ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದೆನು ಕೃಷ್ಣನ್ನ | ದಣಿಯ ನೋಡಿದೆನು ಕೃಷ್ಣನ್ನ | ಮನದಣಿಯ ಪ. ಪಾಡಿದೆನು ವದನದಲಿ ಗುಣಗಳ ಮಾಡುತಲಿ ಸಾಷ್ಟಾಂಗ ಕಡು ಕೃಪೆ ಬೇಡಿದೆನು ಹರಿಯ ಅ.ಪ. ಅರುಣ ಉದಯದ ಮುನ್ನ ಯತಿಗಳೂ ಶರಣವತ್ಸಲನನ್ನು ಪೂಜಿಸಿ ಕರದಿ ಕಡಗೋಲನ್ನು ಪಿಡಿದಿಹ ಬಾಲರೂಪನಿಗೆ ತರತರದ ನೇವೇದ್ಯವರ್ಪಿಸಿ ತುರುಕರುಗಳಾರತಿ ಗೈಯ್ಯುತ ಪರಮಪುರುಷಗೆ ವಂದಿಸಲು ಈ ಚರಿತ ಮತ್ಸ್ಯನ್ನಾ 1 ಮಧ್ವರಾಯರ ಹೃದಯವಾಸಗೆ ಮುದ್ದು ಯತಿ ಪಂಚಾಮೃತಂಗಳ ಶುದ್ಧ ಗಂಗೋದಕದ ಸ್ನಾನವಗೈಸಿ ಸಡಗರದಿ ಮಧ್ಯೆ ಮಧ್ಯೆ ನೈವೇದ್ಯವರ್ಪಿಸಿ ಮುದ್ದು ತರಳರಿಗ್ಹೆಜ್ಜೆ ಪಂಕ್ತಿಯು ಅಗಣಿತ ಕೂರ್ಮರೂಪನ್ನಾ2 ಉದಯಕಾಲದಿ ಸರ್ವ ಜನಗಳು ಮುದದಿ ಮಧ್ವ ಸರೋವರದೊಳು ವಿಧಿಯಪೂರ್ವಕ ಸ್ನಾನ ಜಪ ತಪವಗೈದು ಮಾಧವನಾ ಉದಯದಾಲಂಕಾರ ದರ್ಶನ ಪದುಮನಾಭಗೆ ನಮನಗೈವರು ವಿಧಿಕುಲಕೆ ಉದ್ಧಾರಕರ್ತನು ವರಹನೆಂದಿವನಾ 3 ಪಾಲಿಸಲು ಬಾಲನ ಶ್ರೀ ಗೋ ಪಾಲಕೃಷ್ಣನು ಕಂಭದಲಿ ಲೀಲೆಯಿಂದಲಿ ಉದಿಸಿ ಖೂಳನ ಸೀಳೀ ತೊಡೆಯಲ್ಲಿ ಬಾಲೆಯನು ಕುಳ್ಳಿರಿಸಿಕೊಂಡಘ ಜಾಲಗಳ ಸುಡುವಂಥ ದೇವನು ಬಾಲರೂಪವ ಧರಿಸಿ ನಿಂತಿಹ ಲೋಲ ನರಹರಿಯ 4 ಅದಿತಿ ದ್ವಾದಶವರ್ಷ ತಪಸಿಗೆ ವಿಧಿ ಜನಕ ತಾ ಕುವರನಾದನು ಅದರ ತೆರದಲಿ ವ್ರತವ ಗೈದ ವೇದವತಿಗಿನ್ನು ಚದುರ ತನಯನ ವರವನಿತ್ತನು ಯದುಕುಲಾಗ್ರಣಿ ಅವರ ಭಕ್ತಿಗೆ ಒದಗಿ ಬಂದ ಮೂರ್ತಿವಾಮನನೆಂಬ ವಟುವರನ5 ದುಷ್ಟ ಕ್ಷತ್ರಿಯರನ್ನೆ ಕೊಲ್ಲುತ ಅಷ್ಟು ಭೂಮಿಯ ದಾನಗೈಯುತ ದಿಟ್ಟ ತಾನೆಲ್ಲಿರಲಿ ಎಂಬುವ ಯೋಚನೆಯ ತಳೆದು ಅಟ್ಟಿ ಅಬ್ಧಿಯ ಪುರವ ನಿರ್ಮಿಸಿ ಪುಟ್ಟ ರೂಪವ ತಾಳಿ ಬರುತಲಿ ಮೆಟ್ಟಿ ನಿಂತಿಹ ರಜತ ಪೀಠದಿ ಶ್ರೇಷ್ಠ ಭಾರ್ಗವನ 6 ಪಿತನ ಆಜ್ಞೆಯ ಪೊತ್ತು ಶಿರದಲಿ ಸತಿ ಅನುಜ ಸಹಿತದಿ ಜತನದಲಿ ವನವಾಸ ಮುಗಿಸುತ ದಶಶಿರನ ಕೊಂದ ಅತಿ ಸಹಾಯವ ಗೈದ ಶರಧಿಗೆ ಪ್ರತಿಯುಪಕಾರವನು ಕಾಣದೆ ಜತನದಲಿ ತಾ ನಿಲ್ಲೆ ನೆಲಸಿದ ಜಾನಕೀಪತಿಯ7 ಗೋಪಿಯರ ಉಪಟಳಕೆ ಸಹಿಸದೆ ಗೋಪನಂದನರೊಡನೆ ಕಾದುತ ತಾಪಪಡಿಸುವ ಕಂಸರನುಚರರಿಂದ ಕಳದೋಡಿ ಗೋಪಿ ಮೊಲೆ ಕೊಡುತರ್ದದಲಿ ಬಿಡೆ ಈ ಪರಿಯ ತಾಪಗಳ ಸಹಿಸದೆ ತಾಪಸರ ಪೂಜೆಗಳ ಬಯಸುತ ಬಂದ ಗೋಪತಿಯ 8 ವೇದ ಬಾಹಿರರಾದ ದುರುಳರು ವೇದ ಮಾರ್ಗವ ಪಿಡಿಯೆ ಸುರತತಿ ನೀ ದಯದಿ ಸಲಹೆಂದು ಪ್ರಾರ್ಥಿಸೆ ಜಿನ ವಿಮೋಹಕನೂ ವೇದರ್ಥವ ಗುಪ್ತದಲಿ ತಾ ಬೋಧಿಸುತ ಮೋಹಕವ ಕಲ್ಪಸಿ ಬುದ್ಧ ಪ್ರಮೋದನೆಂಬುವನಾ 9 ಚತುರ ಪಾದವು ಕಳದು ಧರ್ಮವು ಅತಿಮಲಿನವಾಗುತಲಿ ಕಲಿಜನ ಚತುರ ಜಾತಿಯ ಕಲೆತು ಕಂಗೆಡೆ ಭಕ್ತವರ್ಗಗಳು ಗತಿಯು ನೀನೆ ಪೊರೆಯೊ ಎಂದೆನೆ ಸತಿಯ ಹೆಗಲೇರುತಲಿ ಖಡ್ಗದಿ ಹತವಗೈಯ್ಯುತ ಖಳರ ಸುಜನರ ಪೊರೆದ ಕಲ್ಕಿಯನು10 ನೋಡಿದೆನು ವರ ಮಚ್ಛ ಕೂರ್ಮನ ನೋಡಿದೆನು ಧರಣೀಶ ನೃಹರಿಯ ನೋಡಿದೆನು ವಾಮನನ ಭಾರ್ಗವ ರಾಮಚಂದ್ರನನೂ ನೋಡಿದೆನು ಕಡಗೋಲ ಕೃಷ್ಣನ ಬುದ್ಧ ಕಲ್ಕಿಯ ನೋಡಿದೆನು ಗುರು ವರದ ಗೋಪಾಲಕೃಷ್ಣವಿಠ್ಠಲನ 11
--------------
ಅಂಬಾಬಾಯಿ
ಶ್ರೀ ಅಕ್ಷೋಭ್ಯ ತೀರ್ಥರ ಚರಿತ್ರೆ ಅಕ್ಷೋಭ್ಯ ತೀರ್ಥಗುರು ಸಾರ್ವಭೌಮರು ಎಮ್ಮ ರಕ್ಷಿಪ ಕೃಪಾನಿಧಿಗೆ ಶರಣು ಶರಣೆಂಬೆ ಪಕ್ಷೀಶ ವಾಹನ್ನ ಲಕ್ಷ್ಮೀಶ ಕಮಲಾಕ್ಷ ವಿಷ್ಣು ಆತ್ಮಗೆ ಪ್ರಿಯ ಸತ್ತತ್ವವಾದಿ ಪ ಅಖಿಳಗುಣ ಆಧಾರ ನಿರ್ದೋಷ ಶ್ರೀರಮಣ ಜಗದಾದಿ ಮೂಲಗುರು ಅಗುರು ಶ್ರೀ ಹಂಸ ವಾಗೀಶ ಸನಕಾದಿ ದೂರ್ವಾಸಾದಿಗಳ ಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ 1 ಅಚ್ಯುತ ಪ್ರೇಕ್ಷಾಖ್ಯ ಪುರುಷೋತ್ತಮತೀರ್ಥ ಅಚ್ಯುತ ಪ್ರೇಕ್ಷರ ಶಿಷ್ಯರೆಂದೆನಿಪ ಅಚ್ಯುತನ ಮುಖ್ಯಾಧಿಷ್ಠಾನ ಶ್ರೀಮಧ್ವ ಖಚರೇಂದ್ರ ಫಣಿಪಮೃಡ ಅಮರೇಂದ್ರವಂದ್ಯ 2 ಕರ ಅಬ್ಜಜರು ಪದ್ಮನಾಭನೃಹರಿ ಮಾಧವಾಕ್ಷೋಭ್ಯ ಈ ಮಹಾಗುರುಗಳು ಸರ್ವರಿಗು ಆನಮಿಪೆ ಸುಮನಸ ಶ್ರೇಷ್ಠರು ಮಹಿಯಲಿ ಪುಟ್ಟಿಹರು 3 ಸಾಧು ವೈದಿಕ ವೇದಾಂತ ಸತ್ತತ್ವ ಮತ ಮಧ್ವ ಮತವೇ ಅನ್ಯ ಯಾವುವೂ ಅಲ್ಲ ಎಂದು ನಿಶ್ಚೈಸಿ ಶೋಭನಭಟ್ಟಸ್ವಾಮಿ ಶಾಸ್ತ್ರಿ ಮೊದಲಾದವರು ಮಧ್ವಗೆರಗಿದರು 4 ಸೂರಿವರ ಶೋಭನ ಭಟ್ಟಾದಿಗಳಂತೆ ಸಾರಾಸಾರ ವಿವೇಕಿ ಗೋವಿಂದ ಶಾಸ್ತ್ರಿಯು ಮಹಾ ದೊಡ್ಡ ಪಂಡಿತರು ತಾನೂ ಎರಗಿ ಶರಣಾದರು ಮಧ್ವರಾಯರಲಿ 5 ಇಂಥಾ ಮಹಾತ್ಮರ ಇನ್ನೂ ಬಹು ಸಜ್ಜರನ ಉದ್ಧರಿಸಲಿಕ್ಕೇವೆ ಹರಿ ಅಜ್ಞೆಯಿಂದ ಈ ಧರೆಯಲ್ಲಿ ತೋರಿಹ ಮಧ್ವರಾಯರ ಶಾಸ್ತ್ರಿ ಬೇಡಿದರು ಸಂನ್ಯಾಸ ಕೊಡು ಎಂದು 6 ಸಚ್ಚಾಸ್ತ್ರ ಪ್ರವಚನ ಪಟು ವಿದ್ವನ್ಮಣಿಯು ನಿಶ್ಚಲ ಭಕ್ತಿಮಾನ್ ಸವೈರಾಗ್ಯ ವಿಪ್ರ ಅಚಲ ಸತ್ತತ್ವನಿಶ್ಚಯ ಜ್ಞಾನಿ ಶಾಸ್ತ್ರಿಗೆ ಅಕ್ಷೋಭ್ಯ ನಾಮನ ಇತ್ತರಾಚಾರ್ಯ 7 ಪ್ರಣವ ಮೂಲಾದಿ ಸುಮಂತ್ರ ಉಪದೇಶಿಸಿ ತನ್ನ ಮಠದಲ್ಲಿ ಅಕ್ಷೋಭ್ಯತೀರ್ಥರಿಗೆ ವನರುಹನಾಭರಿಂದ ನಾಲ್ಕನೇ ಸ್ಥಾನವ ಘನದಯದಿ ಇತ್ತರು ಆನಂದಮುನಿಯು 8 ಬದರಿಗೆ ಮೂರನೇ ಬಾರಿ ತೆರಳುವ ಪೂರ್ವ ಮಧ್ವ ಮುನಿ ನೇಮಿಸಿದ ಕ್ರಮದಿಂದಲೇವೆ ಮಾಧವ ತೀರ್ಥರು ವೇದಾಂತ ಪೀಠದಲಿ ಕುಳಿತುಜ್ವಲಿಸಿದರು 9 ಪದ್ಮನಾಭತೀರ್ಥರ ಪಾದಪದ್ಮಗಳಿಗೆ ಸದಾ ನಮೋ ನಮೋ ಎಂಬೆ ಇವರ ಪೀಳಿಗೆಯ ವಿದ್ಯಾಕುಶಲರು ಸೂರಿಗಳ ಚರಣಕ್ಕೆ ಸಂತೈಪರೆಮ್ಮ ಸದಾ ನಮೋ ಸರ್ವದಾ 10 ನರಹರಿತೀರ್ಥರು ಚರಣ ಸರಸೀರುಹದಿ ಶರಣಾದೆ ಕಾಯ್ವರು ಈ ಮಹಾನ್ ಇಹರು ವರಾಹ ತನಯಾ ಸರಿದ್ವರಾಕ್ಷೇತ್ರದಲಿ ಶ್ರೀ ವೃಂದಾವನದೊಳು ಹರಿಯ ಧ್ಯಾನಿಸುತ 11 ಮಾಧವತೀರ್ಥರ ಪಾದಪದ್ಮಗಳಿಗೆ ಸದಾನಮೋ ನಮೋ ಎಂಬೆ ಇವರ ಪೀಳಿಗೆಯ ಯತಿಗಳೂ ಭಕ್ತಿಮಾನ್ ಜ್ಞಾನಿಗಳ ಚರಣಕ್ಕೆ ಆದರದಿ ನಮಿಸುವೆ ಸದಾ ಪೊರೆವರೆಮ್ಮ 12 ಸುಲಭರು ಸುಜನರಿಗೆ ಶರಣರ ಸಲಹುವರು ಮಾಲೋಲನೊಲಿದಿಹ ಅಕ್ಷೋಭ್ಯತೀರ್ಥ ಬಲು ಖಿನ್ನ ಬ್ರಾಹ್ಮಣನು ಬ್ರಹ್ಮ ಹತ್ಯ ಮಾಡಿದವ ಕಾಲಲ್ಲಿ ಬಿದ್ದು ಶರಣಾದ ಗುರುಗಳಲಿ 13 ಗುರು ದಯಾನಿಧಿ ಅಕ್ಷೋಭ್ಯತೀರ್ಥರು ಆಗ ಶರಣಾದ ಪುರುಷನ ಪಶ್ಚಾತ್ತಾಪ ಖರೆಯೇ ಎಂಬುವುದನ್ನು ಜನರಿಗೆ ತಿಳಿಸಲು ಏರಿ ಮರ ನದಿಯಲಿ ಬೀಳೆ ಹೇಳಿದರು 14 ತನ್ನಯ ಮಹಾಪಾಪ ಕಳೆಯುವ ಗುರುಗಳು ಏನು ಹೇಳಿದರೂ ಮಾಡುವೆ ತಾನೆಂದು ಸನ್ನಮಿಸಿ ಗುರುಗಳಿಗೆ ನದಿ ಬದಿ ಮರಹತ್ತೆ ದೀನ ರಕ್ಷಕ ಗುರು ಇಳಿಯೆ ಹೇಳಿದರು 15 ವೃಕ್ಷದಿಂದಿಳಿದ ಆ ವಿಪ್ರಘಾತುಕನ ಮೇಲೆ ಅಕ್ಷೋಭ್ಯತೀರ್ಥರು ಶಂಖತೀರ್ಥವನ್ನ ಪ್ರೋಕ್ಷಿಸಿ ಆತನ ಮಹಾ ಬ್ರಹ್ಮಹತ್ಯಾ ದೋಷ ಕಳೆದರು ಪಂಕ್ತಿಯಲಿ ಸೇರಿಸಿದರು 16 ಶಂಖತೀರ್ಥದ ಮಹಿಮೆ ಅಲ್ಲಿದ್ದ ಜನರಿಗೆ ಶಂಕೆಯಲ್ಲದೆ ತಿಳಿಸಿ ಬಂದು ಬೇಡುವವರ ಡೊಂಕು ಕೊರತೆಗಳೆಲ್ಲ ನೀಗಿಸಿ ಯೋಗ್ಯದಿ ಶ್ರೀಕಾಂತನಲಿ ಭಕ್ತಿ ಪುಟ್ಟಿಸಿಹರು 17 ತಮ್ಮಲ್ಲಿ ಬೇಡುವ ಅಧಿಕಾರಿಯೋಗ್ಯರಿಗೆ ಶ್ರೀಮಧ್ವಶಾಸ್ತ್ರದ ದಾಢ್ರ್ಯ ಜ್ಞಾನ ಶ್ರೀ ಮನೋಹರನನ್ನ ಅಪರೋಕ್ಷಿಕರಿಸುವ ಸುಮಹಾ ಉಪಾಯವ ಅರುಹಿಹರು ದಯದಿ 18 ಮಧ್ವಸಿದ್ಧಾಂತ ಸ್ಥಾಪನ ಮಾತ್ರವಲ್ಲದೇ ವೇದ ವಂಚಕ ದುರ್ಮತಗಳ ಖಂಡನವ ಪೋದಕಡೆ ಮಾಡುತ್ತಾ ದಿಗ್ವಿಜಯ ಜಯಶೀಲ - ರೆಂದು ಮರ್ಯಾದೆಗಳ ಕೊಂಡಿಹರು ಜಗದಿ 19 ಅದ್ವೈತವಾದಿಯು ಶಾಂಕರ ಮಠಾಧೀಶ ವಿದ್ಯಾರಣ್ಯರು ಪ್ರಸಿದ್ಧ ಪಂಡಿತರು ಎದುರು ನಿಂತರು ಅಕ್ಷೋಭ್ಯ ತೀರ್ಥರ ಮುಂದೆ ವಾದಿಸಿದರು ಮುಳುಬಾಗಿಲು ಸಮೀಪ 20 ಶ್ವೇತಕೇತು ಉದ್ದಾಲಕರ ಸಂವಾದ ತತ್ವ ಮಸಿ ವಾಕ್ಯವೇ ವಾದದ ವಿಷಯ ವೇದಾಂತ ದೇಶಿಕರು ರಾಮಾನುಜೀಯತಿಯ ಅಧ್ಯಕ್ಷತೆಯಲ್ಲಿ ಸಭೆಯು ಕೂಡಿತ್ತು 21 ಛಾಂದೋಗ್ಯ ಉಪನಿಷತ್ತಲ್ಲಿರುವ ವಾಕ್ಯವು ಸಆತ್ಮಾ ತತ್ವಮಸಿ ಎಂಬುವಂಥಾದ್ದು ಭೇದ ಬೋಧಕವೋ ಅಭೇದ ಬೋಧಕವೋ ಎಂದು ವಾದವು ಆ ಈರ್ವರಲ್ಲಿ 22 ಆತ್ಮ ಶಬ್ದಿತ ನಿಯಾಮಕಗು ನಿಯಮ್ಯ ಜೀವನಿಗೂ ಭೇದವೇ ಬೋಧಿಸುವುದು ಆ ವಾಕ್ಯವೆಂದು ಸಿದ್ಧಾಂತ ಬಹುರೀತಿ ಸ್ಥಾಪಿಸಿದರು ಅಕ್ಷೋಭ್ಯರು ಸೋತಿತು ವಿದ್ಯಾರಣ್ಯರ ಐಕ್ಯವಾದ 23 ಅಸಿನಾತತ್ವ ಮಸಿನಾ ಪರಜೀವಪ್ರಭೇದಿನಾ ವಿದ್ಯಾರಣ್ಯ ಮಹಾರಣ್ಯಂ ಅಕ್ಷೋಭ್ಯ ಮುನಿರಚ್ಛಿನತ್ ಎಂದು ಬರೆದರು ತಮ್ಮಯ ಗ್ರಂಥದಲ್ಲಿ ಮಧ್ಯಸ್ತ ವೇದಾಂತದೇಶಿಕ ಸ್ವಾಮಿಗಳು 24 ಇಳೆಯ ಸಜ್ಜನರಿಗೆ ಜಯತೀರ್ಥರನಿತ್ತ ಮಾಲೋಲಪ್ರಿಯ ಅಕ್ಷೋಭ್ಯರ ಮಹಿಮೆ ಅಲ್ಪಮತಿ ನಾನರಿಯೆ ಇಲ್ಲಿ ಒಂದೋ ಎರಡೋ ಸ್ಥಾಲಿ ಪುಲೀಕ ನ್ಯಾಯದಲಿ ಪೇಳಿಹುದು 25 ನದಿ ದಡದಿ ಕುಳಿತಿದ್ದ ಅಕ್ಷೋಭ್ಯತೀರ್ಥರು ಎದುರಾಗಿ ನದಿಯಲ್ಲಿ ಆಚೆ ದಡದಿಂದ ಕುದುರೆ ಸವಾರನು ವರ್ಚಸ್ವಿ ಯುವಕನು ಬೆದರದೆ ಪ್ರವಾಹದಲಿ ಬರುವುದು ಕಂಡರು 26 ಕುದುರೆ ಮೇಲ್ ಆಸೀನನಾಗಿದ್ದ ಯುವಕನು ಕ್ಷುತ್‍ತೃಷಿ ಶಮನಕ್ಕೆ ಯತ್ನ ಮಾಡುತ್ತಾ ಉದಕವ ಕೈಯಿಂದ ತುಂಬಿಕೊಳ್ಳದಲೇ ಎತ್ತುಗಳು ಕುಡಿವಂತೆ ಬಾಯಿ ಹಚ್ಚಿದನು 27 ಮಾಧವ ಮಧ್ವರು ಮೊದಲೇ ಸೂಚಿಸಿದಂತೆ ಇಂದು ಆ ಕುರುಹರಿತು ಅಕ್ಷೋಭ್ಯರು ಇದು ಏನು ಪಶುವಂತೆ ಎಂದು ಧ್ವನಿಗೂಡಲು ಹಿಂದಿನ ಜನ್ಮ ಯುವಕಗೆ ನೆನಪು ಬಂತು 28 ಪಶು ಶಬ್ದ ಗುರುಮುಖದಿಂಬಂದಲಾಕ್ಷಣ ಪೂರ್ವ ಸಂಸ್ಕಾರ ಪ್ರತಿಭೆಯು ಉದಯವಾಯ್ತು ದಶಪ್ರಮತಿಗಳ ತಾನು ಎತ್ತಾಗಿ ಸೇವಿಸಿದ್ದು ಹಸನಾಗಿ ಟೀಕೆ ಬರೆಯಲಾಜÉ್ಞ ಕೊಂಡದ್ದು 29 ನಗಾರಿಸಮ ಬಲಿಯುವಕನು ಪ್ರವಾಹದ ವೇಗ ಲೆಕ್ಕಿಸದಲೇ ದಡಕೆ ತಾ ಬಂದು ಮುಗಿದುಕರ ಬಾಗಿಶಿರ ನಮಿಸಿ ಅಕ್ಷೋಭ್ಯರ ಆಗಲೇ ಸಂನ್ಯಾಸ ಕೊಡಲು ಬೇಡಿದನು 30 ಗಾಧಿ ಅರ್ಜುನ ಸಮ ಬಲರೂಪದಲಿ ತೋರ್ಪ ಈತ ರಾಯರ ಸುತನಾದರೂ ವೈರಾಗ್ಯ ಯುತ ಭಕ್ತಿಮಾನ್ ಸುಶುಭಲಕ್ಷಣನು ಎಂದು ಹರಿ ಮಧ್ವನಿಯಮಿತ ಅವಗೆ ಕೊಟ್ಟರು ಸಂನ್ಯಾಸ 31 ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವ ದಯಾಶೀಲ ಹೊಸಯತಿಗೆ ಇತ್ತು ಅಭಿಷೇಕ ಅಕ್ಷೋಭ್ಯ ಗುರುಮಾಡೆ ಗಗನದಿಂ ಪೂವರ್ಷ ಜಯ ಘೊಷ ಹರಡಿತು ಪರಿಮಳ ಸುಗಂಧ 32 ಶ್ರೀಮಧ್ವಾಚಾರ್ಯರು ಬೋಧಿಸಿ ತೋರಿಸಿದ ರಮಾಪತಿ ಪೂಜಾಸತ್ತತ್ವವಾದ ದುರ್ಮತ ಖಂಡನದ ರೀತಿಯ ಜಯಾರ್ಯರಿಗೆ ಸುಮ್ಮುದದಿ ಅರುಹಿದರು ಗುರುಸಾರ್ವಭೌಮ 33 ಶೀಲತಮ ಗುರುವರ್ಯ ಅಕ್ಷೋಭ್ಯತೀರ್ಥರು ಇಳೆಯಲ್ಲಿ ಮಧ್ವಮತ ಹರಿಭಕ್ತಿಯನ್ನ ಬೆಳೆಸಲು ಪ್ರತ್ಯೇಕ ಮಠವ ಸ್ಥಾಪಿಸಿದರು ತ್ರೈಲೋಕ ಭೂಷಣ ತೀರ್ಥರ ಮೊದಲ್ಮಾಡಿ34 ಆದಿ ಮಠ ಹರಿನೈದು ಸಮೀಪ ಪಟ್ಟವ ಆಳಿ ಹನ್ನೊಂದು ನೂರು ಅರವತ್ತೇಳ ಶಕವರುಷ ವದ್ಯ ಪಂಚಮಿ ಮಾರ್ಗಶಿರ ವಿಶ್ವಾವಸುವಲ್ಲಿ ಮಧ್ವ ಹೃದಯಾಬ್ಜಗನ ಪುರವ ಐದಿದರು 35 ಮತ್ತೊಂದು ಅಂಶದಲಿ ಮಳಖೇಡ ಗ್ರಾಮದಲಿ ನದಿ ತೀರದಲಿ ಹರಿಯ ಧ್ಯಾನ ಮಾಡುತ್ತಾ ಬಂದು ಬೇಡುವವರಿಷ್ಟಾರ್ಥ ಪೂರೈಸುತ ವೃಂದಾವನದಲ್ಲಿ ಕುಳಿತಿಹರು ಕರುಣಿ 36 ಶಾಶ್ವತ ಸರ್ವಾಶ್ರಯ ಗುಣಗಣಾರ್ಣವ ಅನಘ ಜೀವ ಜಡ ಭಿನ್ನ ಪರಮಾತ್ಮ ವಿಧಿತಾತ ಮಧ್ವಹೃತ್ಪದ್ಮಗ ಶ್ರೀ ಪ್ರಸನ್ನ ಶ್ರೀನಿವಾಸಗೆ ಸರ್ವದಾಪ್ರಿಯ ಅಕ್ಷೋಭ್ಯ ಗುರೋ ಶರಣು 37 ಪ || ಶ್ರೀ ಅಕ್ಷೋಭ್ಯ ತೀರ್ಥಚರಿತೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು