ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೊರೆವನಲ್ಲವೋ ಹರಿ ದೊರೆವನಲ್ಲವೊ ಪ ಪರಮಯೋಗನಿಷ್ಠೆಯಿಂದ ಇರುಳು ಹಗಲು ಸಮಾಧಿಯಲ್ಲಿ ಇರುವ ಮಹಾಯೋಗಿಗಳಿಗೆ ಅರಿಯೆ ಸಾಧ್ಯವೇ ಅ.ಪ ಸಕಲ ದಾನಧರ್ಮಗಳನು ಸರ್ವಕ್ರತುಗಳನ್ನು ಮಾಡೆ ಶಕುತರಾಗಲರಿಯರೆಂದಿಗು ಶಾಙ್ಗಪಾಣಿಯಂ 1 ರಚ್ಚೆಗಿಕ್ಕಿ ಕಾಣಬಹುದೇ ರಾಜೀವಾಕ್ಷನ 2 ಪಾಮರ ತಾನೆಂದು ಸಕಲ ನೇಮನಿಷ್ಠೆಯಿಂದಲವನ ನಾಮ ಸ್ಮರಿಸೆ ಸುಲಭನಹನು ಗುರುರಾಮವಿಠ್ಠಲನು 3
--------------
ಗುರುರಾಮವಿಠಲ
ಪಾಪಿಯೆಂದೆನಲು ನಾ ತಗ್ಗೆ ಪುಣ್ಯ ರೂಪಿಯೆಂದೆನಲು ನಾ ಹಿಗ್ಗೆ ವ್ಯಾಪಿಸಿ ನೀ ಎನ್ನ ಕುಣಿಸಿದ ಮೇಲೆ ನಿ ಪರಿ ಜನರೆನ್ನ ಪ ನಡೆಸಿದಂತೆ ನಾ ನಡೆವೆ ಉಡಿಸಿದಂತೆ ನಾನುಡುವೆ ನೀ ತೊಡಿಸಿದಂತೆ ನಾ ತೊಡುವೆ ಎ ನ್ನೊಡೆಯ ಸೂತ್ರಧಾರ ನೀನೆಂದರಿಯದೆ ಪೊಡವಿ ಜನರು ಬಾಯಿ ಬಡಿಕ ತನದೊಳೆನ್ನ 1 ಬಿಂಬಕ್ಕೆ ಸ್ವತಂತ್ರವೇನು ತುತ್ತು ಗೊಂಬಾತ ಉಂಬಾತ ನೀನು ಗೊಂಬೆಯಂತಿರಲದಕೇನು ಬರಿಯ ಹಂಬಲಿಪರು ಬರಿ ಕುಂಭಿನಿ ಜನರೆನ್ನ 2 ಭಾಗ್ಯವುಂಟೆಂದು ನಾ ಮೆರೆಯೆ ವೈ ರಾಗ್ಯವುಂಟೆಂದು ನಾ ಜರಿಯೆ ಯೋಗಿಗಳಿಗೆ ನಾ ಸರಿಯೇ ಯಾ ವಾಗಲು ನಡಿಸಿದ ಪರಿಯೆ ಈಗ ಕಾಯದ ಬರಿಯ ಡಂಬವ ಕಂಡು ಭಾಗ್ಯವಂತನೆಂದು ಜನರು ಕೊಂಡಾಡಲು 3 ಬರಿಯ ಸುಖವ ನಾ ತೊಟ್ಟೆ ಸರ್ವ ಸಿರಿಯ ಹೆಡತಲೆಯೊಳಿಟ್ಟೆ ಅರಿತರಿತು ಮಾಯದ ಲೊಟ್ಟೆ ಕಂಡು ಬೆರಗಾಗಿ ನಂಬಿ ನಾ ಕೆಟ್ಟೆ ಗುರು ವಿಮಲಾನಂದವರ ಮಾಂಗೀರೀಶನು ಇರಿಸಿದ್ಹಾಗೆ ನಾನಿರಬೇಕಲ್ಲದೆ4
--------------
ಭಟಕಳ ಅಪ್ಪಯ್ಯ
ಪಾರ್ಥಸಾರಥಿ ನಿಮ್ಮ ಸೇವೆಯ ಮಾಡಿ ಸಾರ್ಥಕವಾದೆನು ಪ ವಾರ್ಥಿಪುರುಷನೆ ನಿಮ್ಮ ಕೀರ್ತಿಯ ಕೊಂಡಾಡಲೆನಗೆ ಶಕ್ತಿಯ ವಿಸ್ತರಿಸೆನಗೆ ಯುಕ್ತಿಯ ಅ.ಪ ಆಚಾರ್ಯರಿಗೆ ಅಭಿವಂದನೆ ಮಾಡಿ ಅಜನರಾಣಿಯ ಭಜಿಸುವೆ ಅನಾದಿಕ್ರಮವನು ಪೇಳುವೆ 1 ಕೈರವಿಣಿಯಲ್ಲಿ ಸ್ನಾನವಮಾಡಿ ಕೈಮುಗಿದು ಮಾರುತಿಗೆ ನಾ ಕರುಣಿಆಚಾರ್ಯರಿಗೆ ವಂದಿಸಿ ಕರಿಯಬಳಿಗೆ ನಾ ಬಂದೆನು ನಾ ಕರಿಯ ಬಳಿಗೆ ಬಂದೆನು 2 ದವನೋತ್ಸವದ ಮಂಟಪಂಗಳು ಭಾಗವತರ ಭವನವು ಬಲವಬಳಸಿ ಭಕ್ತವತ್ಸಲನ ಚೆಲುವರಥವನು ನೋಡಿದೆ ನಾ ಶೇಷರಥವನು ಸೇವಿಸಿ 3 ಮೂಡಬೀದಿಯ ಸುತ್ತಿಬಂದು ಮಹದಾಹ್ವಯರನು ಸೇವಿಸಿ ಮಹಾನುಭಾವನ ವಿಮಾನವನು ನೋಡಿ ಮಾನವನ್ನು ಬಿಟ್ಯೆನೊ ದೇಹಾಭಿಮಾನವನ್ನು ಬಿಟ್ಯೆನೊ 4 ಕಾರಿಮಾರಿ ಪುತ್ರರಿಗೆ ಬಾರಿಬಾರಿಗೆ ವಂದಿಸಿ ವಾರಿಜಾಕ್ಷನ ಗೋಪುರವ ನೋಡಿ ಘೋರಪಾಪವ ಕಳೆದೆನೊ ಯನ್ನ ಘೋರಪಾಪವ ಕಳೆದೆನೊ 5 ಗರುಡಕಂಭವ ದೀಪಸ್ತಂಭವು ವಾಹನದ ಮಂಟಪಂಗಳು ವಾರಿಜನಾಭನ ಪಕ್ಷಿವಾಹನನ ನೋಡಿ ವಂದನೆಯ ಮಾಡಿದೆ ಅಭಿವಂದನೆಯ ನಾ ಮಾಡಿದೆ 6 ತೋರಣದ ಬಾಗಿಲನು ದಾಟಿ ವಾರುಣದೆದುರಲಿ ವಂದಿಸಿ ವಾರಿಜಾಕ್ಷಿ ಶ್ರೀವೇದವಲ್ಲಿಯ ಸಾರೂಪ್ಯವನು ನಾ ಬೇಡಿದೆ ಸಾಯುಜ್ಯವನು ನಾ ಬೇಡಿದೆ 7 ಭಕ್ತಿಸಾರರ ಚರಣಕೆರಗಿ ಹಸ್ತಗಿರೀಶನ ವಂದಿಸಿ ಸುತ್ತಿ ಗರುಡಕಂಬವನ್ನು ಮತ್ತೆ ಸಿಂಹನ ಸೇವಿಸಿ ದಿವ್ಯ ನಾರಸಿಂಹನ ಸೇವೆಸಿ 8 ವಿಷ್ಣುಚಿತ್ತರ ಪುತ್ರಿಯನ್ನು ಅರ್ಥಿಯಿಂದಲೆ ಸೇವಿಸಿ ಮುಕ್ತಿದಾಯಕ ರಂಗನ ಪಾದಕೆ ಮುದದಿ ವಂದನೆ ಮಾಡಿದೆ ನಾ ಮುದದಿ ವಂದನೆ ಮಾಡಿದೆ 9 ಯಾಮುನಾಚಾರ್ಯರಿಗೆ ವಂದಿಸಿ ಕಾಂಚೀಪೂರ್ಣರಿಗೆರಗುವೆ ವೇದಾಂತಾಚಾರ್ಯರ ವಂದನೆ ಮಾಡಿ ಅನಾದಿ ಪಾಪವ ಕಳೆದೆನೊ ನಾ ಅನಾದಿ ಪಾಪವ ಕಳೆದೆನೊ 10 ಭಾಷ್ಯಕಾರರ ಚರಣಕೆರಗಿ ವರಯೋಗಿಗಳಿಗೆ ವಂದಿಸಿ ಕುಲೇಶ ದಾಶರಥಿಗೆ ವಂದಿಸಿ ದ್ವಾರಪಾಲಕರ ನೋಡಿದೆ ನಾ ದ್ವಾರಪಾಲಕರ ನೋಡಿದೆ 11 ಗಂಟೆಬಾಗಿಲ ದಾಟಿ ಶ್ರೀವೈಕುಂಠವಾಸನ ಭಕ್ತರು ಹದಿ ನೆಂಟು ಆಳ್ವಾರುಗಳ ಸೇವಿಸಿ ಕಂಟಕಗಳ ಕಳೆದೆನೊ ಭವ ಕಂಟಕಗಳ ಕಳೆದೆನೊ 12 ಮಾಧವ ಅನಂತ ಶ್ರೀಪದ್ಮನಾಭನ ಸೇವಿಸಿ ಶ್ರೀರಾಮ ಲಕ್ಷ್ಮಣ ಭರತ ಶತ್ರುಘ್ನ ಸೀತೆಯನು ನಾ ನೋಡಿದೆ ಲೋಕಮಾತೆಯನು ನಾ ಬೇಡಿದೆ 13 ಆದಿಶೇಷನ ಮೇಲೆ ಮಲಗಿದ ಅನಾದಿರಂಗನ ಸೇವೆಗೆ ಕುಲ ಶೇಖರರ ಸ್ಥಾನದಲಿ ನಿಂದು ಯದುಕುಲೇಶನ ನೋಡಿದೆ ನಾನೆದುಕುಲೇಶನ ನೋಡಿದೆ 14 ಅನಿರುದ್ಧ ಸಹಿತಲೆ ಎಡದಿ ಸಾತ್ಯಕಿ ಪಂಚಮೂರ್ತಿಗಳ ನಡುವೆ ಪಾರ್ಥಸಾರಥಿ ಯೆಡಬಲದಿ ಶ್ರೀದೇವಿ ಭೂದೇವಿ 16 ಆದಿಶೇಷನ ಮೇಲೆ ತನ್ನಯ ಪಾದವನ್ನು ಪ್ರಸÀರಿಸಿ ವಿ ಅಂದುಗೆ ಗೆಜ್ಜೆ ಕುಂದಣದ ಪಾಡಗಗಳು ಆನಂದದ ಪಾಡಗಗಳು 17 ಕನ್ನಡಿಯಂದದಿ ಕಣಕಾಲುಗಳು ಉನ್ನತವಾದ ಪೀತಾಂಬರವು ಪನ್ನಗಶಯನನ ವಡ್ಯಾಣದಲಿ ಪರಮಮೂರ್ತಿಯ ಸರಗÀಳು ಶ್ರೀಮೂರ್ತಿ ಸರವನು ಸಿಕ್ಕಿಸಿ 18 ದುಷ್ಟನಿಗ್ರಹವನ್ನು ಮಾಡಿ ಶ್ರೇಷ್ಠರನ್ನು ಪರಿಪಾಲಿಪ ಶ್ರೀ ಕೃಷ್ಣಮೂರುತಿಯ ಎಡದ ಭಾಗದಿ ಶ್ರೇಷ್ಠವಾದ ಖಡ್ಗವು ಸರ್ವಶ್ರೇಷ್ಠವಾದ ಖಡ್ಗವು 19 ಸಿಂಧುರಾಜನ ಕೊಲ್ಲುವುದಕಾಗಿ ಅಂದು ಚಕ್ರವ ಕಳುಹಿದೆ ಒಂದು ಕೈಯಲಿ ಪಾದವ ತೋರುತ ಮತ್ತೊಂದು ಕೈಯಲಿ ಶಂಖವು ಅನಂದದಿಂದಲೆ ಶಂಖವು 20 ಸೃಷ್ಟಿಯೆಳಗ್ಹದಿನಾಲ್ಕು ಲೋಕವ ಪಕ್ಷಿವಾಹನವಂ ಬಿಟ್ಟು ವಕ್ಷಸ್ಥಳದಲಿ ಲಕ್ಷ್ಮಿದೇವಿಯ ರತ್ನಾದ್ಹಾರದಪದಕವು ನವರತ್ನದ್ಹಾರದ ಪದಕವು 21 ಕಂಠದೊಳಗಿಟ್ಟ ಕೌಸ್ತುಭಮಣಿ ಎಂಟುಪುಷ್ಪದ ಹಾರವು ವೈ ಕುಂಠವಾಸನ ಸೇವಿಸಿದರೆ ಕಂಟಕಂಗಳು ಕಳೆವುದು ಭವಕಂಟಕಗಳು ಕಳೆವುದು 22 ಕುಂದಕುಸುಮದಂತೆ ದಂತವು ಪವಳದಂತೆ ಅಧರಕಾಂತಿಯು [ಚೆಂದದಿ] ಪೊಳೆವ ಕರ್ಣಕುಂಡಲ ಚೆಲುವ ನಾಸಿಕದಂದವು ತಿಲಕುಸುಮನಾಸಿಕದಂದವು 23 ದೀಪದಂದದಿ ಕರುಣನೇತ್ರವು ಚಾಪದಂದದಿ ಪುಬ್ಬುಗಳಲಿ ವಿವೇಕವಾಗಿ ತೋರ್ಪುದು 24 ಪದುಮನಾಭನ ಸೇವಿಸಿದವರಿಗೆ ಒದಗಿ ಬರುವುದು ಮುಕ್ತಿಯು ಎಲ್ಲರಿಗೊದಗಿ ಬರುವುದಿಷ್ಟಾರ್ಥವು 25 ಪಾದದಿ ಕೇಶದ ಸೇವೆಯನು ಮಾಡಿ ಅನಾದಿಪಾಪವ ಕಳೆದೆನೊ ವೇದಮೂರುತಿ ವೆಂಕಟಕೃಷ್ಣನೆ ಪಾದವನ್ನು ತೋರಿಸು ನಿಮ್ಮ ಶ್ರೀ ಪಾದವನ್ನು ತೋರಿಸು 26
--------------
ಯದುಗಿರಿಯಮ್ಮ
ಮಂಗಳಂ ಜಯ ಮಂಗಳಂ ಮಂಗಳಂ ಬೆಟ್ಟದೊಡೆಯ ಹರಿಗೆ ಜಯ ಪ. ಮಂಗಳಂ ಕೊಳಲನೂದುವ ದೊರೆಗೆ ಮಂಗಳಂ ಶ್ರೀ ಶ್ರೀನಿವಾಸ ವೆಂಕಟನಿಗೆ ಮಂಗಳಂ ಶೇಷಾಚಲ ಹರಿಗೆ ಅ.ಪ. ವೈಕುಂಠದಲಿ ಬಂದವಗೆ ಆ ಕೋಲಗಿರಿಯಲಿ ನಿಂದವಗೆ ತಾ ಕಾಸುಕಾಸಿಗೆ ಬಡ್ಡಿಯ ಕೊಳುತಲಿ ಬೇಕಾದ ವರಗಳ ಕೊಡುವನಿಗೆ 1 ಬುತ್ತಿ ಪೊಂಗಲುಗಳ ಮಾರುವಗೆ ಮತ್ತೆ ದರ್ಶನ ಕೊಡದೆ ಒದೆಸುವಗೆ ನಿತ್ಯ ಸ್ವಾಮಿಪುಷ್ಕರಣಿ ತೀರದಿ ನಿಂತು ಭೃತ್ಯವರ್ಗಗಳನು ಪೊರೆವವಗೆ 2 ಶಂಖ ಚಕ್ರ ವರ ಹಸ್ತನಿಗೆ ಶಂಕೆಯಿಲ್ಲದೆ ಅಭಯ ಕೊಡುವನಿಗೆ ಶಂಕರಮಿತ್ರಗೆ ಪರಮಪವಿತ್ರಗೆ ಸಂಕೋಲೆ ಹನುಮಗ್ಹಾಕಿಸಿದವಗೆ 3 ವೃಂದಾವನದಲಿ ಮೆರೆದವಗೆ ಮಂದಗಮನೆಯರ ಮೋಹಿಪಗೆ ಚಂದದ ಪೊಂಗೊಳಲೂದಿ ಗೋಪಿಯರ ಕಾಯ್ದ ಗೋಪಿ ಕಂದನಿಗೆ 4 ನಾಗರಾಜನ ಗಿರಿ ನಿಲಯನಿಗೆ ಯೋಗಿಗಳಿಗೆ ನಿಲುಕದ ಹರಿಗೆ ಸಾಗರನಿಲಯ ಗೋಪಾಲಕೃಷ್ಣವಿಠ್ಠಲ ಭೋಗಿಶಯನ ಲಕ್ಷ್ಮೀಪತಿಗೆ 5
--------------
ಅಂಬಾಬಾಯಿ
ಮಂಗಳಂ ಶ್ರೀ ಶ್ರೀನಿವಾಸಗೆ ಶೃಂಗಾರರೂಪಗೆ ಮಂಗಳಂ ಶ್ರೀ ಶ್ರೀನಿವಾಸಗೆ ಪ. ಪದ್ಮನಾಭ ಪದ್ಮ ಮುಖಗೆ ಪದ್ಮಪಾದಗೆ ಪದ್ಮವತಿಯ ವರಿಸಿದವಗೆ ಪದ್ಮೋದ್ಭವನ ಸೇವೆ ಕೊಂಬಗೆ 1 ಆರ್ತ ಜನರ ಪೊರೆಯುವನಿಗೆ ಪಾರ್ಥಸಾರಥಿಗೆ ಕೀರ್ತಿಸುವರ ಕಾಯ್ದೆನೆಂದು ಅರ್ಥಿಯಿಂದ ನಿಂತಿರುವಗೆ 2 ಯೋಗಿಗಳಿಗೆ ನಿಲುಕದವಗೆ ಭೋಗಿಶಯನಗೆ ಭಾಗವತರು ಸ್ತುತಿಸಲು ಅನು- ರಾಗದಿಂದ ಲಾಲಿಪನಿಗೆ 3 ಭಕ್ತ ಜನರ ಕಾಯುವನಿಗೆ ಮುಕ್ತಿದಾಯಕನಿಗೆ ನಿತ್ಯಮುಕ್ತ ನಿಗಮವೇದ್ಯ ಸತ್ಯಸಂಕಲ್ಪ ಹರಿಗೆ 4 ಭೂಪರೈವರ ಪೊರೆದವಗೆ ತಾಪಹರನಿಗೆ ಗೋಪಾಲಕೃಷ್ಣವಿಠ್ಠಲಗೆ ಶ್ರೀಪತಿ ಶ್ರೀ ಶ್ರೀನಿವಾಸಗೆ 5
--------------
ಅಂಬಾಬಾಯಿ
ಸಾಧಿಸು ಪರಲೋಕ ಮನವೆ ನೀ ಸಾಧಿಸು ಪರಲೋಕ ಪ ಮಾಧವನ ಮಹ ಪಾದದಾಸರಿಂದ ಶೋಧಿಸಿ ನಯದಿ ಸಂಪಾದಿಸಿ ಜ್ಞಾನವ ಅ.ಪ ಭೇದಬುದ್ಧಿ ಬಿಡೋ ಸುಜನರಿಂ ವಾದಿಸಿ ಕೆಡಬೇಡೋ ಆದರದಿಂದಲಿ ಸಾಧು ಸಂತರ ಸು ಬೋಧ ವಾಕ್ಯಗಳ ಮೋದದಿಂ ಕೇಳುತ 1 ರಾಗರಹಿತನಾಗೋ ಸಂಸಾರ ಭೋಗದಾಸೆ ನೀಗೋ ಯೋಗಿಗಳಿಗೆ ತಲೆವಾಗಿ ದಿಟದಿ ನೀ ಹೋಗಲಾಡಿಸಿ ಭವಬೇಗ ಸುಪಥಕ್ಹತ್ತಿ 2 ಕಾಮಿತಂಗಳ ಅಳಿಯೋ ತನುಧನ ಪ್ರೇಮಮೋಹ ಕಳೆಯೋ ಕಾಮಜನಕ ನಮ್ಮ ಭೂಮಿಜೆಪತಿ ಶ್ರೀ ರಾಮನಾಮಬೆಂಬ ವಿಮಾನವೇರಿ 3
--------------
ರಾಮದಾಸರು
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಪದುಮನಾಭನಪಾದಭಜನೆ ಸುಖವಯ್ಯಪ.ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆಬಿಲ್ಲಾಗಬೇಕು ಬಲ್ಲವರ ಒಳಗೆ ||ಮೆಲ್ಲನೇ ಮಾಧವನ ಮನದಿ ಮೆಚ್ಚಿಸಬೇಕುಬೆಲ್ಲವಾಗಿರಬೇಕು ಭಕುತಜನರೊಳಗೆ 1ಬುಧ್ಧಿಯಲಿ ತನ್ನ ಮನ ತಿದ್ದುತ್ತಲಿರಬೇಕುಮುದ್ದಾಗಬೇಕು ಮುನಿಯೋಗಿಗಳಿಗೆ ||ಮಧ್ವಮತದಬ್ಧಿಯೊಳು ಮೀನಾಗಿ ಇರಬೇಕುಶುದ್ಧ ಭಕುತಿಯಸುಕೃತಉಣಲುಬೇಕು2ವಿಷಯ ಭೋಗದ ತೃಣಕೆ ಉರಿಯಾಗಿ ಇರಬೇಕುಕುಶಲದಲಿ ಶ್ರೀ ಹರಿಯ ನೆನೆಯಬೇಕು ||ವಸುಧೆಯೊಳು ನಮ್ಮ ಪುರಂದರವಿಠಲನಹಸನಾಗಿ ನೆನೆನೆನೆದು ಸುಖಿಯಾಗಬೇಕು 3
--------------
ಪುರಂದರದಾಸರು