ತಿಳೀವಲ್ಲದಿದು ಎನಗೆ ತಿಳಿಸಯ್ಯ ಹರಿಯೆ
ಬಲುಪಾಪಿಜೀವಿಯ ತಪ್ಪಾರಿಗಿಹ್ಯದೋ ಪ
ಹುಟ್ಟಿಸಿದವನಿಗೋ ಹುಟ್ಟಿ ಬಂದವನಿಗೋ
ಸೃಷ್ಟಿಗೊಳಿಸಿದಂಥ ಸೃಷ್ಟಿ ಕರ್ತನಿಗೋ
ಗಟ್ಟ್ಯಾಗಿ ನನಗಿದರ ಗುಟ್ಟು ತಿಳಿಸೈ ತಂದೆ
ಮುಟ್ಟಿಭಜಿಸುವೆ ನಿನ್ನ ಶ್ರೀಕೃಷ್ಣರಾಯ 1
ಗೋಡೆಯ ಡೊಂಕಿರಲು ಗೋಡೆಯ ತಪ್ಪಥವ
ಗೋಡೆಯನು ಕಟ್ಟಿದ ಗೌಂಡಿಯ ತಪ್ಪೋ
ಕೂಡಿಟ್ಟು ಹಣ ವೆಚ್ಚಮಾಡಿ ಕಟ್ಟಿಸಿದಂಥ
ಗೋಡೆಯೊಡೆಯನ ತಪ್ಪೋ ತಿಳಿಹೇಳೆನಗೆ 2
ಬಂಡಿ ತಗ್ಗಿಗೆ ಬೀಳೆ ಬಂಡಿದೇ ತಪ್ಪಥವ
ಬಂದಡರಿ ಕೂತುಕೊಂಡವರದೆ ತಪ್ಪೋ
ಬಂಡಿಹೊಡೆಯುವಂಥ ದಿಂಡೆಗಾರನ ತಪ್ಪೋ
ಕಂಡು ಇದ್ದಂತ್ಹೇಳೋ ಪಂಢರಿರಾಯ 3
ಜೀವಾಳ ಅಪಸ್ವರ ನುಡಿಯಲದರದೇ ತಪ್ಪೋ
ಜೀವಾಳ ಬಾರಿಸುವಗೋ ಜೀವಾಳ ಕರ್ತನಿಗೋ
ಆವಂಗೆ ತಪ್ಪು ಜಗಜೀವ ಜೀವೇಶನೆ ನ್ಯಾ
ಯಾವಾಗ್ಹೇಳಯ್ಯ ಭಾವಜಪಿತನೆ 4
ಪ್ರಾಣೇಶ ಶ್ರೀರಾಮ ನೀನೆ ಬರೆದಿಹ್ಯ ಬರೆಹ
ನೀನೆ ವ್ಯಾಪಕ ಸರ್ವ ನೀನೆ ರಕ್ಷಕನೋ
ನೀನೆ ಸ್ವಾತಂತ್ರ್ಯಾಖಿಲ ಏನಿಲ್ಲ ಮನುಜನಾ
ಧೀನ ತಪ್ಪ್ಯಾಕಿವಗೆ ನೀನೆ ಪೇಳಯ್ಯ 5