುವ ಬೊಂಬೆಯ ಪೋಲುವ ಯೆನ್ನ ಹಟದಿಂದ ದಣಿಸುವುದೆ ವಟಪತ್ರ ಶಾಯಿ ಧೂರ್ಜಟಿ ವಂದ್ಯ ಅಂಜಲಿ ಪುಟನಾಗಿ ಬೇಡುವೆ ಘಟಿಸೊಭಿಲಷಿತವ 6 ಎಂದಿಗಾದರು ನಿನ್ನಯ ಪಾದಯುಗಾರ- ವಿಂದ ದರ್ಶನವಾಗಲು ಭವ ಸಿಂಧುವ ದಾಟುವೆ- ನೆಂದು ಬಂದಿರುವೆ ಸನಂದನಾದಿ ವಂದ್ಯ 7 ಕೂರ್ಮ ವರಾಹ ನಾರಸಿಂಹ ವಾಮನ ಶ್ರೀ ಭಾರ್ಗವ ರಾಮಕೃಷ್ಣ ಬೌದ್ಧ ಕಲ್ಕಿಯಂಬ ದಿವ್ಯ ನಾಮಗಳನು ಬಿಟ್ಟು ಕಾಮಲಾಲಸನಾಗಿ 8 ಒಂದು ನಿಮಿಷವಾದರು ತತ್ವಾಧಾರ ವಿಂದ ದರ್ಶನ ಮಾಡಲು ಹೊಂದಿದಘಗಳೆಲ್ಲ ಬೆಂದು ಹೋಗುವುದೆಂದಾ- ನಂದತೀರ್ಥಚಾರ್ಯರೆಂದ ನುಡಿಯ ನಂಬಿ 9 ದ್ವೇಷಿ ಮಾನವರ ಮುಂದೆ ನಾನಾ ವಿಧ ಕ್ಲೇಶವ ತಾಳ್ದೆ ಹಿಂದೆ ಘಾಸಿಯಾಗಿ ನಾನಾ ದೇಶ ದಾಟಿ ಬಂದೆ ಮೀಸಲಾದೆ ನಿನ್ನ ದಾಸ ದಾಸ್ಯನೆಂದೆ 10 ಜನರೊಳು ಪ್ರಮಿತನಾಗಿ ಬಾಳಿದ ಮಾನ- ವನು ಮಾನಹೀನನಾಗಿ ತನುವ ಪೊರೆದನತಿ ಘನಕ್ಲೇಶವೆನುತ ಅ- ರ್ಜುನನಿಗೆ ಉಪದೇಶವನು ಪೇಳಿದವ ನೀನೆ 11 ಯುಕ್ತಿ ಒಂದನು ಕಾಣೆನು ದೇಹದಿ ದೃಢ ಶಕ್ತಿಯಿಲ್ಲದವ ನಾನು ಮುಕ್ತಾಶ್ರಯ ಸರ್ವ ಶಕ್ತಿ ನೀನಿಹ ಪರ- ಭುಕ್ತಿ ಮುಕ್ತಿದನೆಂಬ ವಿರಕ್ತಿಯಿಂದಲಿ ಬಂದೆ 12 ಕಾಸೆಲ್ಲ ವ್ಯಯವಾಯಿತು ಎನಗೆ ಪರದೇಶವಾಸವಾಯಿತು ಆಸೆ ಬಿಡದುದರ ಘೋಷಣೆಗಿನ್ನವ- ಕಾಶವೊಂದನು ಕಾಣೆ ಶ್ರೀಶ ನೀನರಿಯೆಯ 13 ನಿಲ್ಲಲಾಶ್ರಯವನು ಕಾಣೆ ಪೋಗುವೆನೆಂದ- ರೆಲ್ಯು ಮಾರ್ಗವನು ಕಾಣೆ ಬಲ್ಲಿದ ವೈರಿಗಳಲ್ಲಿ ತುಂಬಿಹರರಿ- ದಲ್ಲಣ ನೀ ಎನ್ನ ಸೊಲ್ಲ ಲಾಲಿಸು ಕೃಷ್ಣ 14 ಅಶನವಸನ ಕಾಣದೆ ದೇಶವ ಸುತ್ತಿ ಬಸಿದು ಬೆಂಡಾಗಿಹೆನು ಉಶನಾಂiÀರ್i ಶಿಷ್ಯನ ವಶದಿಂದೆತ್ತಿ ಪೃಥ್ವಿಯ ದಶನಾಯಕರಿಗಿತ್ತ ಅಸಮಸಾಹಸ ದೇವ 15 ಮಾಡಿದಪರಾಧಕೆ ಮಾನಹಾನಿ ಮಾಡಿದುದು ಸಾಲದೆ ಬೇಡುವೆ ದೈನ್ಯದಿ ಪಾಡುವೆ ಮಹಿಮೆಯ ರೂಢಿಯೊಳಗೆ ದಯಮಾಡು ಇನ್ನಾದರು 16 ಇನ್ನಾದರೂ ಮನದಿ ಪಶ್ಚಾತ್ತಾಪ ವನ್ನು ತಾಳೊ ದಯದಿ ಕಣ್ಣ ಕಟ್ಟಿ ಕಾಡಿನೊಳು ಬಿಟ್ಟ ತೆರದೊಳಿಂ- ತೆನ್ನನು ಬಳಲಿಪದನ್ಯಾಯವಲ್ಲವೆ 17 ನಷ್ಟವೇನಹುಣನು ಎನ್ನಲಿ ಕ್ರೋಧ ಬಿಟ್ಟು ಬಾಧಿಸುತ್ತಿರಲು ಕೃಷ್ಣ ನೀ ಕರುಣದಿ ಕಷ್ಟ ಬಿಡಿಸಿ ಕಡೆ ಗಿಷ್ಟು ತಾತ್ಸಾರದಿಂದ ಕಷ್ಟಗೊಳಿಸಿದೆ 18 ಇಂದ್ರಾದಿ ಸುರರುಗಳು ಕೆಲವು ಕಾಲ ನೊಂದು ಭಾಗ್ಯವ ಪಡದು ಇಂದಿರೇಶ ನಿನ್ನ ಬಂಧಕ ಶಕ್ತಿಯಾ ನಂದ ತಿಳಿದಂತೆ ಮಂದನಾನರಿವೆನೆ 19 ಆನೆಯ ಭಾರವನು ಹೊರಲು ಸಣ್ಣ ಶ್ವಾನ ಸಹಿಸಲಾಪದೆ ದೀನ ಮಾನವನೆಂದು ಧ್ಯಾನಿಸಿ ಮನದಲಿ ಘನ್ನ ದುಖ್ಖವ ಕಳೆಯಾನಂಥ ಮೂರುತಿ20 ನೀನಿತ್ತ ಮಾನವನು ನೀ ಕಳದುದ ಕಾನು ಮಾಡುವದೇನಯ್ಯ ದಾನವಾರಿ ಸುರಧೇನು ನಿನ್ಡಿಗಳ ಧ್ಯಾನ ಮಾಡುತಲಿ ಸುಮ್ಮಾನದಿಂದಿರುವೆನು 21 ಸಾಕು ಸಾಕು ಮಾಡಿದೆ ಎನ್ನನು ಬಹು ನೀಕರಿಸುತ ದೂಡಿದೆ ಬೇಕಾದರೆ ಭಕ್ತ ನೀ ಕಪಾಲನ ಪ- ರಾಕೆಂಬ ಬಿರುದಿಂದ ಸಾಕುವದುಚಿತವೆ 22 ಅಂಬರೀಷವರದ ಸ್ವಭಕ್ತ ಕು- ಟುಂಬಿಯಂಬ ಬಿರುದ ನಂಬಿದ ಮೇಲೆನಗಿಂಬುದೋರದೆ ವೃಥಾ ಡಂಬರವ್ಯಾಕಿನ್ನು ಶಂಬರಾರಿಯ ಪಿತ 23 ಹಂಸವಾಹನ ಜನಕ ದಾಸಮದ- ಭ್ರಂಶಕನೆಂದನ- ಕ ಸಂಶಯವಿಲ್ಲದೆ ತಿಳಿದೆನು ಮಾತುಳ ಕಂಸ ಮರ್ದನ ವಿಪಾಂಸ ಶೋಭಿತ ದೇವ 24 ತರಳ ಪ್ರಹ್ಲಾದ ಧ್ರುವಾದಿಗಳನೆಲ್ಲ ಪೊರೆದನೆಂಬ ಕಥೆಯ ಹಿರಿಯರು ಪೇಳ್ವರು ಭರವಸೆ ಎನಗಿಲ್ಲ ಸಿರಿನಲ್ಲ ನೀಯೆನ್ನ ಬರಿದೆ ಬಿಟ್ಟದ ಕಂಡು25 ವಿಜಯಸಾರಥಿ ನಿನ್ನಯ ಮೂರ್ತಿಯ ಕಂಡು ಭಜಿಸಿದ ಮೇಲೆನ್ನನು ವಿಜಯ ಪೊಂದಿಸದಿರೆ ತ್ರಿಜಗವು ನಗದೇನೊ ಭುಜಗ ಭೂಷಣ ವಂದ್ಯ ದ್ವಿಜರಾಜ ಗಮನನೆ 26 ಕುಂದಣ ವರ್ಣವಾದ ಕೇತಕಿಯನು ಗಂಧಕೆ ಮರುಳನಾಗಿ ಬಂದು ಕುಸುಮಧೂಳಿಯಿಂದ ಲಂಡನಾದ ತುಂದಿಲೋದರ ಮಿಳಿಂದನಂದದಿ ಸಿಕ್ಕಿ 27 ಬೇಡುವದೇನೆಂದರೆ ನಿನ್ನನು ಧ್ಯಾನ ಮಾಡಿ ಪಾಡುವ ಭಾಗ್ಯವ ನೀಡು ನೀಚರನೆಂದು ಬೇಡದಂದದಿ ಮಾಡು ರೂಢಿಯೊಳಗೆ ದಯಮಾಡು ನೀ ನಿರುಪದಿ 28 ಇನ್ನು ತಾ ತಾಳಲಾರೆ ಕ್ಷಣೆ ಕ್ಷಣೆ ನಿನ್ನ ಪೊಗಳಲಾರೆ ಪನ್ನಗಾಚಲವಾಸ ಪರಮ ಪುರುಷ ಪ್ರ- ಸನ್ನ ವೆಂಕಟೇಶ ಪಾಲಿಸು ಕೃಪೆಯಿಂದ 29
--------------
ತುಪಾಕಿ ವೆಂಕಟರಮಣಾಚಾರ್ಯ
(ಸರಸ್ವತೀ ಪ್ರಾರ್ಥನೆ) ಏನೇ ಸರಸ್ವತಿಯಮ್ಮಾ ಬಹು ಮಾನದಿ ಪಾಲಿಸು ನಮ್ಮಾ ಆ ನಳಿನಜ ಚತುರಾನನನೊಲಿಸಿದ ಶ್ರೀನಿವಾಸನ ಪರಮಾನುರಾಗದ ಸೊಸೆ ಪ. ಮೂಢತನವನೆಲ್ಲ ಕಳಿಯೆ ದಯ ಮಾಡಿ ನೀ ಮನಸಿಗೆ ಹೊಳಿಯೆ ಬಾಡದ ಪದ್ಮದ ಕಳೆಯೆ ಮನೋ ರೂಢ ಮಲವ ಬೇಗ ತೊಳಿಯೆ ಆಡುವ ಮಾತುಗಳೆಲ್ಲವು ಕೃಷ್ಣನ ಪಾಡಿ ಪೊಗಳುವಂತೆ ರೂಢಿಗೊಳಿಸು ದೇವಿ 1 ರಾಜಿಕಲೌಕಿಕವಾದ ಬಹು ಸೋಜಿಗಕರಿಪೂರ್ಣಮೋದ ಈ ಜಗದೊಳು ಮುಖ್ಯವಾದ ಸುಗು- ಣೋಜೊಧಾರಣ ಕಲ್ಪಭೂಜ ಮಂದ ವೈರಿಗಳ ಸ- ಮಾಜವ ಗೆಲಿಸುತ ರಾಜಿಸು ಮನದಲಿ 2 ಕರಣಾಭಿಮಾನಿಗಳನ್ನು ಉಪ ಕರಣರ ಮಾಡುವದನ್ನು ಕರುಣೀ ನೀ ಬಲ್ಲಿನ್ನು ಮುನ್ನ ಮನ ವರತು ರಕ್ಷಿಸು ಬೇಗೆನ್ನನು ಸರಸಿಜಾಕ್ಷ ಶೇಷಗಿರಿ ವರಪದಕಂಜ ಸ್ಮರಣೆ ಮಾಡುವಂತೆ ಕರುಣಿಸೆನ್ನನು 3
--------------
ತುಪಾಕಿ ವೆಂಕಟರಮಣಾಚಾರ್ಯ
[ನಿನ್ನ ಭಕ್ತರಿಗೆ ಭವದ ದೋಷವಿಲ್ಲ ಸರ್ವ ಕರ್ತೃ ಸ್ವತಂತ್ರ ಹರಿಯೇ, ನೀನೆ ಪ್ರೇರಿಸಿ ಭಕ್ತರಿಂದ ಅಪರಾಧ ಮಾಡಿಸಿ ಹೊಣೆಗಾರರನ್ನು ಮಾಡಿ ದಣಿಸದಲೆ ಕ್ಷಮಿಸಿ ಚಿತ್ತದಲಿ ಪೊಳೆ ಎಂದು ಪ್ರಾರ್ಥನಾ.] ಧ್ರುವತಾಳ ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲವಿಪರೀತವೇನಯ್ಯ ಎನ್ನಂದಿಲಿಅಪರಿಮಿತ ಸ್ವಾತಂತ್ರವುಳ್ಳ ಕರ್ತುತ್ವದಿಂದಕೃಪಣರ ಬಾಧೆಗೆ ಯತನವೇನೋವಿಪುಳ ಐಶ್ವರ್ಯದಿಂದ ಸ್ವಾಮಿ ನೀನಾದರೂಸುಪಥ ನಡಿಯದಿಪ್ಪ ಕುಜನರನ್ನತಪುತ ದುಃಖದಲ್ಲಿ ನಿಯಾಮಿಸುವಿಯೆಂದುಅಪೌರುಷೇಯವಾದ ಶ್ರುತಿಯು ಪೇಳೆಖಪತಿ1ಯು ಬಾಧಿಪದಕೆ ಕಾರಣವೇನುಂಟುಉಪಗೂಢ2 ಕರುಣಿಯೇ ತಿಳುಹಬೇಕುಕ್ಲಿಪುತ ರಹಿತವಾದ ವಪುಗಳು ಬರಲೇಕೆಶಪಥ ಉಂಟು ನಿನ್ನ ಬಿಡೆನೆಂದೂಉಪರಿಯಿನ್ನು ಉಂಟು ಅಪರಾಧವೇನು ತಿಳಿಯೆನೃಪತಿ ಹೀನವಾದ ಸತಿಯನೊಲಸೆಉಪಮ ರಹಿತವಾದ ಸಥೆ ಮಾಳ್ಪ ತೆರದಂತೆಚಪಲನಾದರು ಇದನು ಪೋಗದೆಂದು ರಿಪು ಕುಲ ದಲ್ಲಣನಾದ ಪಿತನ ಭಯಕೃಪೆಗೆ ವಿಷಯನಾದ ಸುತರಿಗೆ ನೀನುಅಪಾರ ಗುಣನಿಧೆ ಇನಿತು ಮಾತೆ ಹೊರತುಕುಪಿತನಾಗುವದಕ್ಕೆ ಕೃತ್ಯವಿಲ್ಲಶಪಥ ರೂಪನೆ ನಿನ್ನ ಆಜ್ಞ ಪಾಲನೆ ಮುಖ್ಯಸಫಲವಲ್ಲದೆ ಮತ್ತೊಂದಧಿಕವಿಲ್ಲ ಅ-ನುಪಮ ಸಾಧನ ಇದೆ ಇದೆ ಸಿದ್ಧವೆಂದುವಿಪ ಅಹಿಪಾದ್ಯರು ಮಾಳ್ಪುದಾಗಿ ಸುಪವಿತ್ರವೆನಿಪ ಸತ್ವಬೋಧಿತನಾಗಿ ಹರಿಕ್ಷಿಪಣರ1 ವ್ಯಾಪಾರನಿಂದಾದಕ್ಕೆಸ್ವ ಪಕ್ಷದವರನ್ನು ವೊಹಿಸದಲೆ ಕಡಿಗೆ ಪ-ರ ಪಕ್ಷದವರೆಲ್ಲ ನುಡಿದ ನುಡಿಗೆ ಅಪಹಾಸ ಮಾಡಿದಿ ಅಭಿಮಾನವಿಲ್ಲದಲೆಆಪ್ತನೆಂಬೊ ಮಾತು ಉಳಿಸದಲೆತಪನವಾದ ಭವದಿ ತಂದು ಕ್ಲೇಶವ ಬಡಿಸಿಅಪಹೃತವಾದ ಜ್ಞಾನ ಮಾಡಿದೆನಗೆಉಪಕಾರವೇನು ನಿನ್ನ ಮಾತು ಕೇಳಿದದಕೆಈ ಪರಿ ಮಾಡದಿರು ನಂಬಿದವರತಪುತ ಸುವರ್ಣ ವರ್ಣ ಗುರು ವಿಜಯ ವಿಠ್ಠಲರೇಯಯಃ ಪ್ರಾಣದಾತಿ ಮದ್ಭಕ್ತನೆಂಬೋದು2 ಸತ್ಯ ಮಾಡು 1 ಮಟ್ಟ ತಾಳ ಪ್ರೌಢ ಕರ್ಮದಿ ನಿನ್ನ ಪ್ರೀತಿಯ ಎನಸಲ್ಲಕೀಡ ಕರ್ಮ3 ನರಕವೆಂದೆಂಬೋಸು ಅಲ್ಲಮಾಡು ಎಂದವರನ್ನು ಬಿಡುವರೆ ಮಹಾಪಾಪಬೇಡ ಎಂದದರನ್ನ ಮಾಡುವದೆ ದೋಷಈಡಿಲ್ಲವೋ ನಿನ್ನ ಮಹಿಮೆಗೆ ಏನೆಂಬೆ ರೂಢಿಗಾಗಿದೆ ನೋಡು ದ್ರೋಣನ ವಧೆಗಾಗಿ ನೀ-ನಾಡಿದ ಉಕುತಿಯನು ಗ್ರಹಿಸದ ಕಾರಣದಿ ನೋಡಿಸಿದಿ ನರಕ ದುಃಖವ ಧರ್ಮಜಗೆಗೂಢ ಬಲ್ಲವರಾರು ನಿನ್ನ ಪ್ರೀತಿಯು ಧರ್ಮಗಾಢ ಭಕುತರೆಲ್ಲ ಇದೆ ಮಾಡುವರಾಗಿಕ್ರೋಧ ಮೂರುತಿ ಗುರು ವಿಜಯ ವಿಠ್ಠಲರೇಯಆಡಿದ ವಚನಗಳು ಸಕಲ ಸಾಧನವೆನಗೆ 2 ತ್ರಿವಿಡಿತಾಳ ಅರಸು ತನ್ನ ನಿಜ ಪರಿಚಾರ ಜನರಿಗೆಸರಿ ಬಂದ ಕಾರ್ಯದಲಿ ನಿಲ್ಲಿಸಲುನರರಿಗುಂಟೇನಯ್ಯ ವಿಹಿತಾವಿಹಿತದ ಭಯಧರಣಿಪತಿಯ ಪ್ರೀತಿ ಒಂದೇ ಹೊರ್ತುಸರಸಿಜ ಹರಿಭವ ಸುರಪಾದಿ ನಿರ್ಜರರುಹರಿಯೆ ನಿನ್ನಾಜ್ಞವ ಪಾಲಿಪರೋಸರಸಿಜಾಂಡವನ್ನು ನಿಯಾಮಿಸಿ ಒಂದೊಂದುಪರಿಯ ವ್ಯಾಪಾರದಲ್ಲಿ ನಿಲ್ಲಿಸಲೂಪರಮಾಣುಗಳ ಸ್ಥೂಲ ಸೃಷ್ಟಿ ಸ್ಥಿತಿಯ ಮಾಡಿತರುವಾಯ ಲಯದಲ್ಲಿ ಅಭಿಮುಖರುಪರಮ ಭಯಂಕರವಾದ ಕಾರ್ಯಗಳಿಂದಕರುಣವಿಲ್ಲದಲೆ ಖಂಡ್ರಿಪರು ಈತೆರದಿ ಮಾಡುವರಿಗೆ ಪಾಪ ಪುಣ್ಯವೇನುಧೊರಿಯೆ ನಿನ್ನಯ ಪ್ರೀತಿ ಒಂದಲ್ಲದೆಮರಳೆ ಸಂದೇಹವಿಲ್ಲ ``ಭೀಷಾಸ್ಮಾದ್ವಾತಃ ಪವತಿ’’ವರಲುತಿವೆ ವೇದ ಅಂತವಿಲ್ಲಸುರಲೋಲ ಮಹಧೃತಿ ಗುರು ವಿಜಯ ವಿಠ್ಠಲರೇಯಾಶರಣರ್ಗೆ ಕರ್ಮಗಳ ಲೇಪ ಉಂಟೆ 3 ಅಟ್ಟತಾಳ ಸತಿ ಕರ್ಮ ಕೊರತೆ ಮಾಡೆಪಾತಿವ್ರತಕೆ ದೋಷಕೆ ಎಂದಿಗಾದರೂ ನೋಡಾಸ್ತೋತ್ರ ಮಾಡುವಾಗ ಶಬ್ದ ಡೊಂಕಾಗಲು ಪಾ-ರತ್ರಿಕವಾಗುವ ಪುಣ್ಯಕ್ಕೆ ದೋಷವೆಸೂತ್ರನಾಮಕ ನಿನ್ನ ಆಜ್ಞವ ನಡಿಸುವಭಕ್ತರಿಗೆ ಉಂಟೇನೊ ಭವದೋಷವನ್ನುಕ್ಷೇತ್ರ ಮೂರುತಿ ಗುರು ವಿಜಯ ವಿಠ್ಠಲರೇಯಾ ಧಾ-ರಿತ್ರಿಯೊಳಗೆ ನಿನ್ನವಗೆ ದೋಷವೇನೊ 4 ಆದಿತಾಳ ಒಂದಪರಾಧ ಉಂಟು ವಂದಿಪೆ ತಲೆಬಾಗಿಇಂದಿರೆ ಮೊದಲಾಗಿ ಶ್ವಾಸ ಬಿಡಿಸೊ ಶಕ್ತಿಎಂದಿಗೆ ಬಾರದು ನಿನ್ನ ಹೊರತಾಗಿ ಸಿಂಧುಜ1 ಮೊದಲಾದ ಸುರರಲ್ಲಿ ನೀನಿಂದುಚಂದ ಚಂದದ ಕಾರ್ಯ ಮಾಡಿಸಿ ಭಕ್ತರ್ಗೆಪೊಂದಿದ ಘನತೆಯು ನಿನ್ನದಲ್ಲದೆ ಅನ್ಯ-ರಿಂದಲಿ ಮಾಳ್ಪ ಕೃತ್ಯ ಎಳ್ಳಿನಿತಿಲ್ಲವೆಂದುಮಂದಮತಿಗನಾಗಿ ತಿಳಿಯದೆ ಅಹಂಕಾರಬಂದೊದಗಲು ಅದರನ್ನೆ ಅತ್ಯಭಿವೃದ್ಧಿ ಮಾಡಿತಂದು ಈ ಲೋಕದಿ ಬಂಧನ ಮಾಡಿಸಿದಿತಂದೆ ನಿನಗೆ ಇದು ಪರಮ ಸಮ್ಮತವಾಗೆ ಎ-ನ್ನಿಂದಾಗುವದೆ ಮೋಚನ ಮಾರ್ಗವಒಂದು ತೀರಿಸ ಬಂದು ಹನ್ನೊಂದು ಗಳಿಸಿಕೊಟ್ಟಿಬಂಧು ಅನಿಮಿತ್ಯನಾದದ್ದು ನಿಜವಿತ್ತೆಕುಂದುಗಳೆಣಿಸದೆ ಪಾಲಿಪದೆನ್ನನುಮಂದರಧರ ಗುರು ವಿಜಯ ವಿಠ್ಠಲರೇಯಾಇಂದು ಎಂದೆಂದಿಗೆ ನೀನೆವೆ ಗತಿಯೊ 5 ಜತೆ ಭಕತರ ಅಪರಾಧವೆಣಿಸದಲೆ ತ್ವರಿತದಿ ಚಿತ್ತಮುಕುರದಲಿ ಪೊಳೆಯೊ ಗುರು ವಿಜಯ ವಿಠ್ಠಲರೇಯಾ || [ವಿಷನಾಮ ಸಂ|| ಮಾರ್ಗಶೀರ್ಷ ಶುದ್ದ 8]
--------------
ಗುರುವಿಜಯವಿಠ್ಠಲರು
ಆಡಣ್ಣ ನೀನಾಡಣ್ಣ ಅನುಭವದಾಟ ಆಡಣ್ಣ ಪ ರೂಢಿಯೋಳ್ಹರಿಯ ಗಾಢಮಹಿಮೆ ಕೊಂಡಾಡುವರೊಡನಾಟ ಅ.ಪ ಅಳುವರ ಕಂಡರೆ ಅತ್ತಂತೆ ಕಾಣೋ ನಗುವರ ಕಂಡರೆ ನಕ್ಕಂತೆ ಕಾಣೋ ಅಳುವ ನಗುವರಲಿ ಸಿಲುಕಿ ಸಿಲುಕದೆ ನಿ ನ್ನೊಳಗೆ ಮಾಧವನ ತಿಳಿದು ಆನಂದದಿ 1 ಅವರನು ಕಂಡರೆ ಅವರಂತೆ ಇವರನು ಕಂಡರೆ ಇವರಂತೆ ಅವರಿವರಿಗೊಂದೆಸವನೆತೋರಿ ಸಿರಿ ಪಾದ ಮನಭವನದಿಟ್ಟ್ಹಿಗ್ಗುತ 2 ವಾಸನೆ ಪ್ರಥಮ ನಾಶನ ಮಾಡೊ ದಾಸರ ಕಂಡರೆ ಸೇವೆಯ ಮಾಡೋ ಆಶಪಾಶ ನೀಗಿ ಶ್ರೀಶ ಶ್ರೀರಾಮನ ದಾಸನಾಗಿ ನಿಜ ಮುಕ್ತಿಯ ಕೂಡೊ 3
--------------
ರಾಮದಾಸರು
ಆಡುವ ಬನ್ನಿರಿ ಬಾಲಕರೆ ಪ ರೂಢಿಗಚ್ಚರಿಯಾಗಿ ಬಲುಲೀಲೆಗಳಿಂ ಅ.ಪ ಜನನ ಮರಣವÉಂಬ ಚೆಂಡು ಬುಗುರಿಯಿಂ ಮನದ ವೃತ್ತಿಗಳೆಂಬ ಗೋಲಿಗಜ್ಜುಗದಿಂ ಜನಸಂಘವೆಂಬುವ ಚಿಳ್ಳೆಕೋಲುಗಳಿಂ ಅನುದಿನ ಭ್ರಾಂತಿಯೆಂಬ ಕವಣೆ ಕಲ್ಲುಗಳಿಂ 1 ಏಳುತಲೀ ಮುಖ ತೊಳೆದು ನೀವೆಲ್ಲ ಕರ್ಮ ಭಕ್ಷಗಳೆಲ್ಲ ಲೀಲೆಯಿಂ ಮೆಲ್ಲುತಲಿದರೊಳು ಬಲ್ಲ ಶೀಲ ಸದ್ಗುಣವುಳ್ಳ ಬಾಲಕರೆಲ್ಲ 2 ಶ್ರವಣ ಮನನವೆಂಬ ಸಾಧನೆಯಿಂದ ಭವಹರ ಗುರುರಾಮ ವಿಠಲ ಮುಕುಂದ 3
--------------
ಗುರುರಾಮವಿಠಲ
ಆವುದೊಳ್ಳೆಯದೊ ನಿನ್ನಂಗ - ಚೆಲುವದೇವ ಬಂಕಾಪುರದ ಲಕುಮಿ ನರಸಿಂಗ ಪ ಜಗದೊಳಗೆ ತಾನು ತಂದೆಯ ಮಾತು ಕೇಳದಾಮಗನು ಇಹ ಪರಕೆ ಸಲುವ ಪ್ರಾಜ್ಞನೆ ?ಬಗೆಗೊಳಿಸಿ ಪ್ರಹ್ಲಾದ ಪಿತನೊಡಲ ನಿನ್ನ ಕೂ-ರುಗುರಿನಿಂ ಬಗೆಸಿದಾತಂಗೆ ಮುಕುತಿಯನೀವೆ 1 ಪೊಡವಿಯೊಳು ಅಣ್ಣನಾಜ್ಞೆಯ ಮೀರಿ ನಡೆಯುತಿಹಒಡಹುಟ್ಟಿದವಗೆ ಕೈವಲ್ಯವುಂಟೆ ?ದೃಢದಲಿ ವಿಭೀಷಣಾಗ್ರಜನನ್ನು ಬಾಣದಲಿಕೆಡಹಿಸಿದ ಬಳಿಕವಗೆ ಸ್ಥಿರಪಟ್ಟ ಕಟ್ಟಿದೆ2 ರೂಢಿಯಲಿ ಗುರುದ್ರೋಹವನು ಮಾಡಿದವನ ಮೊಗನೋಡಿದಾಗಲೆ ಪ್ರಾಯಶ್ಚಿತ್ತವುಂಟುನೋಡಿದಾಗಲೆ ಬೃಹಸ್ಪತಿಸತಿಗೆ ಅಳುಪಿದನಸೂಡಿದಾತನ ಸ್ನೇಹವನು ಮಾಡಿಕೊಂಡಿರ್ಪೆ 3 ದೇಶದೊಳು ವಂಶಕಂಟಕರೆನಿಸಿದವರೊಳಗೆಭಾಷಣವ ಮಾಡಬಪ್ಪುದೆ ಪ್ರಾಜ್ಞರು ?ಬೇಸರಿಸದೆ ಕೌರವರ ಕೊಂದ ಪಾಂಡವರ ಸಂ-ತೋಷದಲಿ ಪಕ್ಷಿಕರ ಮಾಡಿಕೊಂಡಿರ್ಪೆ 4 ಪೊಡವಿಪತಿ ಕೇಳು ಶ್ರೀ ಆದಿಕೇಶವನೆ ಹಿಂ-ಗಡೆಯಲ್ಲಿ ಮನೆಯ ಕಟ್ಟಿಸಬಾರದೆ ?ಬಿಡೆಯವಿಲ್ಲದೆ ಸಭಾಮಧ್ಯದಲಿ ಹೆಂಡತಿಯತೊಡೆಯ ಮೇಲ್ಕುಳ್ಳಿರಿಸಿಕೊಂಡಿರ್ಪ ಹಿರಿಯತನ 5
--------------
ಕನಕದಾಸ
ಆಸೆ ತೋರಿಸಿ ಈಶ ನಿರಾಸೆಮಾಳ್ಪರೆ ಲೇಸೋ ನಿನಗೆ ಶೇಷಶಾಯಿ ಶ್ರೀಶ ಅಭಿಲಾಷಿಗಳಿಗೆ ಪ ಬಡಜನರ ಪರ್ವತ ಒಡಲ ಆಸೆಯ ಕೊಡುವೆನೆಂದು ನುಡಿಯಲವರು ಎಡೆಬಿಡದೆ ಬೇಡಿ ಬೇಡಿ ಕಾಡಿ ಕಾಡಿ ಕಡೆಗೆ ನೋಯ್ವರು 1 ಆಡಿದ್ಯಾತಕೊ ವಾಕ್ಯ ಸುಳ್ಳು ಮಾಡಿದ್ಯಾತಕೊ ಖೋಡಿದೈವಿನಾ ಬೇಡುವಂತೆ ನಿನ್ನ ಬೇಡಿಕೊಂಬೆ ಗಾಢಮಹಿಮ ನೋಡದಿರೊಳಿತಿತ್ತಾಡಿದ್ಯಾಕ 2 ರೂಢಿಗಧಿಕನೆ ದಯವ ಮಾಡು ಎನ್ನೊಳು ಮೂಢತನದಿ ನಾ ಮಾಡಿದಂಥ ಕೇಡುಗುಣಗಳೆಣೆಸದೆನ್ನೊ ಳಾಡಿದ್ವಾಕ್ಯ ನೀಡು ಶ್ರೀರಾಮ 3
--------------
ರಾಮದಾಸರು
ಇಂದಿನಾಜನ್ಮದಲಿ ದರಿದ್ರನು ಇಂದು ಕೊಡಲಿಕೆ ಇಲ್ಲ ಎಂದೆಂದಿಗೂ ಹುಟ್ಟು ದರಿದ್ರನು ಪ ಅನ್ನವನು ಅತಿಥಿಗಿಕ್ಕದಕಾರಣ ಕೈಯಾರೆ ಮಾಡದಕಾರಣ 1 ಇಲ್ಲದ ಕಾರಣ ದರಿದ್ರವದುಕಾರಣ 2 ಮಾಡುವುದು ಕೋಪವನು ಅದು ಕಾರಣ ರೂಢಿಯೊಳು ದರಿದ್ರವದುಕಾರಣ 3 ಬಂಗಾರವಿಲ್ಲದು ಕಾರಣ ಮುನ್ನದಾನವನು ಮಾಡದಿಹಕಾರಣ 4 ನೆರೆಮಾಡಿ ಭಕ್ತೀಯೊಳುದಾರಿದ್ರವ ಪರಿಹರಿಸಿ ನೊಲಿದವರಿಗೆ ಭಾಗ್ಯ ಬಹುದದುಕಾರಣ 5
--------------
ಕವಿ ಪರಮದೇವದಾಸರು