ಆರೂಢನಾದ ಯೋಗಿಯ ಬಗೆಯಿದು | ಈ | ರೂಢಿಯೊಳು ಜನಕಿನ್ನು ಕಾಣಿಸದು ಪ ಮಾತುಗಳ ಆಡನು | ಮೌನಗಳ ಮಾಡನು | ನೀತಿ ಅನೀತಿಗಳೆಂಬುದ ನೋಡನು | ಯಾತರೊಳು ತನಗೆ ಸಂಪ್ರೀತಿಯೆಂಬುವದಿಲ್ಲ | ದಾತನಾಗಿನ್ನಾತ ಚರಿಸುತಿಹನು 1 ವೇದಗಳ ನೋಡನು ಶಾಸ್ತ್ರಗಳ ಕೇಳನು | ನಾದ ಬಿಂದು ಕಳಾತೀತ ತಾನು | ಸಾಧು ಸಂತರ ಸಂಗದೊಳು ಬೋಧದಲಿ ನಲಿವುತಲಿ | ಆದ್ಯನಾದಿ ತಾನೆಂದು ತಿಳಿದಿಹನು 2 ವಂದಿಸಲು ಹಿಗ್ಗನು | ನಿಂದಿಸಲು ತಗ್ಗನು | ಬಂದದಕೆ ತಾ ಹಿಂದು ಮುಂದಾಗನು | ತಂದೆ ಭವತಾರಕನ ಚರಣಾರವಿಂದವನು | ಹೊಂದಿ ಪೂರ್ಣಾನಂದದೊಳಗಿಹನು 3