ತಂದೆ ನೀನಹುದೆಂಬುದೆಂದಿಗು ದಿಟವಯ್ಯ
ಇಂದಿರೆಯರಸ ಜೀಯಾ
ಕುಂದುಕೊರತೆಗಳನೊಂದು ನೋಡದೆ ಕೃಪೆ
ಯಿಂದ ನಿನ್ನಂತೆ ರಕ್ಷಿಪರುಂಟೆ ರಘುರಾಯ ಪ.
ತನಗನುವಾಗಿರೆ ತೋಷಬಡುವ ತಾತ
ಕೊನರಿಕೊಂಬುವ ಕಷ್ಟಕಾಲದಲಿ
ವನರುಹದಳನೇತ್ರ ವಾರ್ಧಿಬಂಧನ ನೀನು
ನೆನೆದಬೀಷ್ಟವ ಕೊಟ್ಟು ನಿರ್ಮಲ ಪದವೀವಿ 1
ಅಘಟಿತಾಘಟಕನೆ ಆದಿ ಪರುಷಮಹ-
ದಘನಿವಾರಣ ಶಕ್ತ ಗುಣವಾರಿಧೆ
ಸ್ವಗತ ಮಾನಸ ಶಬರಿಯ ಸಲಹಿದ ನಮ್ಮ
ರಘುಕುಲತಿಲಕ ರಾವಣವೈರಿ ಸುಖಕಾರಿ 2
ಮುಪ್ಪುರ ಹರ ಜಪಿಸುವ ಮೂಲ ಮಂತ್ರೇಶ
ಅಪ್ಪ ನೀನಹುದೆಂಬ ನಿರ್ಣಯವ
ತಪ್ಪದೆ ಬಿನ್ನಹ ಒಪ್ಪಿಲ್ಲಿ ನೆಲೆಯಾಗು
ಸರ್ಪಾದ್ರಿನಿಲಯಾ ತಿಮ್ಮಪ್ಪ ಚಿಂತಿತದಾತ 3