ಹ್ಯಾಗೆ ಕಾಂಬೆನು ಹಂಸಯೋಗಗಮ್ಯನೆ ನಿನ್ನ
ವಾಗೀಶಪಿತ ದಯವಾಗೋ ಮೋಹನ ಪ.
ಮನವು ನಿನ್ನಯ ಸೇವೆಗನುವಾಗಿ ನಿಲದು ಸ-
ಜ್ಜನ ಸಂಗ ಸಲ್ಲಾಪವನು ಮಾಡಗೊಡದು
ಘನಮೋಹಕೊಳಗಾದ ತನುವ ಪಿಡಿವುದು ಶ್ರೀ-
ವನಿತೆಯರಸ ನಿನ್ನ ನೆನವೆಂತು ಬಹುದೊ 1
ಹಂಚಿ ದುರ್ವಿಷಯಕ್ಕೆ
ವಂಚನೆಗೊಳಿಸಿ ಪ್ರಪಂಚದೋಳಿರಿಸಿ
ಪಂಚಬಾಣನ ಶುಕಚುಂಚುವೇದದಿ ತ್ವಂಚ
ಹಂಚಗೊಳಿಸಿ ಮೋಹ ಮಿಂಚಿಕೊಂಡಿಹುದೊ 2
ದೀರ್ಘಾದಿ ಸಹಿತಾದಿ ವರ್ಗಗಳನು ಗೆಲುವ
ಮಾರ್ಗ ಕಾಣದೆ ದುಸ್ಸಂಸರ್ಗದಿ ಸಿಲುಕಿ
ಭರ್ಗ ವಂದ್ಯನೆ ಗುಣಸರ್ಗದ ಬಲೆಯಿಂದ
ನಿರ್ಗಮಗೊಂಡಪವರ್ಗವೆಂತಹುದೊ 3
ದಿನದಿನದೊಳಗಾಹತನುವ ನೋಡಲು ಮುಂದಿ
ನನುಭವವನು ಕಾಂಬದನು ನಾನೇನರಿಯೆ
ಜನರ ರಕ್ಷಾದಿಕರ್ತನೆ ನೀನೆ ಬಲ್ಲಿ ಮುಂ-
ದಿನ ಕಾರ್ಯವಹದೆಂತೊ ವನಜಲೋಚನನೆ 4
ಸತಿ ಸುತಾದಿಗಳೆಲ್ಲ ಹಿತರೆಂದು ಗ್ರಹಿಸುವ
ಮತಿಹೀನ ಜನಕೆ ದುರ್ಗತಿಯು ತಪ್ಪುವದೆ
ಅತುಳ ಮಹಿಮ ಭಕ್ತಹಿತನಾದ ವೆಂಕಟ
ಪತಿ ನೀನೆ ಎನಗೆ ಸದ್ಗತಿ ತೋರೊ ಹರಿಯೆ 5