ಏನು ಸುಕೃತದ ಫಲವೋ ಶ್ರೀನಿವಾಸನೆ ಹೇಳು
ಹಾನಿಯಾಗಿಯೆ ಅವಮಾನ ತೋರುತಿದೆ ಪ
ವಾಸುದೇವನೆ ಎನ್ನ ಈಸು ದಿನ ಪರಿಯಂತ
ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ
ಈಸಾಡಿದೆನು ನಾನು ಈ ಗೃಹದೊಳೀಗೇನು-
ದಾಸಿನವು ನಿನಗಾಯಿತು ಮೋಸ ಯೋಚಿಪರೆ 1
ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ
ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ
ಹಗಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ
ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ 2
ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ
ಪಾರಾಗಿ ನಾಚಿಕೆಯು ಬೇರೂರಿತು
ಘೋರ ಅಡವಿಯೊಳಗೆ ಗಾರುಗತ್ತಲೆ ಸುತ್ತಿ
ಮಾರಿದೆಯ ಚೋರರಿಗೆ ದಾರಿಗಾಣಿಸದೆ 3
ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರೆಕರೆಯು
ಹರದಿಯೊಳು ನಂಬಿಗೆಯು ಕಿರಿದಾಯಿತು
ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ
ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ 4
ಇನ್ನು ಬಂಧಿಸಬೇಡ ಎನ್ನಿಂದ ಅಳವಲ್ಲ
ಬನ್ನಬಡುವುದು ಎಲ್ಲ ನಿನ್ನ ಮನಕರುಹು
ಕರ್ಮ ಬೆನ್ನು ಬಿಡುವಂದದಲಿ
ಪನ್ನಗಾದ್ರಿನಿವಾಸ ಪಾಲಿಸೈ ಲೇಸ 5
ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ
ಕಾಸಕೊಟ್ಟೇಕೆ ನಿರಾಸೆ ಮಾಡುವಿಯೊ
ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ
ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ 6
ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ
ಕಡೆಗೆ ಕೈವಿಡಿದು ಎನ್ನ ರಕ್ಷಿಪನು ನೀನೆ
ಮಡದಿ ಮಕ್ಕಳನೆಲ್ಲ ಬಿಡದೆ ಸಲಹುವ ನೀನೆ
ಪೊಡವಿಗಧಿಪತಿಯಾದ ವರಾಹತಿಮ್ಮಪ್ಪ 7