ಬಂಡು ಮಾಡುವರಲ್ಲೊ ರಂಗೈಯ್ಯ ಪ
ಮಡುವ ಪೊಕ್ಕೆನುಯೆಂದು ಮಡದೇರೆಲ್ಲರು ಕೂಡಿ
ಬಿಡುಗಂಣನಿವನೆಂಬರೋ ರಂಗೈಯ್ಯಾ 1
ಗುಡ್ಡ ಹೊತ್ತನು ಎಂದು ಸಡ್ಡೆನು ಮಾಡದೆ ನಿನ್ನ
ದೊಡ್ಡ ದೆವ್ವಯೆಂಬರೊ ರಂಗೈಯ್ಯಾ 2
ಧರಣಿ ಎತ್ತಿದೆ ಎಂದು ಪರಿಹಾಸ ಮಾಡುತ
ಕೋರೆದಾಡಿಯನೆಂಬರೊ ರಂಗೈಯ್ಯಾ 3
ತರಳನ ಸಲಹಲು ಸಿರಿಗೆ ಪೇಳದೆ ಬಂದ
ಉರಿಮೋರೆಯವನೆಂಬರೊ ರಂಗೈಯ್ಯಾ 4
ಕೃಪೆಯ ಮಾಡದೆ ಬಲಿಯ ತಪಭಂಗ ಮಾಡಿದ
ಕಪಟ ತಿರುಕನೆಂಬರೊ ರಂಗೈಯ್ಯಾ 5
ಪಿತನ ಮಾತನು ಕೇಳಿ ಮಾತೃಹತ್ಯವಗೈದ
ಪತಿತ ಹಾರುವನೆಂಬರೊ ರಂಗೈಯ್ಯಾ 6
ಸತಿಯ ರಕ್ಕಸನೊಯ್ಯೆ ಅತಿಶೋಕ ಪೊಂದಿದ
ಹತಭಾಗ್ಯನಿವನೆಂಬರೊ ರಂಗೈಯ್ಯಾ 7
ನೆರೆಹೊರೆ ಹೆಂಗಳ ಸುರತದಿ ಕೂಡಿದ
ಜಾರ ಚೋರನು ಎಂಬರೊ ರಂಗೈಯ್ಯಾ 8
ಬಟ್ಟೆಯಿಲ್ಲದೆ ಪೋಗಿ ನೆಟ್ಟನೆ ನಿಂತಿರ್ದ
ಕೆಟ್ಟಾ ಭಂಡನಿವನೆಂಬರೊ ರಂಗೈಯ್ಯಾ 9
ಅಷ್ಟಾ ಭಾಗ್ಯವ ನೀಗಿ ಕಷ್ಟಕ್ಕೆ ಗುರಿಯಾದ
ದುಷ್ಟ ರಾಹುತನೆಂಬರೊ ರಂಗೈಯ್ಯಾ 10
ಕಂದಾ ನೀ ನಿರ್ದೋಷ ರಂಗೇಶವಿಠಲ
ನೆಂದು ತಿಳಿದು ದೂರುವರೊ ರಂಗೈಯ್ಯಾ 11