ಬರಬಾರದಾಗಿತ್ತು ಬಂದೆನಯ್ಯಾ ಪ
ಕರೆತರಲು ಬಂದುದಕೆ ಫಲವೇನೊ ದೇವಾಅ.ಪ
ತರಳತನದಲ್ಲಿ ಎನ್ನ ಕರಣಗಳು ಮಾಡಿದ
ಪರಿಪರಿಯ ಕ್ರೀಡೆಗಳ ಫಲವೇನೊ ಎನಗೆ
ದುರುಳ ಸಂಗದೊಳಿದ್ದು
ಹರುಷದಿಂದಲಿ ಎನ್ನ ಆಯುವನು ಕಳೆದೆ1
ಸತಿಸುತರು ಹಿತರಿವರು ಎನಗೆಂದು ಉಬ್ಬುಬ್ಬಿ
ಮಿತಿ ಇಲ್ಲದಾ ಕಾರ್ಯಗಳನೆ ಮಾಡೀ
ಗತಿಯೇನು ಮುಂದು ಹಿತವು ಯಾವುದು ಎಂದು
ಮತಿಗೆಟ್ಟಮೇಲೆನಗೆ ಗೊತ್ತಾಗುವುದೆಂತೋ 2
ಶ್ವಾನ ಸೂಕರಗಳು ಸ್ವೇಚ್ಛೆಯಿಂದಲಿ ಚರಿಸಿ
ತನ್ನ ಪರಿವಾರವನೆ ತಾ ಪೊರೆಯುತಿಹವೋ
ಎನ್ನ ಸತಿಸುತರುಗಳ ಉದರಪೋಷಣೆಗಾಗಿ
ಹೀನಸೇವೆಯಿಂದ ಉಪಜೀವಿಸಲು ಬಹುದೆ 3
ತನುಬಲವು ಇದ್ದಾಗ ಕೋಣನಂದದಿ ತಿರುಗಿ
ಜ್ಞಾನ ಕರ್ಮಗಳನ್ನು ಆಚರಿಸದೇವೆ
ಧನ ವನಿತೆ ಮೋಹಕೆ ಕೊನೆಮೊದಲು ಇಲ್ಲದೆ
ಮನವೆಲ್ಲವನು ನಾನು ಹೊಲೆಗೆಡಿಸಿದಮೇಲೆ4
ವಿಕಳಮತಿಯನು ಹರಿಪ ಅಕಳಂಕ ಹರಿಭಕ್ತ-
ರಕುಟಿಲಾಂತಃತರಣ ದೊರೆತು ಎನ್ನ
ಸಕಲಾಪರಾಧಗಳ ಕ್ಷಮಿಸುವರ ಸಂಗ
ನೀ ಕರುಣಿಸದಿದ್ದ ಮೇಲೆ ಶ್ರೀ ವೇಂಕಟೇಶಾ 5