ಉ. ತತ್ವ ವಿವೇಚನೆ
ಹರಿಯಾದರೇನು ತಾ ಹರನಾದರೇನು
ಮೂರ್ತಿ ದೊರಕಿ ಫಲವೇನು ಪ
ಪಿತನೊಳಗೆ ಸೇರದಿಹ ಸುತನಿಂದ ಫಲವೇನು
ಸತಿ ಇದ್ದರೇನು
ಮತಿಹೀನ ಗುರು ತಾನು ಜೊತೆಯಾಗಿ ಇದ್ದರೇನು
ಮತ ಮೀರಿ ನಡೆವಾತ ಯತಿಯಾದರೇನು 1
ಸಾಯವಿಲ್ಲದ ನ್ಯಾಯ ಸತ್ಯವಾದರೆ ಏನು
ಬಾಯಸವಿಯಿಲ್ಲದ ರಸಾಯನದಲೇನು
ಕಾಯ ಕುಂದಿದ ಮೇಲೆ ಜೀವದಾಶೆಯದೇನು
ಮಾಯವಾದಿಯ ಮಾತು ಮತ್ತೆ ದೃಢವೇನು 2
ಋಣವ ಮಾಡಿದ ತಾತ ಗುಣವಂತನಾದರೇನು
ಭಣಿತೆ ತಪ್ಪಿದ ತಾಯಿ ರಕ್ಷಿಣಿಯು ಆದರೇನು
ಎಣಿಕೆ ಬಾರದ ಮನುಜ ಕರಣಿಕನಾದರೇನು
ಫಣಿರಾಜನೊತ್ತಿನೊಳು ಹಣವಿದ್ದರೇನು 3
ವಿಪ್ರ ವೇದ ಓದಿದರೇನು
ಮಾದಿಗನು ತಾ ಮಡಿಯನುಟ್ಟರೇನು
ಬೂದಿಮುಚ್ಚಿದೆ ಕೆಂಡವಾದ ಸೋದರವೇನು
ಸಾಧಿಸುವ ಊರೊಳಗೆ ಆದ ಫಲವೇನು 4
ಹರಿಯನರ್ಚಿಸದಿರ್ದ ಕರವಿರ್ದು ಫಲವೇನು
ಹರಿಯ ಸ್ಮರಣೆಯ ಮಾಡದರಿಯದವನೇನು
ಸಿರಿಯು ನಿಲ್ಲದ ಗೃಹದ ಪರಿಯ ಸೌಖ್ಯವದೇನು
ಮರೆಯಾದ ಮನುಜನೊಳು ವ್ಯವಹಾರವೇನು 5
ವಾರಿಯಿಲ್ಲದ ಊರ ಸೇರಿರ್ದು ಫಲವೇನು
ಚೋರನೊಡನೇ ದಾರಿ ನಡೆವುದೇನು
ಬೇರು ಇಲ್ಲದ ವೃಕ್ಷ ಏರಿ ನೋಡುವುದೇನು
ಮಾರಿ ಮನೆಯೊಳಗಿರಲು ಸಾಕಾರವೇನು 6
ಲಕ್ಷಣದ ಮೂರ್ತಿಯಿರಲಕ್ಷಯವ ತೋರುವುದು
ಪಕ್ಷಿವಾಹನ ಲಕ್ಷ್ಮ್ಯಪೇಕ್ಷೆಯಾಗಿಹರು
ಲಕ್ಷಣವಿರಹಿತ ನರ ಪ್ರದಕ್ಷಿಣದಿ ಬಳಲಿದರು
ಭಿಕ್ಷುಕನೇ ಸರಿಯಾತನೀಕ್ಷಿಸರು ಜನರು 7
ಬುದ್ದಿವಂತರ ಕೈಯ ಶುದ್ಧವಾದೆರಕದಲಿ
ತಿದ್ದಿರ್ದ ಮೂರ್ತಿಯನು ಕದ್ದುಕೊಂಡು
ಹೊದ್ದಿ ಬಲವಂತನೊಳು ಬದ್ದವಾಗಿರುತಿರ್ದು
ಎದ್ದು ಹೋಗದ ಸ್ಥಳದಿ ಮುದ್ದನಾಗಿಹುದು 8
ಕಾಮಿತಾರ್ಥನೀವ ಸೀಮೆಯಲಿ ಕೌರವನು
ರಾಮರಾಜ್ಯದಿ ಬೇಡಿಕೊಳಲು ಕೊಡುತಿಹನು
ಪ್ರೇಮದೊಳು ವರಾಹತಿಮ್ಮಪ್ಪ ಮನದಣಿಯೆ
ಸೌಮನಸ್ಯವೀವ ಬರಿದೆ ಬಳಲದಿರು 9